ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ಹಿಂಸಾಚಾರ, ಲೂಟಿ ತಡೆಗೆ ‘ಕಂಡಲ್ಲಿ ಗುಂಡು’ ಆದೇಶ

Last Updated 10 ಮೇ 2022, 16:16 IST
ಅಕ್ಷರ ಗಾತ್ರ

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಬೀದಿಗಿಳಿದಿರುವ ಜನ ಶ್ರೀಲಂಕಾದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ, ಸಾರ್ವಜನಿಕ ಆಸ್ತಿ ಲೂಟಿ ಮತ್ತು ಹಾನಿ ಉಂಟು ಮಾಡುವವರಿಗೆ ಕಂಡಲ್ಲಿ ಗುಂಡಿಡಲು ಅಲ್ಲಿನ ರಕ್ಷಣಾ ಸಚಿವಾಲಯ ಆದೇಶಿಸಿದೆ.

ಪ್ರತಿಭಟನಾಕಾರರು ಆಡಳಿತ ಪಕ್ಷದ ರಾಜಕಾರಣಿಗಳ ಮನೆಗಳನ್ನು ಟಾರ್ಗೆಟ್ ಮಾಡಿದ ಬಳಿಕ ಈ ಆದೇಶ ಮಾಡಲಾಗಿದೆ.

‘ಸಾರ್ವಜನಿಕರ ಆಸ್ತಿ ಲೂಟಿ ಮಾಡುವವರು ಮತ್ತು ಜೀವಕ್ಕೆ ತೊಂದರೆ ಮಾಡುವವರ ವಿರುದ್ಧ ಕಂಡಲ್ಲಿ ಗುಂಡಿಕ್ಕಲು ಭದ್ರತಾ ಪಡೆಗಳಿಗೆ ಆದೇಶಿಸಲಾಗಿದೆ’ ಎಂದು ಸಚಿವಾಲಯ ಹೇಳಿದೆ.

ನಿನ್ನೆ ನಡೆದ ತೀವ್ರ ಹಿಂಸಾಚಾರದ ನಂತರ ರಾಜಧಾನಿ ಕೊಲಂಬೊ ಮತ್ತು ಇತರೆಡೆ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾವಿರಾರು ಸಂಖ್ಯೆಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸೋಮವಾರ ರಾತ್ರಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಎಂಟು ಮಂದಿ ಸಾವಿಗೀಡಾಗಿದ್ದಾರೆ. 65 ಮನೆಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಲವತ್ತೊಂದು ಮನೆಗಳು ಸುಟ್ಟು ಕರಕಲಾಗಿವೆ.

ನೂರಾರು ದ್ವಿಚಕ್ರವಾಹನಗಳ ಜೊತೆಗೆ 88 ಕಾರುಗಳು ಮತ್ತು ಬಸ್ಸುಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಧಿಕೃತ ಅಂಕಿಅಂಶಗಳಿಂದ ತಿಳಿದುಬಂದಿದೆ.

ಶುಕ್ರವಾರದಿಂದ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಶಂಕಿತರನ್ನು ಬಂಧಿಸಲು ಮತ್ತು ವಿಚಾರಣೆಗೊಳಪಡಿಸಲು ಮಿಲಿಟರಿಗೆ ವ್ಯಾಪಕ ಅಧಿಕಾರ ನೀಡಲಾಗಿದೆ.

ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸಿ ಅವರ ಮನೆ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸರ್ಕಾರ ಪರ ಹೋರಾಟಗಾರರು ದಾಳಿ ನಡೆಸಿದ ಬಳಿಕ ಎರಡು ದಿನಗಳ ಕಾಲ ದೇಶದಾದ್ಯಂತ ಕರ್ಫ್ಯೂ ವಿಧಿಸಲಾಗಿದೆ.

ಸೋಮವಾರ ಸರ್ಕಾರ ಬೆಂಬಲಿತ ಹೋರಾಟಗಾರರು ನಡೆಸಿರುವ ದಾಳಿಯಲ್ಲಿ 219 ಮಂದಿ ಗಾಯಗೊಂಡಿದ್ದಾರೆ ಎಂದು ರಾಜಧಾನಿಯ ಪ್ರಮುಖ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಶಾಂತಿಯುತ ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯನ್ನು ತಡೆಯಲು ವಿಫಲವಾಗಿದ್ದಾರೆ ಎಂದು ಆರೋಪಿಸಿ ಉದ್ರಿಕ್ತ ಜನರು, ಮಂಗಳವಾರ ಮಧ್ಯಾಹ್ನ, ಕೊಲಂಬೊದಲ್ಲಿ ಉನ್ನತ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿ ಅವರ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT