ಬುಧವಾರ, ಮಾರ್ಚ್ 29, 2023
26 °C

ಆರ್ಥಿಕ ಹಿಂಜರಿತಕ್ಕೆ ದ್ವೀಪರಾಷ್ಟ್ರ ತತ್ತರ: ಶ್ರೀಲಂಕಾ ಕರೆನ್ಸಿ ಮೌಲ್ಯ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀಲಂಕಾದ ಆರ್ಥಿಕತೆಯು ಭಾರೀ ಸಾಲದಲ್ಲಿ ಮುಳುಗಿದೆ. ‌2020ರಲ್ಲಿ ದೇಶದ ಆರ್ಥಿಕತೆಯು ದಾಖಲೆಯ ಶೇ 3.6ರಷ್ಟು ಕುಸಿತ ಕಂಡಿತು. ಪ್ರಮುಖವಾಗಿ ವಿದೇಶಿ ವಿನಿಮಯ ಕೊರತೆ, ಕೋವಿಡ್ ಸೇರಿದಂತೆ ಹಲವು ಕಾರಣಗಳನ್ನು ಗುರುತಿಸಲಾಗಿದೆ. 

ಕೋವಿಡ್ ಪ್ರಹಾರ:  ಶ್ರೀಲಂಕಾವು ತನ್ನ ಆಂತರಿಕ ಭದ್ರತೆಯ ಬಗ್ಗೆ ನಿರ್ಲಕ್ಷ್ಯ ತಾಳಿದ್ದರಿಂದ 2019ರಲ್ಲಿ ಬಾಂಬ್‌ ಸ್ಫೋಟ ಘಟನೆಗೆ ಸಾಕ್ಷಿಯಾಯಿತು. ಇದರಿಂದ  ದೇಶ ಚೇತರಿಸಿಕೊಳ್ಳುವ ಮುನ್ನವೇ ಎದುರಾಗಿದ್ದು ಕೊರೊನಾ ಸಾಂಕ್ರಾಮಿಕ. ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದ್ದರಿಂದ ದೇಶವ್ಯಾಪಿ ಸೋಂಕು ಹರಡಿತು. ಲಾಕ್‌ಡೌನ್‌ಗಳು ಆರ್ಥಿಕತೆಯನ್ನು ಸಂಪೂರ್ಣವಾಗಿ ಮಲಗಿಸಿದವು. ಲಸಿಕೆ ಖರೀದಿಗೆ ವಿಶ್ವಬ್ಯಾಂಕ್‌ನಿಂದ ₹750 ಕೋಟಿ ಸಾಲ ಪಡೆಯಬೇಕಾಯಿತು.

ಪ್ರಮುಖ ವಿದೇಶಿ ವಿನಿಮಯ ಗಳಿಕೆಯ ಆಧಾರವಾಗಿದ್ದ ಹಾಗೂ ದೇಶದ ಜೀವಾಳವಾದ ಪ್ರವಾಸೋದ್ಯಮವು ಕೋವಿಡ್‌ನಿಂದ ನೆಲಕಚ್ಚಿ, ವಿದೇಶಿ ಕರೆನ್ಸಿ ನಿಂತುಹೋಯಿತು. ಆಹಾರ ಪದಾರ್ಥ ಆಮದಿಗೆ ವಿದೇಶಿ ವಿನಿಮಯದ ತೀವ್ರ ಕೊರತೆ ಎದುರಾಯಿತು. ಭಯೋತ್ಪಾದಕ ದಾಳಿಯ ಬಳಿಕ ದೇಶದಲ್ಲಿ ಬಂಡವಾಳ ಹೂಡಿಕೆಯ ವಿಶ್ವಾಸ ಕುಗ್ಗಿದೆ. ಹಣ ಚಲಾವಣೆಗೆ ಕಾರಣವಾಗುವ ಮೂಲಸೌಕರ್ಯ ಕ್ಷೇತ್ರದ ಬದಲು ರಕ್ಷಣಾ ವಲಯದಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ. ಇಂತಹ ದುರ್ಬಲ ಸ್ಥಿತಿಯಲ್ಲಿ ತುರ್ತುಪರಿಸ್ಥಿತಿ ಘೋಷಿಸದೇ ಬೇರೆ ಆಯ್ಕೆ ಇರಲಿಲ್ಲ ಎನ್ನುತ್ತಾರೆ ವಿಶ್ಲೇಷಕರು.  

ಸಾಲದ ಶೂಲ: ಚೀನಾ ಸೇರಿದಂತೆ ವಿವಿಧ ಸರ್ಕಾರಗಳು ಹಾಗೂ ಐಎಂಎಫ್ ಸೇರಿದಂತೆ ವಿವಿಧ ಅಂತರರಾಷ್ಟ್ರೀಯ ಸಂಘಟನೆಗಳಿಂದ ಪಡೆದ ಅಪಾರ ಪ್ರಮಾಣದ ಸಾಲಕ್ಕೆ ಬಡ್ಡಿ ಕಟ್ಟಲು ಶ್ರೀಲಂಕಾವು ತನ್ನ ಶೇ 80ರಷ್ಟು ವಿದೇಶಿ ವಿನಿಮಯವನ್ನು ಖರ್ಚು ಮಾಡುತ್ತಿರುವುದು ಆರ್ಥಿಕತೆಯ ದಿಕ್ಕು ತಪ್ಪಿಸಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 

ಕಳೆದ ಬಾರಿ ಚೀನಾದಿಂದ ಮಾಡಿದ್ದ ಸಾಲಕ್ಕೆ ಬಡ್ಡಿಕಟ್ಟಲೂ ಆಗದ ಪರಿಸ್ಥಿತಿ ಎದುರಾದಾಗ, ಶ್ರೀಲಂಕಾವು ಒಂದು ಬಂದರನ್ನು ಚೀನಾಕ್ಕೆ ಹಸ್ತಾಂತರಿಸಬೇಕಾಯಿತು. ಶ್ರೀಲಂಕಾ ಈ ವರ್ಷ ಒಟ್ಟು ₹30 ಸಾವಿರ ಕೋಟಿ (370 ಕೋಟಿ ಡಾಲರ್) ವಿದೇಶಿ ಸಾಲ ಪಾವತಿ ಮಾಡಬೇಕಾಗಿದೆ. ಏಪ್ರಿಲ್ ವೇಳೆಗೆ ದೇಶದ ಒಟ್ಟು ಸಾಲ ₹2.63 ಲಕ್ಷ ಕೋಟಿ (351 ಕೋಟಿ ಡಾಲರ್) ಇದೆ ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ. 

2012ರಿಂದಲೂ ಶ್ರೀಲಂಕಾದ ಜಿಡಿಪಿ ಬೆಳವಣಿಗೆ ದರ ನಿರಂತರವಾಗಿ ಇಳಿಯುತ್ತಾ ಬಂದಿದೆ. ಉತ್ಪಾದನಾ ವಲಯದಲ್ಲಿ ಯಾವುದೇ ಬೆಳವಣಿಗೆ ಇಲ್ಲ. ಶ್ರೀಲಂಕಾವು ಐಎಂಎಫ್‌ನಿಂದ ಈವರೆಗೆ ವಿವಿಧ ಸಂದರ್ಭಗಳಲ್ಲಿ ಒಟ್ಟು 16 ಬಾರಿ ಆರ್ಥಿಕ ನೆರವು (ಬೇಲ್‌ಔಟ್) ಕೋರಿದೆ. ಶ್ರೀಲಂಕಾ ಸರ್ಕಾರವು ಆಮದು ಅಥವಾ ರಫ್ತು ಮೇಲೆ ಯಾವುದೇ ಸುಂಕವನ್ನು ಅನ್ವಯಿಸದ (ಲೈಸರ್‌ ಫೇರ್–ಸರ್ಕಾರದ ಕಡಿಮೆ ಹಸ್ತಕ್ಷೇಪ) ವ್ಯಾಪಾರ ನೀತಿ ಅಳವಡಿಸಿಕೊಂಡಿರುವುದೂ ಕೂಡ ಪ್ರಸ್ತುತ ಆರ್ಥಿಕ ಬಿಕ್ಕಟ್ಟಿಗೆ ಒಂದು ಕಾರಣ ಎನ್ನಲಾಗಿದೆ. 

ವಿದೇಶಿ ವಿನಿಮಯ ಕೊರತೆ: ಶ್ರೀಲಂಕಾದಲ್ಲಿ ಕಳೆದ 12 ತಿಂಗಳಲ್ಲಿ ಅನೇಕ ಅಗತ್ಯ ವಸ್ತುಗಳ ಬೆಲೆ ವಿಪರೀತ ಏರಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ, ವಿದೇಶಿ ವಿನಿಮಯ ಕೊರತೆ. ಅಳಿದುಳಿದ ವಿದೇಶ ವಿನಿಮಯವನ್ನು ಉಳಿತಾಯ ಮಾಡಲು, ಸರ್ಕಾರವು ಆಮದು ನಿಷೇಧದಂತಹ ಕ್ರಮಗಳನ್ನು ಜಾರಿಗೊಳಿಸಿತು. ಅರಿಶಿಣ ಪುಡಿ, ಅಡುಗೆ ಎಣ್ಣೆಯಿಂದ ಹಿಡಿದು, ವಾಹನಗಳ ಆಮದಿನ ಮೇಲೆ ಸರ್ಕಾರ ನಿರ್ಬಂಧ ವಿಧಿಸಿತು. ಹೀಗಾಗಿ ಕೆಲವು ಆಹಾರ ಪದಾರ್ಥಗಳಿಗೆ ದೇಶದಲ್ಲಿ ಹಾಹಾಕಾರ ಶುರುವಾಗಿ, ಈಗ ಆಹಾರ ತುರ್ತುಪರಿಸ್ಥಿತಿ ಘೋಷಿಸುವ ಮಟ್ಟವನ್ನು ತಲುಪಿದೆ. 

ಅಗತ್ಯ ಆಹಾರ ಮತ್ತು ಔಷಧಿ ಖರೀದಿಗೆ ಡಾಲರ್‌ ಹೊಂದಿಸಲು ಸರ್ಕಾರ ಕಷ್ಟಪಡುತ್ತಿದೆ. ವಾಹನ ಚಾಲಕರು ಇಂಧನವನ್ನು ಮಿತವಾಗಿ ಬಳಸಬೇಕು ಎಂದು ಇಂಧನ ಸಚಿವ ಉದಯ ಗಮ್ಮನ್‌ಪಿಲ ಒತ್ತಾಯಿಸಿದ್ದಾರೆ. ಹೀಗೆ ಮಾಡಿದರೆ ಮಾತ್ರ, ದೇಶದ ಅಲ್ಪ ವಿದೇಶಿ ವಿನಿಮಯವನ್ನು ಅಗತ್ಯ ಔಷಧಗಳು ಮತ್ತು ಲಸಿಕೆ ಖರೀದಿಸಲು ಬಳಸಲು ಸಾಧ್ಯ ಎಂದು ಅವರು ಮನವರಿಕೆ ಮಾಡಿಕೊಡಲು ಯತ್ನಿಸಿದ್ಧಾರೆ.  

ಕುಸಿದ ಕರೆನ್ಸಿ ಮೌಲ್ಯ: ಸಾಂಕ್ರಾಮಿಕ ರೋಗ ಮತ್ತು ಜಾಗತಿಕ ಮಾರುಕಟ್ಟೆಯ ಬೆಲೆಗಳಿಂದಾಗಿ ದೇಶದಲ್ಲಿ ಸ್ಥಳೀಯ ಕರೆನ್ಸಿ ವಿಪರೀತ ಕುಸಿತ ಕಂಡಿದೆ. ಹೀಗಾಗಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. 2021ರಲ್ಲಿ ಅಮೆರಿಕ ಡಾಲರ್ ಎದುರು ಶ್ರೀಲಂಕಾ ರೂಪಾಯಿ ಶೇ 7.5ದಷ್ಟು ಕುಸಿದಿದೆ. ಸ್ಥಳೀಯ ಕರೆನ್ಸಿ ಮೌಲ್ಯ ಹೆಚ್ಚಿಸಲು ಶ್ರೀಲಂಕಾದ ಕೇಂದ್ರೀಯ ಬ್ಯಾಂಕ್ ಇತ್ತೀಚೆಗೆ ಬಡ್ಡಿದರವನ್ನು ಹೆಚ್ಚಿಸಿ ಜನರಿಗೆ ಗಾಯದ ಮೇಲೆ ಬರೆ ಎಳೆಯಿತು. ಸಾಂಕ್ರಾಮಿಕ ರೋಗದ ಮಧ್ಯೆಯೂ ಬಡ್ಡಿದರಗಳನ್ನು ಹೆಚ್ಚಿಸಿದ ಏಷ್ಯಾ ವಲಯದ ಮೊದಲ ದೇಶ ಎನಿಸಿಕೊಂಡಿತು. 

ಕರಗಿದ ವಿದೇಶಿ ಮೀಸಲು: ಶ್ರೀಲಂಕಾದ ವಿದೇಶಿ ಮೀಸಲು ಜುಲೈ ಅಂತ್ಯದಲ್ಲಿ ಸುಮಾರು ₹21,000 ಕೋಟಿಗೆ (2.8 ಬಿಲಿಯನ್ ಯುಎಸ್ ಡಾಲರ್‌ಗೆ) ಕುಸಿದಿದೆ. 2019ರ ನವೆಂಬರ್‌ನಲ್ಲಿ ಇದರ ಪ್ರಮಾಣ ಸುಮಾರು ₹56,000 ಕೋಟಿ (7.5 ಬಿಲಿಯನ್ ಡಾಲರ್) ಇತ್ತು. ಉಳಿದಿರುವ ಅಲ್ಪ ಮೊತ್ತದಲ್ಲಿ ಎಲ್ಲವನ್ನೂ ಸರಿದೂಗಿಸಬೇಕಾದ ಒತ್ತಡದಲ್ಲಿ ದೇಶ ಇದೆ. 

ಆಧಾರ: ರಾಯಿಟರ್ಸ್, ಏಷ್ಯಾ&ಪೆಸಿಫಿಕ್ ಪಾಲಿಸಿ ಸೊಸೈಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು