ಮಂಗಳವಾರ, ಮಾರ್ಚ್ 21, 2023
23 °C

25 ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸೋಲ್‌: ಉತ್ತರ ಕೊರಿಯಾ ಬುಧವಾರ ದಕ್ಷಿಣ ಕೊರಿಯಾದತ್ತ 25 ಕ್ಷಿಪಣಿಗಳನ್ನು ಉಡಾಯಿಸಿದ್ದು, ಇದರಲ್ಲಿ ಒಂದು ಕ್ಷಿಪಣಿ ದಕ್ಷಿಣ ಕೊರಿಯಾ ಕಡಲ ಜಲಗಡಿಗೆ ಅಪ್ಪಳಿಸಿದೆ.

ಉತ್ತರ ಕೊರಿಯಾ ಮಿಲಿಟರಿಯು ಬೆಳಿಗ್ಗೆ ನಸುಕಿನಲ್ಲಿ 19 ಕ್ಷಿಪಣಿಗಳನ್ನು ಉಡಾಯಿಸಿತ್ತು. ಮಧ್ಯಾಹ್ನ ಮತ್ತೆ ಆರು ಕ್ಷಿಪಣಿಗಳನ್ನು ತನ್ನ ಪೂರ್ವ ಮತ್ತು ಪಶ್ಚಿಮ ಕರಾವಳಿಯಿಂದ ಪ್ರಯೋಗಿಸಿದೆ. ದಕ್ಷಿಣ ಕೊರಿಯಾದ ದ್ವೀಪದಲ್ಲಿ ವಾಯುದಾಳಿ ಎಚ್ಚರಿಕೆಯ ಗಂಟೆ ಇಡೀ ದಿನ ಮೊಳಗಿತು.

ಇದರಲ್ಲಿ ಕಡಿಮೆ ದೂರ ವ್ಯಾಪ್ತಿಯ ಮೂರು ಖಂಡಾಂತರ ಕ್ಷಿಪಣಿಗಳನ್ನೂ ಉತ್ತರ ಕೊರಿಯಾ ಹಾರಿಸಿದೆ. ಈ ಪೈಕಿ ಒಂದು ಕ್ಷಿಪಣಿ ಉಭಯ ರಾಷ್ಟ್ರಗಳ ನಡುವಿನ ವಾಸ್ತವಿಕ ಕಡಲ ಜಲಗಡಿ ದಾಟಿತು. ಇದರಿಂದ ಉಲ್ಲುಂಗ್ಡೊ ದ್ವೀಪದ ನಿವಾಸಿಗಳಿಗೆ ಬಂಕರ್‌ಗಳಲ್ಲಿ ಆಶ್ರಯ ಪಡೆಯಲು ದಕ್ಷಿಣ ಕೊರಿಯಾ ಎಚ್ಚರಿಸಿತು. ತನ್ನ ಗಡಿಯಲ್ಲಿ ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ತ್ವರಿತ ಪ್ರತ್ಯುತ್ತರ ನೀಡಿದೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ನಡೆಸುತ್ತಿರುವ ಜಂಟಿ ವೈಮಾನಿಕ ತಾಲೀಮನ್ನು ಆಕ್ರಮಣದ ಸಿದ್ಧತೆ ಎಂದು ಭಾವಿಸಿರುವ ಉತ್ತರ ಕೊರಿಯಾ,  ‘ಉಭಯರಾಷ್ಟ್ರಗಳು ಇತಿಹಾಸದಲ್ಲೇ ಅತ್ಯಂತ ಭಯಾನಕ ಬೆಲೆ ತೆರಲಿವೆ. ಅಣ್ವಸ್ತ್ರ ದಾಳಿ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿತು. ಇದಾದ, ಕೆಲವೇ ತಾಸುಗಳಲ್ಲಿ ಕ್ಷಿಪಣಿಗಳ ಪ್ರಯೋಗ ನಡೆದಿದೆ.

ಜಂಟಿ ವೈಮಾನಿಕ ತಾಲೀಮಿಗೆ ಪ್ರತ್ಯುತ್ತರವಾಗಿ ಸಮುದ್ರ ಗಡಿಯ ಬಫರ್‌ ವಲಯದ ಮೇಲೆ ಉತ್ತರ ಕೊರಿಯಾ ಫಿರಂಗಿ ದಾಳಿ ನಡೆಸುತ್ತಿದ್ದು, ಅಣ್ವಸ್ತ್ರ ಪರೀಕ್ಷೆಗೆ ಮುಂದಾದರೂ ಅಚ್ಚರಿ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ‘ಇದು ಪ್ರಾದೇಶಿಕ ಆಕ್ರಮಣದ ಬೆದರಿಕೆ’ ಎಂದು ಕಿಡಿಕಾರಿದ್ದಾರೆ.

‘ಉತ್ತರ ಕೊರಿಯಾ ಮೇಲೆ ಆಕ್ರಮಣದ ಉದ್ದೇಶವಿಲ್ಲ. ಆ ರಾಷ್ಟ್ರದ ಅಣ್ವಸ್ತ್ರದ ಮಹತ್ವಾಕಾಂಕ್ಷೆಗಳನ್ನು ನಿಗ್ರಹಿಸಲು ಮಿತ್ರ ರಾಷ್ಟ್ರಗಳೊಂದಿಗೆ ಅಮೆರಿಕ ಕೆಲಸ ಮಾಡಲಿದೆ’ ಎಂದು ಶ್ವೇತಭವನ ಹೇಳಿದೆ.

‘1953ರಲ್ಲಿ ಕೊರಿಯಾ ಯುದ್ಧದ ಕೊನೆಯಲ್ಲಿ ದ್ವೀಪಕಲ್ಪದ ವಿಭಜನೆಯ ನಂತರ ಉತ್ತರ ಕೊರಿಯಾದ ಕ್ಷಿಪಣಿಗಳು ದಕ್ಷಿಣ ಕೊರಿಯಾದ ವಾಸ್ತವಿಕ ಜಲಗಡಿಯ ಹತ್ತಿರಕ್ಕೆ ಬಂದು ಬಿದ್ದಿವೆ. ಇದು ಅಸಹನೀಯ ಬೆಳವಣಿಗೆ’ ಎಂದು ದಕ್ಷಿಣ ಕೊರಿಯಾ ಸೇನೆ ಹೇಳಿದೆ.

ಎರಡೂ ರಾಷ್ಟ್ರಗಳ ನಡುವೆ ರಾಜತಾಂತ್ರಿಕತೆ ಹದಗೆಟ್ಟಿರುವ ಸಂದರ್ಭದಲ್ಲಿ ಜಂಟಿ ವೈಮಾನಿಕ ತಾಲೀಮು, ಪ್ರತೀಕಾರದ ಕ್ಷಿಪಣಿ ಉಡಾವಣೆ ಸಂಘರ್ಷ ಉಲ್ಬಣಿಸುವ ಸಾಧ್ಯತೆ ಹೆಚ್ಚಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು