ಸೋಮವಾರ, ಅಕ್ಟೋಬರ್ 18, 2021
23 °C

ವಿಶ್ವಸಂಸ್ಥೆಯಲ್ಲಿ ಪಾಕ್ ಪಿಎಂ ಇಮ್ರಾನ್ ಬೆವರಿಳಿಸಿದ ಅಧಿಕಾರಿಣಿ ಸ್ನೇಹಾ ದುಬೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

PTI

ವಿಶ್ವಸಂಸ್ಥೆ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ತಮ್ಮ ಭಾಷಣದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಕ್ಕೆ, ಭಾರತ ತೀಕ್ಷ್ಣ ತಿರುಗೇಟು ನೀಡಿದೆ.

‘ಉಗ್ರರಿಗೆ ಮುಕ್ತ ವಾತಾವರಣ ಕಲ್ಪಿಸಿರುವ ಪಾಕಿಸ್ತಾನವು ಅಗ್ನಿಶಾಮಕ ವೇಷ ಧರಿಸಿ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ತನ್ನ ಹಿತ್ತಲಿನಲ್ಲಿ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡುವ ಮೂಲಕ, ಇಡೀ ಜಗತ್ತು ತೊಂದರೆಗೆ ಸಿಲುಕುವಂತೆ ಮಾಡಿದೆ’ ಎಂದು ಆರೋಪಿಸಿದೆ. 

‘ಪಾಕಿಸ್ತಾನದ ನಾಯಕರ ಮತ್ತದೇ ಆರೋಪಕ್ಕೆ ಉತ್ತರಿಸುವ ಹಕ್ಕನ್ನು ನಾವು ಚಲಾಯಿಸುತ್ತಿದ್ದೇವೆ. ದೇಶದ ಆಂತರಿಕ ವಿಷಯಗಳನ್ನು ಘನತೆಯಿರುವ ವಿಶ್ವ ವೇದಿಕೆಯಲ್ಲಿ ಪ್ರಸ್ತಾಪಿಸುವ ಮೂಲಕ ಸುಳ್ಳನ್ನು ಪ್ರಚುರಪಡಿಸಲಾಗುತ್ತಿದೆ’ ಎಂದು ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹೇಳಿದ್ದಾರೆ. 

‘ಅಸತ್ಯವನ್ನು ಪದೇ ಪದೇ ಹೇಳುವ ವ್ಯಕ್ತಿಯ ಮನಸ್ಥಿತಿಗೆ ತಕ್ಕುದಾದ ಹೇಳಿಕೆಯನ್ನು ಅವರು ನೀಡಿದ್ದಾರೆ. ಅದನ್ನು ಸರಿಪಡಿಸಲು ನಾನು ಪ್ರಯತ್ನಿಸುತ್ತೇನೆ’ ಎಂದು ಯುವ ರಾಜತಾಂತ್ರಿಕ ಅಧಿಕಾರಿ ಉತ್ತರಿಸಿದ್ದಾರೆ.

ಇಮ್ರಾನ್ ಖಾನ್ ಅವರು ತಮ್ಮ ವಿಡಿಯೊ ಭಾಷಣದಲ್ಲಿ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದರು. ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿ ಹಾಗೂ ಪ್ರತ್ಯೇಕತಾವಾದಿ ಮುಖಂಡ ಸಯ್ಯದ್ ಅಲಿ ಶಾ ಗಿಲಾನಿ ಅವರ ಸಾವಿನ ವಿಚಾರವನ್ನು ಇಮ್ರಾನ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಗಿಲಾನಿಯವರ ಸಮಾಧಿಯನ್ನು ಸೂಕ್ತವಾಗಿ ನಿರ್ಮಿಸಲು ಖಾನ್ ಒತ್ತಾಯಿಸಿದ್ದರು.  

‘ಪಾಕಿಸ್ತಾನವು ‘ಭಯೋತ್ಪಾದನೆಯ ಬಲಿಪಶು’ ಎಂಬ ಮಾತನ್ನು ನಾವು ಕೇಳುತ್ತಲೇ ಇರುತ್ತೇವೆ. ಆದರೆ, ವಾಸ್ತವವಾಗಿ ಅವರ ನೀತಿಗಳಿಂದಾಗಿ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ಮತ್ತೊಂದೆಡೆ, ಅವರು ತಮ್ಮ ದೇಶದಲ್ಲಿ ನಡೆಯುವ ಮತೀಯ ಹಿಂಸೆಯನ್ನು ಭಯೋತ್ಪಾದಕ ಕೃತ್ಯಗಳೆಂದು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ದುಬೆ ಹೇಳಿದರು.

‘ಜಮ್ಮು ಮತ್ತು ಕಾಶ್ಮೀರ, ಲಡಾಖ್, ಕೇಂದ್ರಾಡಳಿತ ಪ್ರದೇಶಗಳು ಯಾವಾಗಲೂ ಭಾರತದ ಅವಿಭಾಜ್ಯ ಅಂಗ. ಇದು, ಪಾಕಿಸ್ತಾನವು ಅಕ್ರಮವಾಗಿ ಆಕ್ರಮಣ ಮಾಡಿಕೊಂಡಿರುವ ಪ್ರದೇಶಗಳನ್ನೂ ಒಳಗೊಂಡಿದೆ’ ಎಂದರು.

ಪಾಕಿಸ್ತಾನದ ನಾಯಕರು ಮತ್ತು ರಾಜತಾಂತ್ರಿಕರು ಭಾರತದ ಆಂತರಿಕ ವಿಷಯಗಳನ್ನು ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ನಿರಂತರವಾಗಿ ಪ್ರಸ್ತಾಪಿಸುತ್ತಾ ಬಂದಿದ್ದಾರೆ. ಕಾಶ್ಮೀರ ವಿಷಯವನ್ನು ಅಂತರರಾಷ್ಟ್ರೀಯಗೊಳಿಸುವ ಪಾಕಿಸ್ತಾನದ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಸಮುದಾಯ ಮತ್ತು ಸದಸ್ಯ ರಾಷ್ಟ್ರಗಳಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. 

‘ಪಾಕಿಸ್ತಾನವು ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಅಂತರರಾಷ್ಟ್ರೀಯ ವೇದಿಕೆಗಳನ್ನು ಭಾರತದ ವಿರುದ್ಧ ಸುಳ್ಳು ಹೇಳುವ ತನ್ನ ಕಾರ್ಯಸೂಚಿಗೆ ಬಳಸಿಕೊಳ್ಳುತ್ತಿದೆ’ ಎಂದು ದುಬೆ ತಿರುಗೇಟು ನೀಡಿದ್ದಾರೆ.

‘ಅಮೆರಿಕದ ಮೇಲೆ ಭಯೋತ್ಪಾದಕ ದಾಳಿಯ 20ನೇ ವರ್ಷಾಚರಣೆ ನಡೆಯಿತು. ದಾಳಿಯ ಮುಖ್ಯ ಸಂಚುಕೋರ ಲಾಡೆನ್‌ಗೆ ಪಾಕಿಸ್ತಾನ ಆಶ್ರಯ ನೀಡಿದ್ದನ್ನು ಯಾರೂ ಮರೆತಿಲ್ಲ. ಆದರೆ ಈಗಲೂ ಸಹ ಲಾಡೆನ್‌ಗೆ ಪಾಕಿಸ್ತಾನವು ಹುತಾತ್ಮ ಗೌರವ ನೀಡುತ್ತಿದೆ’ ಎಂದು ದೂರಿದರು.

‘ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡಿದ, ಸಹಾಯ ಮಾಡಿದ ಮತ್ತು ಸಕ್ರಿಯವಾಗಿ ಬೆಂಬಲಿಸಿದ ಇತಿಹಾಸವಿದೆ. ಪಾಕ್‌ನ ಈ ನೀತಿ ಸದಸ್ಯ ರಾಷ್ಟ್ರಗಳಿಗೆ ತಿಳಿದಿದೆ. ಭಯೋತ್ಪಾದಕರನ್ನು ಬಹಿರಂಗವಾಗಿ ಬೆಂಬಲಿಸುವ, ಅವರಿಗೆ ತರಬೇತಿ ಹಾಗೂ ಹಣಕಾಸು ಒದಗಿಸುವ, ಶಸ್ತ್ರಾಸ್ತ್ರ ನೀಡುವುದನ್ನು ತನ್ನ ರಾಷ್ಟ್ರೀಯ ನೀತಿ ಎಂಬುದಾಗಿ ಪಾಕಿಸ್ತಾನ ಪಾಲಿಸುತ್ತಿರುವುದು ಜಾಗತಿಕ ಸಮುದಾಯದ ಅರಿವಿನಲ್ಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ನಿಷೇಧಿಸಲ್ಪಟ್ಟ ಬಹಳಷ್ಟು ಸಂಖ್ಯೆಯ ಸಂಘಟನೆಯ ಭಯೋತ್ಪಾದಕರಿಗೆ ಬೆಂಬಲ ನೀಡಿದ ದಾಖಲೆ ಪಾಕಿಸ್ತಾನಕ್ಕೆ ಇದೆ’ ಎಂದು ದುಬೆ ಚಾಟಿ ಬೀಸಿದ್ದಾರೆ.

ವ್ಯಾಪಾರ ನೀತಿ ಸಭೆ
ದ್ವಿಪಕ್ಷೀಯ ಸಂಬಂಧ ಹೆಚ್ಚಿಸುವ ಗುರಿಯೊಂದಿಗೆ 2021ರ ಅಂತ್ಯದಲ್ಲಿ ಭಾರತ–ಅಮೆರಿಕ ವ್ಯಾಪಾರ ನೀತಿ ವೇದಿಕೆ ಸಭೆ ಕರೆಯಲು ನಿರ್ಧರಿಸಲಾಗಿದೆ. 

ವ್ಯಾಪಾರದ ಆತಂಕಗಳು, ಉತ್ತೇಜನ ಬಯಸುವ ಕ್ಷೇತ್ರಗಳು, ಭವಿಷ್ಯದ ವ್ಯಾಪಾರ ಸಂಬಂಧದಲ್ಲಿ ಸುಧಾರಣೆ ಕುರಿತಂತೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಖಾಸಗಿ ವಲಯದ ಪ್ರತಿಭೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ 2022ರ ಆರಂಭದಲ್ಲಿ ಅಮೆರಿಕ–ಭಾರತ ಸಿಇಒ ಫೋರಂ ಸಭೆ ಮತ್ತು ವಾಣಿಜ್ಯ ಸಂವಾದವನ್ನು ಆಯೋಜಿಸಲು ಉಭಯ ನಾಯಕರು ಎದುರು ನೋಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ನೆರವಾಗುವ ನಿಟ್ಟಿನಲ್ಲಿ ಈಗ ನಡೆಯುತ್ತಿರುವ ಹೂಡಿಕೆ ಉತ್ತೇಜನ ಒಪ್ಪಂದ ಮಾತುಕತೆ ಶೀಘ್ರವೇ ಅಂತಿಮ ಸ್ವರೂಪ ಪಡೆಯಲಿದೆ ಎಂಬುದನ್ನು ಉಭಯ ನಾಯಕರು ಉಲ್ಲೇಖಿಸಿದ್ದಾರೆ.

ಇಂಡೋ-ಪೆಸಿಫಿಕ್ ವಲಯದ ಉದ್ದಕ್ಕೂ ಆರ್ಥಿಕತೆಯನ್ನು ಮೇಲೆತ್ತುವ ಸುಸ್ಥಿರ ಮತ್ತು ಪಾರದರ್ಶಕ ನಿಯಮಗಳನ್ನು ರೂಪಿಸಲು ಅಮೆರಿಕ–ಭಾರತ ಹೇಗೆ ಒಟ್ಟಾಗಿ ಕೆಲಸ ಮಾಡಬೇಕು ಎಂಬ ಬಗ್ಗೆಯೂ ಮೋದಿ ಮತ್ತು ಬೈಡನ್ ಚರ್ಚಿಸಿದರು.

ಭದ್ರತಾ ಮಂಡಳಿ ಕಾಯಂ ಸ್ಥಾನ: ಅಮೆರಿಕ ಬೆಂಬಲ
ಪುನರ್‌ ರಚನೆಯಾಗುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ವತ್ವ ನೀಡುವುದನ್ನು ಬೆಂಬಲಿಸುವುದಾಗಿ ಅಮೆರಿಕ ಪುನರುಚ್ಚರಿಸಿದೆ. ಜೊತೆಗೆ ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಭಾರತವನ್ನು ಸೇರ್ಪಡೆ ಮಾಡಲೂ ಬೆಂಬಲ ಸೂಚಿಸಿದೆ. 

ಶ್ವೇತಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ಮೊದಲ ಮುಖತಃ ಭೇಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಈ ಭರವಸೆ ನೀಡಿದ್ದಾರೆ. 2021ರ ಆಗಸ್ಟ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷಗಿರಿ ನಿರ್ವಹಿಸಿದ ಭಾರತದ ನಾಯಕತ್ವ ಗುಣವನ್ನು ಬೈಡನ್ ಪ್ರಶಂಸಿಸಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ದೀರ್ಘಾವಧಿಯಿಂದ ಬಾಕಿಯಿರುವ ಸುಧಾರಣೆಗಳಿಗೆ ಭಾರತ ಒತ್ತಾಯಿಸುತ್ತಿದ್ದು, ಭಾರತದ ಈ ಯತ್ನಕ್ಕೆ ಬೈಡನ್ ಅವರ ಮಾತಿನಿಂದ ಉತ್ತೇಜನ ಸಿಕ್ಕಿದೆ. ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯುವ ಭಾರತದ ಯತ್ನವೂ ದೀರ್ಘಾವಧಿಯದ್ದು. ಕಾಯಂ ರಾಷ್ಟ್ರಗಳ ಸಂಖ್ಯೆ ಹೆಚ್ಚಿಸುವ ಒತ್ತಾಯ ಬಹಳ ಹಿಂದಿನಿಂದ ಇದೆ. 

ಎನ್‌ಎಸ್‌ಜಿ 48 ಸದಸ್ಯರ ಗುಂಪಾಗಿದ್ದು, ಅದು ಜಾಗತಿಕ ಪರಮಾಣು ವ್ಯಾಪಾರವನ್ನು ನಿಯಂತ್ರಿಸುತ್ತದೆ. ಇದಕ್ಕೆ ಪ್ರವೇಶ ಕೊಡಿಸಲು ಭಾರತಕ್ಕೆ ಅಮೆರಿಕ ಬೆಂಬಲವಾಗಿ ನಿಂತಿದೆ. 

2016ರಲ್ಲಿ ಭಾರತವು ಸದಸ್ಯತ್ವಕ್ಕೆ ಅರ್ಜಿ ಹಾಕಿದ್ದರೂ, ಚೀನಾದ ವಿರೋಧದಿಂದ ಇದು ನನೆಗುದಿಗೆ ಬಿದ್ದಿದೆ. ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ (ಎನ್‌ಪಿಟಿ) ಸಹಿ ಹಾಕಿರುವವರು ಮಾತ್ರ ಈ ಸಂಘಟನೆ ಸೇರಲು ಅರ್ಹರು ಎಂಬುದು ಚೀನಾ ವಾದ. ಭಾರತದ ಬಳಿಕ ಪಾಕಿಸ್ತಾನವೂ ಇದಕ್ಕೆ ಅರ್ಜಿ ಹಾಕಿದೆ. ಎರಡೂ ದೇಶಗಳು ಎನ್‌ಪಿಟಿಗೆ ಸಹಿ ಹಾಕಿಲ್ಲ.

ಮುಂದಿನ ತಿಂಗಳು ಲಸಿಕೆ ಲಭ್ಯ: ಮೋದಿ
ಕ್ವಾಡ್ ಲಸಿಕೆ ಪಾಲುದಾರಿಕೆ ಅಡಿಯಲ್ಲಿ ಜಾನ್ಸನ್ ಅಂಡ್‌ ಜಾನ್ಸನ್‌ ಕಂಪನಿ ಭಾರತದಲ್ಲಿ ಉತ್ಪಾದಿಸಿದ 10 ಲಕ್ಷ ಕೋವಿಡ್ ಲಸಿಕೆಗಳು ಮುಂದಿನ ತಿಂಗಳು ಇಂಡೋ-ಪೆಸಿಫಿಕ್ ರಾಷ್ಟ್ರಗಳಿಗೆ ಲಭ್ಯವಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾಷಿಂಗ್ಟನ್‌ನಲ್ಲಿ ನಡೆದ ಕ್ವಾಡ್ ಶೃಂಗಸಭೆಯ ಇತರ ಸದಸ್ಯ ರಾಷ್ಟ್ರಗಳ ಮೊದಲ ಮುಖತಃ ಸಭೆಯಲ್ಲಿ ಮೋದಿ ಮಾತನಾಡಿದರು.

ಈ ವರ್ಷದ ಮಾರ್ಚ್ 12ರಂದು ವರ್ಚುವಲ್ ಶೃಂಗಸಭೆಯಲ್ಲಿ ಕ್ವಾಡ್ ಲಸಿಕೆ ಪಾಲುದಾರಿಕೆ ಅನುಷ್ಠಾನ ಪ್ರಗತಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. ಅಮೆರಿಕ ಅಭಿವೃದ್ಧಿ ಹಣಕಾಸು ನಿಗಮದ ಬೆಂಬಲಿತ ಬಯಾಲಾಜಿಕಲ್ ಇ ಲಿಮಿಟೆಡ್ ಆಫ್ ಇಂಡಿಯಾದ ಲಸಿಕೆ ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಕ್ಕೆ ಎಲ್ಲ ನಾಯಕರು ಬದ್ಧತೆ ವ್ಯಕ್ತಪಡಿಸಿದರು. 

2022ರ ಅಂತ್ಯದ ವೇಳೆಗೆ ಜಾನ್ಸನ್ ಮತ್ತು ಜಾನ್ಸನ್ ಅಭಿವೃದ್ಧಿಪಡಿಸಿದ ಲಸಿಕೆಗಳು ಸೇರಿದಂತೆ 100 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ಮುಖ್ಯವಾಗಿ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಪೂರೈಕೆಸುವುದು ಉದ್ದೇಶ. 

ಭವಿಷ್ಯದ ಸಾಂಕ್ರಾಮಿಕ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಾಂಕ್ರಾಮಿಕ ಸಿದ್ಧತೆ ಮತ್ತು ಬಯೋಮೆಡಿಕಲ್ ಸಂಶೋಧನೆ ಸೇರಿದಂತೆ ಜಾಗತಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಪ್ರಮುಖ ಕ್ಷೇತ್ರಗಳ ಮೇಲೆ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಬೈಡನ್ ಜೊತೆ ಮೋದಿ ಮಾತುಕತೆ ನಡೆಸಿದರು. ಕ್ವಾಡ್ ಸಭೆಗೂ ಮುನ್ನ ಅವರು ಮಾತನಾಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು