ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾದಲ್ಲಿ ಹೊಸದಾಗಿ ಚುನಾವಣೆ ನಡೆಸಲು ಮಾಜಿ ಅಧ್ಯಕ್ಷ ಸಿರಿಸೇನಾ ಕರೆ

ಅಕ್ಷರ ಗಾತ್ರ

ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಶ್ರೀಲಂಕಾದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕೆಂದು ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಕರೆ ನೀಡಿದ್ದಾರೆ.

ವಿಶ್ವ ಕಾರ್ಮಿಕರ ದಿನದ ಪ್ರಯುಕ್ತ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ‘ದೇಶವು ದೊಡ್ಡ ದುರಂತವನ್ನು ಎದುರಿಸುತ್ತಿರುವ ಸಮಯದಲ್ಲಿ ರಾಜಕಾರಣಿಗಳು ಜನರ ಪರವಾಗಿ ನಿಲ್ಲಬೇಕಿದೆ. ಈ ಉದ್ದೇಶಕ್ಕಾಗಿ ವಿಶ್ವ ಕಾರ್ಮಿಕ ದಿನದಂದು ಬೀದಿಗಿಳಿದಿದ್ದೇನೆ’ ಎಂದು ತಿಳಿಸಿದ್ದಾರೆ.

‘ಈಗಿನ ನಾಯಕರು ಅಧಿಕಾರದಲ್ಲಿ ಮುಂದುವರಿದರೆ ಜನರು ಸಾಯುವ ಪರಿಸ್ಥಿತಿ ಎದುರಾಗಲಿದೆ. ಈಗಾಗಲೇ ಎರಡರಿಂದ ಮೂರು ಲಕ್ಷ ಜನರು ಹಸಿವಿನಿಂದ ಬಳಲುತ್ತಿದ್ದಾರೆ’ ಎಂದು ಶ್ರೀಲಂಕಾ ಫ್ರೀಡಂ ಪಕ್ಷದ ಅಧ್ಯಕ್ಷರೂ ಆಗಿರುವ ಸಿರಿಸೇನಾ ಹೇಳಿದ್ದಾರೆ.

‘ಈ ಸರ್ಕಾರವು ಅಧಿಕಾರದಿಂದ ನಿರ್ಗಮಿಸಬೇಕೆಂದು ಒತ್ತಾಯಿಸಿ ದೇಶದ ಶ್ರೀಮಂತರು, ರೈತರು, ಸಾರ್ವಜನಿಕ ಸೇವಕರು ಬೀದಿಗಿಳಿದಿದ್ದಾರೆ. ಅವರಂತೆ ನಾನು ಕೂಡ ಬೀದಿಗಿಳಿದಿದ್ದೇನೆ. ಹೊಸ ಸರ್ಕಾರವನ್ನು ರಚಿಸಲು ನಾನು ಬಯಸುತ್ತೇನೆ. ಈ ಕಾರಣಕ್ಕಾಗಿ ಶ್ರೀಲಂಕಾದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು’ ಎಂದು ಸಿರಿಸೇನಾ ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿ ಶ್ರೀಲಂಕಾ ಅಧ್ಯಕ್ಷ ಗೊಟಬಾಯ ರಾಜಪಕ್ಸ ಅವರ ರಾಜೀನಾಮೆಗೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ಹಲವೆಡೆ ಪ್ರತಿಭಟನೆಗಳೂ ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT