ಭಾನುವಾರ, ನವೆಂಬರ್ 28, 2021
20 °C

ಕಾರಿಗೆ ವಿಸ್ಕಿ ತ್ಯಾಜ್ಯದ ಶಕ್ತಿ ; ಸ್ಕಾಟ್‌ಲೆಂಡ್‌ನಲ್ಲಿ ಸಿದ್ಧವಾಗುತ್ತಿದೆ ಇಂಧನ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಎಡಿನ್‌ಬರ್ಗ್‌: 'ಕುಡಿದು ವಾಹನ ಚಾಲನೆ ಮಾಡಬಾರದು', ಆದರೆ ಕುಡಿತದ ಸರಕೇ ವಾಹನದ ಇಂಧನವಾದರೆ? ಸ್ಕಾಟ್‌ಲೆಂಡ್‌ನ ಬಯೋಟೆಕ್‌ ಕಂಪನಿ ಇಂಥದೊಂದು ಪ್ರಯತ್ನ ನಡೆಸುತ್ತಿದೆ. ವಿಸ್ಕಿ ತಯಾರಿಕೆಯಲ್ಲಿ ಉಳಿಯುವ ಉಪ ಉತ್ಪನ್ನಗಳಿಂದ ಕಾರುಗಳಿಗೆ ಇಂಧನ ಅಭಿವೃದ್ಧಿ ಪಡಿಸಲಾಗುತ್ತಿದೆ.

ಸ್ಕಾಟ್‌ಲೆಂಡ್‌ನ ಮದ್ಯ ತಯಾರಿಕೆಯಲ್ಲಿ ಬಾರ್ಲಿ, ಯೀಸ್ಟ್‌ ಹಾಗೂ ನೀರನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಿಪ್ಪೆಯಂತಹ ಸಂಗ್ರಹ ಮತ್ತು ಸಿಹಿಯಾದ ದ್ರವ (ಪಾಟ್‌ ಏಲ್‌) ಸೇರಿದಂತೆ ಉಪ ಉತ್ಪನ್ನ ಉಳಿಯುತ್ತವೆ. ಈ ತ್ಯಾಜ್ಯವನ್ನು ಪ್ರಾಣಿಗಳಿಗೆ ಆಹಾರವಾಗಿ ಬಳಸಲಾಗುತ್ತದೆ, ಇಲ್ಲವೇ ಸಾಗರಕ್ಕೆ ಹರಿಯ ಬಿಡಲಾಗುತ್ತದೆ.

ಆದರೆ, ಈ ತ್ಯಾಜ್ಯದಿಂದ ಅಸಿಟೋನ್‌, ಬ್ಯುಟನಾಲ್‌ ಹಾಗೂ ಎಥನಾಲ್‌ ರಾಸಾಯನಿಕಗಳನ್ನು ತಯಾರಿಸಬಹುದಾಗಿದೆ. ಇಂಧನ, ಆಹಾರ ತಯಾರಿಕೆಯಿಂದ ಔಷಧಿ ಹಾಗೂ ಕಾಸ್ಮೆಟಿಕ್‌ಗಳ ವರೆಗೂ ಬಹುತೇಕ ಎಲ್ಲ ವಸ್ತುಗಳ ತಯಾರಿಕೆಯಲ್ಲಿ ಈ ರಾಸಾಯನಿಕಗಳ ಬಳಕೆಯಾಗುತ್ತದೆ.

ಎಬಿಇ ಫರ್ಮೆಂಟೇಷನ್‌ ಎಂದು ಕರೆಯುವ ಹುಳಿಗೊಳಿಸುವ ಪ್ರಕ್ರಿಯೆಯ ಮೂಲಕ ರಾಸಾಯನಿಕ ತಯಾರಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಅಗತ್ಯವಿರುವ ಕಚ್ಚಾ ವಸ್ತುಗಳಿಗೆ ತಗಲುವ ಅಧಿಕ ವೆಚ್ಚದ ಕಾರಣಗಳಿಂದ ಇದನ್ನು ಕೈಗೆಟುಕದ ವಿಧಾನ ಎಂದೇ ಪರಿಗಣಿಸಲಾಗಿತ್ತು. ಆದರೆ, ಸಾವಯವ ತ್ಯಾಜ್ಯದ ಬಳಕೆಯಿಂದಾಗಿ ವೆಚ್ಚದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ ಎಂದು ಸೆಲ್ಟಿಕ್‌ ರಿನಿವೆಬಲ್ಸ್‌ ಕಂಪನಿ ಹೇಳಿದೆ.

'ವಿಸ್ಕಿ ತಯಾರಿಕಾ ಘಟಕದಂತಹ ಕಾರ್ಖಾನೆಗಳಿಂದ ಉತ್ಪನ್ನ ತಯಾರಿಕೆಯ ತ್ಯಾಜ್ಯಗಳನ್ನು ಸಂಗ್ರಹಿಸಿಕೊಂಡು ಅದರಿಂದ ಮೌಲ್ಯಯುತ ಉತ್ಪನ್ನಗಳನ್ನು ಸಿದ್ಧಪಡಿಸುತ್ತೇವೆ. ಕಾರಿನ ಚಾಲನೆಗೆ ಇಂಧನವಾಗಿ ಬಳಸಲಾಗುವ ಬ್ಯುಟನಾಲ್‌ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ' ಎಂದು ಕಂಪನಿಯ ಮಾಲೀಕ ಮಾರ್ಟಿನ್‌ ಟ್ಯಾಂಗ್ನೆ ಹೇಳಿದ್ದಾರೆ.

50,000 ಟನ್‌ ಸಿಪ್ಪೆಯಂತಹ ತ್ಯಾಜ್ಯ, ಪಾಟ್‌ ಏಲ್‌ ಹಾಗೂ ಇತರೆ ಕಚ್ಚಾ ವಸ್ತುಗಳ ಬಳಕೆಯಿಂದ 10 ಲಕ್ಷ ಲೀಟರ್‌ನಷ್ಟು ಸುಸ್ಥಿರ ಬಯೋಕೆಮಿಕಲ್‌ಗಳನ್ನು ತಯಾರಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಮುಂದಿನ ಐದು ವರ್ಷಗಳಲ್ಲಿ ಜಗತ್ತಿನಾದ್ಯಂತ ಬೃಹತ್‌ ಪ್ರಮಾಣದ ಐದು ರಿಫೈನರಿಗಳನ್ನು ಸ್ಥಾಪಿಸಲು ಕಂಪನಿ ಯೋಜನೆ ರೂಪಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು