ಲಾಹೋರ್: ದುಬಾರಿ ಉಡುಗೊರೆಗಳನ್ನು ವೈಯಕ್ತಿಕ ಲಾಭಕ್ಕೆ ಮಾರಿಕೊಂಡ ‘ತೋಶಾಖಾನಾ’ ಪ್ರಕರಣದಲ್ಲಿ ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಬಂಧನಕ್ಕೆ ಎರಡನೇ ಬಾರಿ ಪ್ರಯತ್ನಿಸಿದ ಪೊಲೀಸರು ಮತ್ತು ಇಮ್ರಾನ್ ಬೆಂಬಲಿಗರ ನಡುವೆ ಮಂಗಳವಾರ ಭಾರಿ ಘರ್ಷಣೆ ನಡೆದಿದೆ.
ಇಮ್ರಾನ್ ಬಂಧಿಸದಂತೆ ತಡೆಯಲು ಅವರ ಬೆಂಬಲಿಗರು ಇಮ್ರಾನ್ ನಿವಾಸದ ಸುತ್ತಲೂ ಭದ್ರಕೋಟೆಯಂತೆ ಜಮಾಯಿಷಿದ್ದರು. ಪೊಲೀಸರ ವಿರುದ್ಧ ಉಗ್ರ ಪ್ರತಿಭಟನೆಗೆ ಇಳಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ, ಅಶ್ರುವಾಯು, ಲಾಠಿ ಪ್ರಯೋಗಿಸಿದರು. ಪೊಲೀಸರ ಮೇಲೆ ಇಮ್ರಾನ್ ಬೆಂಬಲಿಗರೂ ಕಲ್ಲು ತೂರಿದರು.
ಬಂಧನ ಕಾರ್ಯಾಚರಣೆ ತಂಡದ ನೇತೃತ್ವ ವಹಿಸಿದ್ದ ಇಸ್ಲಾಮಾಬಾದ್ ಡಿಐಜಿ (ಕಾರ್ಯಾಚರಣೆ) ಶಾಹಜಾದ್ ಬುಕಾರಿ ಸೇರಿ ಹಲವು ಪೊಲೀಸರು ಮತ್ತು ಪ್ರತಿಭಟನಕಾರರು ಗಾಯಗೊಂಡಿರುವುದಾಗಿ ವರದಿಗಳು ಹೇಳಿವೆ.
ಘರ್ಷಣೆ ಭುಗಿಲೆದ್ದ ಕೆಲ ತಾಸುಗಳಲ್ಲಿ ಇಮ್ರಾನ್ ಖಾನ್, ‘ನಾನು ಬಂಧಿತನಾದರೂ ಅಥವಾ ಹತ್ಯೆಗೀಡಾದರೂ ನೀವು (ಜನರು) ನಿಮ್ಮ ಹಕ್ಕುಗಳಿಗಾಗಿ ಹೋರಾಡಿ. ದೇಶವನ್ನು ಗುಲಾಮಗಿರಿಗೆ ತಳ್ಳಲು ನಿರ್ಧಾರ ತೆಗೆದುಕೊಳ್ಳುತ್ತಿರುವ ಒಬ್ಬ ವ್ಯಕ್ತಿಯ ಗುಲಾಮಗಿರಿ ಮತ್ತು ಕಳ್ಳರನ್ನು ಸ್ವೀಕರಿಸುವುದಿಲ್ಲವೆಂಬುದನ್ನು ಸಾಬೀತುಪಡಿಸಿ’ ಎಂದು ವಿಡಿಯೊ ಸಂದೇಶ ನೀಡಿದ್ದಾರೆ.
ಇಮ್ರಾನ್ ಅವರನ್ನು ಬಂಧಿಸಲು ಅವರ ಜಮಾನ್ ಪಾರ್ಕ್ ನಿವಾಸಕ್ಕೆ ಪೊಲೀಸರು ಬರುತ್ತಿದ್ದಂತೆಯೇ ಈ ವಿಡಿಯೊವನ್ನು ಅವರ ಪಿಟಿಐ ಪಕ್ಷ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ.
‘ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ನಿಮಗಾಗಿ ಈ ಯುದ್ಧ ನಡೆಸುತ್ತಿದ್ದೇನೆ. ಜೀವನದುದ್ದಕ್ಕೂ ಹೋರಾಡುತ್ತಿದ್ದೇನೆ ಮತ್ತು ಅದನ್ನು ಮುಂದುವರಿಸುತ್ತೇನೆ. ನನ್ನನ್ನು ಬಂಧಿಸಿದ ನಂತರ ರಾಷ್ಟ್ರವು ನಿದ್ರೆಗೆ ಜಾರುತ್ತದೆ ಎನ್ನುವುದು ಅವರ ಭಾವನೆ. ಆದರೆ, ಅದು ಸುಳ್ಳೆಂದು ಸಾಬೀತುಪಡಿಸಿ. ನಿಜವಾದ ಸ್ವಾತಂತ್ರ್ಯಕ್ಕಾಗಿ ಹೊರಬಂದು ಹೋರಾಡಿ’ ಎಂದು ಖಾನ್ ಕರೆಕೊಟ್ಟಿದ್ದಾರೆ.
‘ತೋಶಾಖಾನಾ ಪ್ರಕರಣದಲ್ಲಿ ಪಿಟಿಐ ಅಧ್ಯಕ್ಷರನ್ನು ಬಂಧಿಸಲು ನಮ್ಮ ತಂಡ ಇಲ್ಲಿಗೆ ಬಂದಿದೆ’ ಎಂದು ಇಸ್ಲಾಮಾಬಾದ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನ್ಯಾಯಾಲಯದ ನಿರ್ದೇಶನದಂತೆ ಖಾನ್ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಗೃಹ ಸಚಿವ ರಾಣಾ ಸನಾವುಲ್ಲಾ ತಿಳಿಸಿದ್ದಾರೆ.
ಬಂಧನ ವಾರಂಟ್‌ಗಳ ವಿರುದ್ಧ ಖಾನ್ ಅವರ ಪಕ್ಷವು ಇಸ್ಲಾಮಾಬಾದ್ ಹೈಕೋರ್ಟ್ ಮೊರೆ ಹೋಗಿದೆ. ತಕ್ಷಣವೇ ವಿಚಾರಣೆ ನಡೆಸಬೇಕೆಂಬ ಮನವಿ ತಿರಸ್ಕರಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಮೀರ್ ಫಾರೂಕ್ ವಿಚಾರಣೆಯನ್ನು ಬುಧವಾರಕ್ಕೆ ನಿಗದಿಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.