ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾದಲ್ಲಿ ಹಾನಿ ಮಾಡದೇ ಅಂತ್ಯದತ್ತ ಓಮೈಕ್ರಾನ್?

Last Updated 23 ಡಿಸೆಂಬರ್ 2021, 2:32 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದಲ್ಲಿ ಉತ್ತುಂಗಕ್ಕೇರಿದ್ದ ಓಮೈಕ್ರಾನ್‌ ಸೋಂಕು ಪ್ರಕರಣಗಳು, ಈಗ ದಿಢೀರನೇ ಕಡಿಮೆಯಾಗುತ್ತಿವೆ. ಹೀಗಾಗಿ ಅಲ್ಲಿ ಓಮೈಕ್ರಾನ್‌ ದೊಡ್ಡ ಅನಾಹುತ ಸೃಷ್ಟಿ ಮಾಡದೇ ಉತ್ತುಂಗವನ್ನು ತಲುಪಿ ಅಂತ್ಯದತ್ತ ಸಾಗುತ್ತಿದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಗುರುವಾರ ರಾಷ್ಟ್ರವ್ಯಾಪಿ ಸುಮಾರು 27,000 ಹೊಸ ಓಮೈಕ್ರಾನ್‌ ಪ್ರಕರಣಗಳು ಅಲ್ಲಿ ವರದಿಯಾಗಿದ್ದವು. ಮಂಗಳವಾರದ ಹೊತ್ತಿಗೆ ಅದು 15,424ಕ್ಕೆ ಇಳಿಕೆಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗೌಟೆಂಗ್ ಪ್ರಾಂತ್ಯದಲ್ಲಿ, ರಾಜಧಾನಿ ಜೋಹಾನ್ಸ್‌ಬರ್ಗ್, ಪ್ರಿಟೋರಿಯಾ ಸೇರಿದಂತೆ ಹಲವೆಡೆ ಓಮೈಕ್ರಾನ್‌ ಇಳಿಕೆ ಹಾದಿ ಕಂಡಿದೆ.

ದಕ್ಷಿಣ ಆಫ್ರಿಕಾದಲ್ಲಿನ ಈಗಿನ ಓಮೈಕ್ರಾನ್‌ ಸೋಂಕು ಪ್ರಕರಣಗಳ ಸಂಖ್ಯೆ ವಿಶ್ವಾಸಾರ್ಹವೇನಲ್ಲ. ಸರಿಯಾದ ಪರೀಕ್ಷೆ ನಡೆಯದಿರುವುದು, ವರದಿಯಲ್ಲಿ ಆಗುವ ವಿಳಂಬ ಮತ್ತು ಇತರ ಕಾರಣಗಳಿಂದಲೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರಬಹುದು. ಆದರೆ, ಪ್ರಕರಣಗಳ ಕುಸಿತದಿಂದ ಒಂದು ಸುಳಿವಂತೂ ಸಿಗುತ್ತಿದೆ. ತೀವ್ರ ಏರಿಕೆ ನಂತರ ಓಮೈಕ್ರಾನ್ ಆಷ್ಟೇ ತೀವ್ರವಾಗಿ ಕುಸಿಯಬಹುದು ಎಂದು ಗೊತ್ತಾಗುತ್ತಿದೆ. ಆದರೆ, ಇದೂ ಖಚಿತವೇನಲ್ಲ ಎಂದು ತಜ್ಞರು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಓಮೈಕ್ರಾನ್‌ ಅಲೆ ಪ್ರಬಲವಾಗಿದೆ. ಜಗತ್ತಿನಲ್ಲಿ ಮೊದಲ ಬಾರಿಗೆ ಓಮೈಕ್ರಾನ್‌ ಕಾಣಿಸಿಕೊಂಡಿದ್ದೂ ಅಲ್ಲಿಯೇ. ಹೀಗಾಗಿ ಓಮೈಕ್ರಾನ್‌ ಅಲ್ಲಿ ಏನು ಮಾಡಬಹುದು ನಂತರ ಅಂತಿಮವಾಗಿ ಏನಾಗಬಹುದು ಎಂದು ಇಡೀ ವಿಶ್ವವೇ ದಕ್ಷಿಣ ಆಫ್ರಿಕಾವನ್ನು ಕುತೂಹಲದಿಂದ ವಿಕ್ಷೀಸುತ್ತಿದೆ.


‘ದಕ್ಷಿಣ ಆಫ್ರಿಕಾದಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾದ ಗೌಟೆಂಗ್ ಪ್ರಾಂತ್ಯದಲ್ಲಿ ಈಗ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿವೆ. ಹಲವು ವಾರಗಳ ವರೆಗೆ ಇದು ಓಮೈಕ್ರಾನ್‌ ಅಲೆಯ ಕೇಂದ್ರ ಬಿಂದುವಾಗಿತ್ತು. ಈಗ ನಾವು ಈ ಅಲೆಯನ್ನು ದಾಟಿದ್ದೇವೆ ಎಂದು ಅನಿಸುತ್ತದೆ,’ ಎಂದು ವಿಟ್ವಾಟರ್ಸ್‌ರಾಂಡ್‌ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ವಿಶ್ಲೇಷಣಾ ವಿಭಾಗದ, ಲಸಿಕೆಗಳ ಹಿರಿಯ ಸಂಶೋಧಕ ಮಾರ್ಟಾ ನ್ಯೂನ್ಸ್ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.

‘ಇದೊಂದು ಸಣ್ಣ ಅಲೆ. ಒಳ್ಳೆ ಸುದ್ದಿ ಏನೆಂದರೆ, ಈ ಅಲೆಯಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ, ಸಾವುಗಳು ಸಂಭವಿಸುವ ಪ್ರಸಂಗಗಳು ತೀರಾ ಕಡಿಮೆ,’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT