ಮಂಗಳವಾರ, ನವೆಂಬರ್ 24, 2020
22 °C

ಪಾಕ್‌ ಸೇನೆ, ಐಎಸ್‌ಐ ಮುಖ್ಯಸ್ಥರ ವಿರುದ್ಧ ಷರೀಫ್‌ ವಾಗ್ದಾಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕರಾಚಿ: ಪಾಕಿಸ್ತಾನದಲ್ಲಿ ಸೃಷ್ಟಿಯಾಗಿರುವ ಪ್ರಸ್ತುತ ರಾಜಕೀಯ ಪರಿಸ್ಥಿತಿಗೆ ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಜ್ವಾ ಮತ್ತು ಐಎಸ್‌ಐ ಮುಖ್ಯಸ್ಥ ಫೈಜ್‌ ಹಮೀದ್‌ ಹೊಣೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ದೂರಿದ್ದಾರೆ.

ಬಲೂಚಿಸ್ತಾನದ ಕ್ವೆಟಾದಲ್ಲಿ ಪಾಕಿಸ್ತಾನ ಡೆಮಾಕ್ರಾಟಿಕ್‌ ಚಳವಳಿಯು (ಪಿಟಿಎಂ) ಭಾನುವಾರ ಬೃಹತ್‌ ರ‍್ಯಾಲಿ ಹಮ್ಮಿಕೊಂಡಿತ್ತು. ಈ ವೇಳೆ ಲಂಡನ್‌ನಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಷರೀಫ್‌, ‘2018ರ ಚುನಾವಣೆಯಲ್ಲಿ ಜನರಲ್‌ ಬಜ್ವಾ ಅವರು ಅಕ್ರಮವೆಸಗಿದ್ದಾರೆ. ಜನರ ಇಚ್ಛೆಯ ವಿರುದ್ಧ ಇಮ್ರಾನ್‌ ಖಾನ್‌ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ. ಸಂವಿಧಾನ ಮತ್ತು ಕಾನೂನುಗಳನ್ನು ಹರಿದು ಹಾಕುವ ಮೂಲಕ ಜನರನ್ನು ಹಸಿವು ಮತ್ತು ಬಡತನದತ್ತ ತಳ್ಳಿದ್ಧೀರಿ. ಇದಕ್ಕೆ ಬಜ್ವಾ ಅವರು ಜನರಿಗೆ ಉತ್ತರಿಸಬೇಕು’ ಎಂದು ಅವರು ಹೇಳಿದರು.

‘ಐಎಸ್‌ಐ ಮುಖ್ಯಸ್ಥರು ನಿಯಮ  ಉಲ್ಲಂಘಿಸಿ ಹಲವು ಬಾರಿ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ನಾನು ಸೇನೆಯನ್ನೇ ಸಂಪೂರ್ಣವಾಗಿ ದೂಷಿಸಲು ಬಯಸುವುದಿಲ್ಲ. ಹೀಗಾಗಿಯೇ ಸೇನಾ ಮುಖ್ಯಸ್ಥರ ಹೆಸರನ್ನು ಪ್ರಸ್ತಾಪಿಸಿದ್ದೇನೆ’ ಎಂದು ಷರೀಫ್‌ ಹೇಳಿದರು.

‘ಸದ್ಯ ಅಧಿಕಾರದಲ್ಲಿರುವ ನಾಯಕರು ನಿಮ್ಮ ಮತಗಳಿಗೆ ಗೌರವ ನೀಡುತ್ತಿಲ್ಲ. ಅದೇ ಕಾರಣದಿಂದಾಗಿ ನೀವು ಆಹಾರ ಮತ್ತು ವಸತಿ ಸೌಲಭ್ಯದಿಂದ ವಂಚಿತರಾಗಿದ್ದೀರಿ. ನೀವು ಆಯ್ಕೆ ಮಾಡಿದ ನಾಯಕರು ನಿಮಗೆ ಉತ್ತರಿಸದೆ, ಬೇರೆಯವರ ಮಾತಿನಂತೆ ನಡೆಯುತ್ತಿದ್ದಾರೆ’ ಎಂದು ನವಾಜ್‌ ಷರೀಫ್‌ ಪುತ್ರಿ, ಪಿಎಂಎಲ್‌–ಎನ್‌ ಉಪಾಧ್ಯಕ್ಷೆ ಮರಿಯಮ್ಮ ನವಾಜ್‌ ದೂರಿದರು.

‘ಸರ್ವಾಧಿಕಾರ ಆಡಳಿತದಲ್ಲಿ ಸೂರ್ಯಸ್ತವಾಗಲಿದೆ. ಆದಷ್ಟು ಬೇಗ ಕೈಗೊಂಬೆ ಆಟ ಅಂತ್ಯಗೊಳಲಿದೆ’ ಎಂದು ಅವರು ಹೇಳಿದರು.

2017ರಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್‌ ಭ್ರಷ್ಟಾಚಾರ ಪ್ರಕರಣದಡಿ ಪಿಎಂಎಲ್‌ –ಎನ್‌ ಮುಖ್ಯಸ್ಥ ನವಾಜ್‌ ಷರೀಫ್ ಅವರನ್ನು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿತು. ಕಳೆದ ವರ್ಷ ನವೆಂಬರ್‌ನಿಂದ ಷರೀಫ್‌ ಅವರು ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಎಂಟು ವಾರಗಳ ಕಾಲ ಲಂಡನ್‌ಗೆ ತೆರಳಲು ನ್ಯಾಯಾಲಯ ಮತ್ತು ಸರ್ಕಾರ ಅನುಮತಿ ನೀಡಿತ್ತು. ಆದರೆ, ಅವರು ಇನ್ನೂ ಹಿಂತಿರುಗಿಲ್ಲ.

ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ತೆಹ್ರೀಕ್‌–ಇ–ಇನ್ಸಾಫ್‌(ಪಿಟಿಐ) ಪಕ್ಷದ ಸರ್ಕಾರವನ್ನು ಅಧಿಕಾರದಿಂದ ಇಳಿಸುವ ನಿಟ್ಟಿನಲ್ಲಿ 11 ವಿರೋಧ ಪಕ್ಷಗಳು ಜೊತೆಗೂಡಿ ಸೆ.20 ರಂದು ಪಿಡಿಎಂ ರಚಿಸಿಕೊಂಡಿವೆ. ಪಿಡಿಎಂ ಮೂರು ಹಂತಗಳಲ್ಲಿ ಸರ್ಕಾರದ ವಿರುದ್ಧ ಚಳವಳಿಯನ್ನು ನಡೆಸಲು ನಿರ್ಧರಿಸಿತ್ತು. ಮೊದಲ ಎರಡು ರ‍್ಯಾಲಿಗಳು ಗುಜ್ರಾನ್‌ವಾಲ ಮತ್ತು ಕರಾಚಿಯಲ್ಲಿ ನಡೆದವು. ಮೂರನೇ ಬೃಹತ್‌ ರ‍್ಯಾಲಿ ಕ್ವೆಟಾದಲ್ಲಿ ಭಾನುವಾರ ನಡೆಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು