ವಾಷಿಂಗ್ಟನ್: ಮಗನ ಮಗುವಿಗೆ ಬಾಡಿಗೆ ತಾಯ್ತನದ ಮೂಲಕ ಮಹಿಳೆಯೊಬ್ಬರು ಜನ್ಮ ನೀಡಿದ ಅಪರೂಪದ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ಉತಾಹ್‌ನಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.
56 ವರ್ಷದ ನ್ಯಾನ್ಸಿ ಹೌಕ್ ಎಂಬವರೇ ಮಗನ ಮಗುವಿಗೆ ‘ತಾಯಿ’ಯಾದ ಮಹಿಳೆ. ಮಗ ಜೆಫ್ ಹೌಕ್ ಹಾಗೂ ಸೊಸೆ ಕ್ಯಾಂಬಿರ ಅವರ ಐದನೇ ಮಗುವಿಗೆ ಬಾಡಿಗೆ ತಾಯ್ತನದ ಮೂಲಕ ನ್ಯಾನ್ಸಿ ‘ತಾಯಿ’ಯಾಗಿದ್ದಾರೆ. ದಂಪತಿಗೆ ಹೆಣ್ಣು ಮಗುವಾಗಿದ್ದು ‘ಹೆನ್ನಾ’ ಎಂದು ಹೆಸರಿಡಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಕ್ಯಾಂಬಿರ ಅವರು ಗರ್ಭಕಂಠ (hysterectomy) ಸರ್ಜರಿಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ. ಹೀಗಾಗಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಮುಂದಾಗಿದ್ದರು. ಮಗ ಹಾಗೂ ಸೊಸೆಯ ಆಸೆಯನ್ನು ಪೂರೈಸಲು ನ್ಯಾನ್ಸಿ ಮುಂದೆ ಬಂದಿದ್ದರು. ಇದೀಗ ಬಾಡಿಗೆ ತಾಯ್ತನದ ಮೂಲಕ ಮಗ ಹಾಗೂ ಸೊಸೆಗೆ ಮುದ್ದಾದ ಹೆಣ್ಣು ಮಗುವನ್ನು ಹೆತ್ತು ಕೊಟ್ಟಿದ್ದಾರೆ.
ಸುಮಾರು ಒಂಬತ್ತು ಗಂಟೆಗಳ ಪ್ರಸವ ನೋವಿನ ಬಳಿಕ ನ್ಯಾನ್ಸಿ ಮಗುವಿಗೆ ಜನ್ಮ ನೀಡಿದ್ದಾರೆ. ಇದೊಂದು ಮರೆಯಲಾಗದ ಹಾಗೂ ಆಧ್ಯಾತ್ಮಿಕ ಅನುಭೂತಿ ಎಂದು ನ್ಯಾನ್ಸಿಯವರು ತಮ್ಮ ಪ್ರಸವ ಗಳಿಗೆಯನ್ನು ಬಣ್ಣಿಸಿದ್ದಾರೆ.
ಅಲ್ಲದೇ ‘ಮಗು ಪಡೆದಿದ್ದು ಭಾವನಾತ್ಮಕ ವಿಷಯವಾಗಿದ್ದರೂ, ಅದನ್ನು ನನ್ನ ಮನೆಗೆ ಕೊಂಡೊಯ್ಯುತ್ತಿಲ್ಲ ಎನ್ನುವ ಬೇಸರ ನನ್ನನ್ನು ಕಾಡಿದೆ’ ಎಂದು ಅವರು ಭಾವುಕರಾಗಿದ್ದಾರೆ.
ವೃತ್ತಿಯಲ್ಲಿ ವೆಬ್ ಡೆವಲಪರ್ ಆಗಿರುವ ಜೆಫ್ ಹೌಕ್ ಈ ಸಂದರ್ಭವನ್ನು ‘ಸುಂದರ ಕ್ಷಣ’ ಎಂದು ಬಣ್ಣಿಸಿದ್ದಾರೆ. ‘ತಾಯಿಯೊಬ್ಬರು ಮಗುವಿಗೆ ಜನ್ಮ ನೀಡುವ ಸಂದರ್ಭವನ್ನು ನೋಡಲು ಎಷ್ಟು ಮಕ್ಕಳಿಗೆ ಅವಕಾಶ ಸಿಗುತ್ತದೆ?’ ಎಂದು ಅವರು ಖುಷಿ ವ್ಯಕ್ಯ ಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.