ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳ ತೆರವಿಗೆ ಸಿದ್ಧ: ರಷ್ಯಾ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತುಸಭೆಯಲ್ಲಿ ಹೇಳಿಕೆ
Last Updated 5 ಮಾರ್ಚ್ 2022, 13:04 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಉಕ್ರೇನ್‌ನ ಪೂರ್ವ ಭಾಗದಲ್ಲಿನ ನಗರಗಳಾದ ಹಾರ್ಕಿವ್‌ ಹಾಗೂ ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರ ವಿದೇಶಿ ಪ್ರಜೆಗಳ ತೆರವಿಗೆ ತಾನು ಸಿದ್ಧ’ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (ಯುಎನ್‌ಎಸ್‌ಸಿ) ರಷ್ಯಾ ತಿಳಿಸಿದೆ.

ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರ ದೇಶಗಳ ಪ್ರಜೆಗಳ ತೆರವಿಗಾಗಿ ಉಕ್ರೇನ್‌ ಗಡಿ ಸಮೀಪದ ಆಯ್ದ ಸ್ಥಳಗಳಲ್ಲಿ ಬಸ್‌ಗಳನ್ನು ನಿಯೋಜಿಸಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ರಷ್ಯಾದ ರಾಯಭಾರಿಯ ಕಾಯಂ ಪ್ರತಿನಿಧಿ ವ್ಯಾಸಿಲಿ ನೆಬೆಂಜಿಯಾ ಅವರು ತಿಳಿಸಿದರು.

ಉಕ್ರೇನ್‌ನಲ್ಲಿನ ಪರಿಸ್ಥಿತಿ ಹಿನ್ನೆಲೆಯಲ್ಲಿ 15 ದೇಶಗಳ ಸದಸ್ಯ ಬಲದ ಭದ್ರತಾ ಮಂಡಳಿ ತುರ್ತುಸಭೆಯನ್ನು ಆಯೋಜಿಸಿತ್ತು.

‘ವಿದೇಶದ ಪ್ರಜೆಗಳನ್ನು ಯಾವುದೇ ತೊಂದರೆಯಿಲ್ಲದೇ ಉಕ್ರೇನ್‌ನಿಂದ ಸ್ಥಳಾಂತರಗೊಳಿಸಲು ರಷ್ಯಾ ಮಿಲಿಟರಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದೂ ಅವರು ಹೇಳಿದರು.

‘ರಷ್ಯಾದ ಬೆಲ್‌ಗೊರೊಡ್‌ ಪ್ರದೇಶದಲ್ಲಿ 130 ಬಸ್‌ಗಳನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಗಡಿಭಾಗದಲ್ಲಿ ತಾತ್ಕಾಲಿಕ ವಸತಿ, ಆಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ಕ್ಲಿನಿಕ್‌ಗಳು ಹಾಗೂ ಅಗತ್ಯ ಔಷಧಗಳ ದಾಸ್ತಾನು ಸಹ ಇದೆ. ಉಕ್ರೇನ್‌ನಿಂದ ಕರೆದುಕೊಂಡು ಬಂದವರನ್ನು ಆಯಾ ದೇಶಗಳಿಗೆ ಕಳಿಸುವ ಏರ್ಪಾಡು ಮಾಡಲಾಗಿದೆ’ ಎಂದು ಅವರು ಸಭೆಗೆ ತಿಳಿಸಿದರು.

‘ಉಕ್ರೇನ್‌ ಪ್ರಜೆಗಳು ಹಾರ್ಕಿವ್‌ ಹಾಗೂ ಸುಮಿ ನಗರಗಳಲ್ಲಿ 3,700ಕ್ಕೂ ಹೆಚ್ಚು ಭಾರತೀಯರನ್ನು ಒತ್ತೆ ಇರಿಸಿಕೊಂಡಿದ್ದಾರೆ’ ಎಂದು ಆರೋಪಿಸಿದ ಅವರು, ‘ಜನರು ನಗರಗಳನ್ನು ತೊರೆಯಲು ಉಗ್ರಗಾಮಿಗಳು ಬಿಡುತ್ತಿಲ್ಲ. ಇದು ಉಕ್ರೇನ್‌ ಪ್ರಜೆಗಳು ಮಾತ್ರವಲ್ಲ ವಿದೇಶಿಯರ ಮೇಲೂ ಪರಿಣಾಮ ಬೀರುತ್ತದೆ ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT