ಶನಿವಾರ, ಜುಲೈ 2, 2022
27 °C
ಪುಟಿನ್‌ ಯುದ್ಧಾಪರಾಧಿ– ಬೈಡನ್‌ ಹೇಳಿಕೆ; ಅಕ್ಷಮ್ಯ, ಸ್ವೀಕಾರಾರ್ಹವಲ್ಲ –ಕ್ರೆಮ್ಲಿನ್‌ ತಿರುಗೇಟು

ಉಕ್ರೇನ್‌ ಬಿಕ್ಕಟ್ಟು: ಅಮೆರಿಕ– ರಷ್ಯಾ ವಾಕ್ಸಮರ

ಎಪಿ/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌, ಮಾಸ್ಕೊ: ಉಕ್ರೇನ್‌ ಮೇಲೆ ಸೇನಾ ದಾಳಿ ಮುಂದುವರಿದಿರುವಂತೆಯೇ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ‘ಯುದ್ಧಾ‍ಪರಾಧಿ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಜರಿದಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ರಷ್ಯಾ, ‘ಬೈಡನ್‌ ಹೇಳಿಕೆಯು ಅಕ್ಷಮ್ಯ ಮತ್ತು ಸ್ವೀಕಾರಾರ್ಹ ಅಲ್ಲ’ ಎಂದಿದೆ. 

ಶ್ವೇತಭವನದಲ್ಲಿ ಬುಧವಾರ ಮಾಧ್ಯಮದ ಪ್ರಶ್ನೆಗೆ ಉತ್ತರಿಸುವ ವೇಳೆ ಬೈಡನ್‌, ‘ನನ್ನ ಪ್ರಕಾರ ಪುಟಿನ್‌ ಯುದ್ಧಾ‍ಪರಾಧಿ’. ಅವರು ತಮಗೆ ಸಂಬಂಧಪಡದ ವಿಷಯದಲ್ಲಿ ಮೂಗು ತೂರಿಸಿದ್ದಾರೆ’ ಎಂದು ಟೀಕಿಸಿದರು. ಅಮೆರಿಕದ ಅಧ್ಯಕ್ಷರು ಮೊದಲ ಬಾರಿಗೆ ಪುಟಿನ್‌ ವಿರುದ್ಧ ಕಟುವಾದ ಪದಗಳಿಂದ ವಾಗ್ದಾಳಿ ನಡೆಸಿದರು.

‘ಉಕ್ರೇನ್‌ನಲ್ಲಿ ದೌರ್ಜನ್ಯಗಳು ಹೆಚ್ಚುತ್ತಿವೆ. ಉಕ್ರೇನ್‌ ಅಧ್ಯಕ್ಷರು ಹೆಚ್ಚಿನ ಸಹಾಯಕ್ಕಾಗಿ ಅಮೆರಿಕದ ಕಾಂಗ್ರೆಸ್‌ಗೆ ಮೊರೆ ಇಟ್ಟಿದ್ದಾರೆ. ರಷ್ಯಾದ ಪಡೆಗಳು ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ನಡೆಸಿವೆ. ವೈದ್ಯರನ್ನೂ ಒತ್ತೆಯಾಳಾಗಿ ಇರಿಸಿಕೊಂಡಿವೆ. ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ನಾವು ಹೆಚ್ಚಿನ ಸಹಾಯ ಮಾಡುತ್ತೇವೆ’ ಎಂದು ಬೈಡನ್‌ ವಾಗ್ದಾನ ಮಾಡಿದರು.

ಇದರ ಬೆನ್ನಲ್ಲೇ ತಕ್ಷಣದ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಪಿಸಾಕಿ ಅವರು, ‘ಅದು ಅಧ್ಯಕ್ಷರ ವೈಯುಕ್ತಿಕ ಹೇಳಿಕೆ’ ಎಂದು ಸಮಜಾಯಿಷಿ ನೀಡಿದರು.

ಪುಟಿನ್ ಅವರ ಆಕ್ರಮಣದ ಕ್ರಮಗಳನ್ನು ‘ಯುದ್ಧ ಅಪರಾಧ’ವೆಂದು ಘೋಷಿಸಲು ಶ್ವೇತಭವನವು ಹಿಂಜರಿಯಿತು. ‘ಇದು ಸಂಶೋಧನೆಯು ಅಗತ್ಯವಿರುವ ಕಾನೂನಾತ್ಮಕ ಪದವಾಗಿದೆ’ ಎಂದು ಜೆನ್‌ ಪಿಸಾಕಿ ಹೇಳಿದರು.

‘ಬೇರೆ ರಾಷ್ಟ್ರದ ಮೇಲೆ ಅತಿಕ್ರಮಣದ ಮೂಲಕ ಕ್ರೂರ ಸರ್ವಾಧಿಕಾರಿ ಧೋರಣೆಯನ್ನು ಪುಟಿನ್‌ ಪ್ರದರ್ಶಿಸಿದ್ದಾರೆ. ಈ ನಡೆಯ ಕುರಿತು ಬೈಡನ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ’ ಎಂದು ಜೆನ್‌ ಪಿಸಾಕಿ ವಿವರಣೆ ನೀಡಿದರು.

ಬೈಡನ್‌ ಹೇಳಿಕೆಗೆ ರಷ್ಯಾ ಖಂಡನೆ
ಉಕ್ರೇನ್‌ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿರುವುದಕ್ಕೆ ವ್ಲಾಡಿಮಿರ್‌ ಪುಟಿನ್‌ ಅವರನ್ನು ‘ಯುದ್ಧಾಪರಾಧಿ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕರೆದಿರುವುದನ್ನು ರಷ್ಯಾ ತೀವ್ರವಾಗಿ ಖಂಡಿಸಿದೆ.

ರಷ್ಯಾ ನಾಶಕ್ಕೆ ಪಶ್ಚಿಮದವರ ಯತ್ನ: ಪುಟಿನ್‌ ಆರೋಪ
ರಷ್ಯಾ ನಾಶಪಡಿಸಲು ಪಶ್ಚಿಮದ ರಾಷ್ಟ್ರಗಳು ಬಯಸುತ್ತಿವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಗಂಭೀರ ಆರೋಪ ಮಾಡಿದರು.

ವಿಡಿಯೊ ಸಂವಾದದಲ್ಲಿ ದೇಶ ಉದ್ದೇಶಿ ಮಾತನಾಡಿರುವ ಅವರು, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾ ವಿರುದ್ಧ ರಹಸ್ಯವಾಗಿ ಕೆಲಸ ಮಾಡುತ್ತಿವೆ. ಇದಕ್ಕೆ ಕೈಜೋಡಿಸುವ ‘ದುಷ್ಟರು ಮತ್ತು ದೇಶದ್ರೋಹಿ’ಗಳ ನಿರ್ಮೂಲನೆಯ ಮೂಲಕ ರಷ್ಯಾವನ್ನು ಪರಿಶುದ್ಧಗೊಳಿಸಲಾಗುವುದು ಎಂದು ಪುಟಿನ್‌ ಕಠಿಣ ಎಚ್ಚರಿಕೆ ನೀಡಿದರು.

ಉಕ್ರೇನ್‌ ಮೇಲಿನ ಆಕ್ರಮಣ ಮೂರನೇ ವಾರಕ್ಕೆ ಕಾಲಿಟ್ಟಿರುವಾಗ ರಷ್ಯಾ ಆರ್ಥಿಕ ಕುಸಿತದ ಸಮಸ್ಯೆ ಎದುರಿಸುತ್ತಿರುವ ಬೆನ್ನಲ್ಲೇ, ಪುಟಿನ್‌ ದೇಶದೊಳಗಿನ ತಮ್ಮ ಟೀಕಾಕಾರರ ವಿರುದ್ಧ ಹರಿಹಾಯ್ದರು. ರಷ್ಯಾ ನಾಶಪಡಿಸಲು ಪಶ್ಚಿಮವು ಬಯಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. 

‘ಯಾವುದೇ ಜನರು, ಅದರಲ್ಲೂ ವಿಶೇಷವಾಗಿ ರಷ್ಯಾದ ಜನರು ಯಾವಾಗಲೂ ದೇಶಭಕ್ತರು. ಆಕಸ್ಮಿಕವಾಗಿ ಬಾಯೊಳಗೆ ಬಂದ ಸೊಳ್ಳೆಯನ್ನು ಉಗಿಯುವಂತೆ ದುಷ್ಟರು ಮತ್ತು ದೇಶದ್ರೋಹಿಗಳನ್ನು ಹೊರದಬ್ಬುತ್ತಾರೆ’ ಎಂದು ಪುಟಿನ್ ಹೇಳಿದರು.

‘ಸಮಾಜದ ಸ್ವಯಂ ಶುದ್ಧೀಕರಣವು ಸ್ವಾಭಾವಿಕ ಮತ್ತು ಅತ್ಯಗತ್ಯ ಕೂಡ. ನಮ್ಮ ಒಗ್ಗಟ್ಟಿನಿಂದ ಯಾವುದೇ ಸವಾಲನ್ನು ಎದುರಿಸಲು ಸಾಧ್ಯ. ಇದು ನಮ್ಮ ದೇಶವನ್ನು ಬಲಪಡಿಸುತ್ತದೆ ಎನ್ನುವುದನ್ನು ನಾನು ಅರಿತಿರುವೆ’ ಎಂದು ಹೇಳಿದರು.

ರಷ್ಯಾದ ಸರ್ಕಾರಿ ಸುದ್ದಿ ವಾಹಿನಿ ‘ಒನ್‌’ನಲ್ಲಿ ನಿರ್ಮಾಪಕಿ ಮರೀನಾ ಓವ್ಸ್ಯಾನಿಕೋವಾ ಅವರು ಸುದ್ದಿ ವಾಚಕಿಯ ಹಿಂದೆ ನಿಂತು ಯುದ್ಧ ವಿರೋಧಿಸಿ ‘ಅವರು ನಿಮಗೆ ಸುಳ್ಳು ಹೇಳುತ್ತಿದ್ದಾರೆ’ ಎಂಬ ಭಿತ್ತಿಫಲಕವನ್ನು ನೇರ ಪ್ರಸಾರದಲ್ಲಿ ಪ್ರದರ್ಶಿಸಿದ ಎರಡು ದಿನಗಳ ನಂತರ ಪುಟಿನ್‌ ಅವರಿಂದ ಕಠಿಣ ಎಚ್ಚರಿಕೆ ಹೊರ ಬಿದ್ದಿದೆ.

ದಿನದ ಬೆಳವಣಿಗೆಗಳು
*ಉಕ್ರೇನ್‌ ಮೇಲೆ ಯುದ್ಧ ನಡೆಸುತ್ತಿರುವುದಕ್ಕೆ ರಷ್ಯಾವನ್ನು ಮಾನವ ಹಕ್ಕುಗಳ ಸಂಸ್ಥೆಯಿಂದ 47 ರಾಷ್ಟ್ರಗಳಿರುವ ಯುರೋಪಿಯನ್‌ ಕೌನ್ಸಿಲ್‌ ವಜಾಗೊಳಿಸಿದೆ

* ಉಕ್ರೇನ್‌ನಲ್ಲಿ ಸೇನಾ ಕಾರ್ಯಾಚರಣೆ ಯಶಸ್ವಿಯಾಗಿದೆ. ರಷ್ಯಾ ಬೆದರಿಸಲು ಉಕ್ರೇನ್‌ನ್ನು ‘ಚಿಮ್ಮು ಹಲಗೆ’ಯಾಗಿಸಲು ಆಸ್ಪದ ಕೊಡುವುದಿಲ್ಲ. ಜಾಗತಿಕ ಪ್ರಾಬಲ್ಯಕ್ಕೆ ಯತ್ನಿಸಿದ್ದ ಪಶ್ಚಿಮ ರಾಷ್ಟ್ರಗಳ ಪ್ರಯತ್ನ ವಿಫಲ. ಆರ್ಥಿಕ ನಿರ್ಬಂಧಗಳೂ ಫಲಿಸಿಲ್ಲ– ವ್ಲಾಡಿಮಿರ್‌ ಪುಟಿನ್‌ 

* ರಷ್ಯಾಷ ಫೆಡರಲ್ ಮೆಡಿಕಲ್-ಬಯೋಲಾಜಿಕಲ್ ಏಜೆನ್ಸಿಯ ಮುಖ್ಯಸ್ಥ ವೆರೋನಿಕಾ ಸ್ಕ್ವೊರ್ಟ್ಸೊವಾ ಅವರೊಂದಿಗೆ ಪುಟಿನ್‌ ಮಹತ್ವದ ಸಭೆ ನಡೆಸಿದರು. ಆಂಪ್ಲಿಟೆಸ್ಟ್ ಸಿಸ್ಟಮ್ ಮತ್ತು ಮಿರ್-19 ಆಂಟಿವೈರಲ್ ಔಷಧಿ ಬಗ್ಗೆ ಚರ್ಚಿಸಿದರು

* ಉಕ್ರೇನಿನ 111 ವಿಮಾನಗಳು, 160 ಡ್ರೋನ್‌ಗಳು, 1,000ಕ್ಕೂ ಹೆಚ್ಚು ಟ್ಯಾಂಕ್‌ಗಳು, ಮಿಲಿಟರಿ ವಾಹನಗಳು ನಾಶ– ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಐಗೋರ್ ಕೊನಾಶೆಂಕೋವ್

* ಕಳೆದ 24 ತಾಸುಗಳಲ್ಲಿ 90 ಸಾವಿರ ನಿರಾಶ್ರಿತರು ಉಕ್ರೇನ್‌ ತೊರೆದಿದ್ದಾರೆ. ಈವರೆಗೆ 40 ಲಕ್ಷ ನಿರಾಶ್ರಿತರು ದೇಶ ಬಿಟ್ಟಿದ್ದಾರೆ– ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ 

* ಯುದ್ಧ ಆರಂಭವಾದ ಮೇಲೆ ರಷ್ಯಾ ಮತ್ತು ಅಮೆರಿಕದ ನಡುವೆ ಮೊದಲ ಬಾರಿಗೆ ಉನ್ನತಮಟ್ಟದ ಮಾತುಕತೆ ನಡೆದಿದೆ.  ‘ರಷ್ಯಾ ರಾಜತಾಂತ್ರಿಕತೆಯ ಬಗ್ಗೆ ಗಂಭೀರವಾಗಿದ್ದರೆ, ಉಕ್ರೇನ್ ಮೇಲೆ ದಾಳಿ ನಿಲ್ಲಿಸಬೇಕು’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್, ರಷ್ಯಾದ ಜನರಲ್‌ ನಿಕೊಲಾಯ್ ಪತ್ರುಶೇವ್‌ ಅವರಿಗೆ ಸೂಚಿಸಿರುವುದಾಗಿ ಶ್ವೇತಭವನ ಹೇಳಿದೆ

* ರಷ್ಯಾದ ಮತ್ತೊಬ್ಬ ಮೇಜರ್ ಜನರಲ್ ಒಲೆಗ್ ಮಿತ್ಯೇವ್‌ ಹತ್ಯೆ– ಉಕ್ರೇನ್‌ ರಕ್ಷಣಾ ಸಚಿವಾಲಯ

* ಉಕ್ರೇನ್‌ ಯುದ್ಧ ವರದಿಗೆ ಹೋಗಿದ್ದ ‘ಫಾಕ್ಸ್‌ ಸುದ್ದಿ’ ಟಿ.ವಿಯ ಇಬ್ಬರು ಪತ್ರಕರ್ತರು ಕೀವ್‌ ಬಳಿ ಗುಂಡಿನ ದಾಳಿಗೆ ಬಲಿಯಾಗಿದ್ದು, ಮತ್ತೊಬ್ಬ ವರದಿಗಾರ ಗಾಯಗೊಂಡಿದ್ದಾರೆ 

 __

ಅಂತರರಾಷ್ಟ್ರೀಯ ಖ್ಯಾತಿಯ ಪುಟಿನ್‌ ಒಬ್ಬ ಬುದ್ಧಿವಂತ ಮತ್ತು ಸುಸಂಸ್ಕೃತ ವ್ಯಕ್ತಿ. ಪುಟಿನ್‌ ಬಗ್ಗೆ ಬೈಡನ್‌ ನೀಡಿರುವ ಸ್ವೀಕಾರಾರ್ಹವಲ್ಲದ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ
–ಡಿಮಿಟ್ರಿ ಪೆಸ್ಕೋವ್‌, ರಷ್ಯಾ ವಕ್ತಾರ

*

ಪುಟಿನ್‌ ಬಗೆಗಿನ ಬೈಡನ್‌ ಅವರ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯವೆಂದು ಭಾವಿಸುವೆ. ಅದು ಅವರ ಹೃದಯದ ಮಾತಾಗಿದೆ
–ಜೆನ್‌ ಪಿಸಾಕಿ, ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು