ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ ಪೂರ್ಣ ವಶಕ್ಕೆ: ತಾಲಿಬಾನ್‌ ಘೋಷಣೆ

ಪಂಜ್‌ಶಿರ್‌ ಕಣಿವೆಯ ಪ್ರತಿರೋಧ ಅಂತ್ಯ: ಬಂಡಾಯ ಸಹಿಸುವುದಿಲ್ಲ ಎಂಬ ಎಚ್ಚರಿಕೆ
Last Updated 6 ಸೆಪ್ಟೆಂಬರ್ 2021, 19:52 IST
ಅಕ್ಷರ ಗಾತ್ರ

ಕಾಬೂಲ್‌: ಪಂಜ್‌ಶಿರ್‌ ಕಣಿವೆಯನ್ನು ವಶಕ್ಕೆ ಪಡೆಯಲಾಗಿದೆ. ಇದರಿಂದಾಗಿ ಅಫ್ಗಾನಿಸ್ತಾನ ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ಬಂದಿದೆ ಎಂದು ತಾಲಿಬಾನ್‌ ಸೋಮವಾರ ಹೇಳಿದೆ. ರಾಜಧಾನಿ ಕಾಬೂಲ್‌ ಅನ್ನು ಆಗಸ್ಟ್‌ 15ರಂದು ವಶಕ್ಕೆ ಪಡೆದಿದ್ದ ತಾಲಿಬಾನ್‌ ವಿರುದ್ಧ ಪಂಜ್‌ಶಿರ್‌ ಪ್ರಾಂತ್ಯದಲ್ಲಿ ಪ್ರತಿರೋಧ ವ್ಯಕ್ತವಾಗಿತ್ತು.

ಪಂಜ್‌ಶಿರ್‌ ಪ್ರಾಂತ್ಯದ ಗವರ್ನರ್‌ ಕಚೇರಿಯಲ್ಲಿ ತನ್ನ ಸೈನಿಕರು ಇರುವ ಚಿತ್ರವನ್ನು ತಾಲಿಬಾನ್‌ ಬಿಡುಗಡೆ ಮಾಡಿದೆ. ಈ ಪ್ರಾಂತ್ಯವು 1980ರ ದಶಕದಲ್ಲಿ ಸೋವಿಯತ್‌ ರಷ್ಯಾ ಪಡೆಗಳು ಮತ್ತು 1990ರ ದಶಕದಲ್ಲಿ ತಾಲಿಬಾನ್‌ ಪಡೆಯ ವಿರುದ್ಧ ನಿಂತಿತ್ತು. ಈ ಎರಡೂ ಸಂದರ್ಭಗಳಲ್ಲಿಯೂ ಪ್ರಾಂತ್ಯದ ಪ್ರತಿರೋಧ
ವನ್ನು ದಮನ ಮಾಡಲು ಸಾಧ್ಯವಾಗಿರಲಿಲ್ಲ.

ತಾಲಿಬಾನ್‌ ವಿರೋಧಿ ಹೋರಾಟಗಾರರು ಮತ್ತು ಅಫ್ಗಾನಿಸ್ತಾನ ಭದ್ರತಾ ಪಡೆಯ ಸೈನಿಕರು ಜತೆಯಾಗಿ ನ್ಯಾಷನಲ್‌ ರೆಸಿಸ್ಟೆನ್ಸ್‌ ಫ್ರಂಟ್‌ (ಎನ್ಆರ್‌ಎಫ್‌) ರೂಪಿಸಿದ್ದರು. ಪಂಜ್‌ಶಿರ್‌ ಪ್ರದೇಶವನ್ನು ಎನ್‌ಆರ್‌ಎಫ್‌ ತನ್ನ ವಶದಲ್ಲಿ ಇರಿಸಿಕೊಂಡಿತ್ತು.

ಯುದ್ಧದಲ್ಲಿ ಭಾರಿ ಹಿನ್ನಡೆ ಆಗಿದೆ ಎಂದು ಎನ್‌ಆರ್‌ಎಫ್‌ ಭಾನುವಾರ ಹೇಳಿತ್ತು. ಕದನ ವಿರಾಮದ ಬೇಡಿಕೆಯನ್ನೂ ಮುಂದಿರಿಸಿತ್ತು. ಆದರೆ, ತನ್ನ ಸೈನಿಕರು ಪಂಜ್‌ಶಿರ್‌ ಕಣಿವೆಯ ಪ್ರಮುಖ ಸ್ಥಳಗಳಲ್ಲಿ ನೆಲೆಯಾಗಿದ್ದಾರೆ ಮತ್ತು ಹೋರಾಟ ಮುಂದುವರಿಯಲಿದೆ ಎಂದು ಸೋಮವಾರ ಎನ್‌ಆರ್‌ಎಫ್‌ ಟ್ವೀಟ್‌ ಮಾಡಿದೆ.

1980ರ ದಶಕದಿಂದಲೇ ದೇಶದ ಪರವಾಗಿ ಹೋರಾಟ ನಡೆಸಿದ್ದ ಕಮಾಂಡರ್‌ ಅಹ್ಮದ್‌ ಶಾ ಮಸೂದ್‌ ಅವರ ಮಗ ಅಹ್ಮದ್‌ ಮಸೂದ್ ಅವರಿಗೆ ನಿಷ್ಠರಾದ ಸೈನಿಕರು ಎನ್‌ಆರ್‌ಎಫ್‌ನಲ್ಲಿ ಇದ್ಧಾರೆ.

ಫೈಜ್‌–ಬರದರ್‌ ಭೇಟಿ ದೃಢ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಮುಖ್ಯಸ್ಥ ಲೆ.ಜ. ಫೈಜ್‌ ಹಮೀದ್ ಅವರು ತಾಲಿಬಾನ್‌ ನಾಯಕ ಮುಲ್ಲಾ ಅಬ್ದುಲ್‌ ಘನಿ ಬರದರ್‌ ಅವರನ್ನು ಕಾಬೂಲ್‌ನಲ್ಲಿ ಭೇಟಿಯಾಗಿದ್ದಾರೆ ಎಂಬ ವರದಿಗಳನ್ನು ಝಬೀವುಲ್ಲ ಮುಜಾಹಿದ್‌ ದೃಢಪಡಿಸಿದ್ದಾರೆ.

ಫೈಜ್‌ ಅವರು ಕಳೆದ ವಾರ ಕಾಬೂಲ್‌ಗೆ ದಿಢೀರ್‌ ಭೇಟಿ ಕೊಟ್ಟಿದ್ದರು. ಅಫ್ಗಾನಿಸ್ತಾನವು ತಾಲಿಬಾನ್‌ ವಶವಾದ ಬಳಿಕ ಆ ದೇಶಕ್ಕೆ ವಿದೇಶದ ಹಿರಿಯ ಅಧಿಕಾರಿಯೊಬ್ಬರು ಭೇಟಿ ನೀಡಿದ್ದು ಅದೇ ಮೊದಲು.

ಸರ್ಕಾರ ರಚನೆಗೆ ಸಂಬಂಧಿಸಿ ಬರದರ್‌ ಮತ್ತು ಹಖ್ಖಾನಿ ಗುಂಪಿನ ನಡುವೆ ಭಿನ್ನಮತವಿದೆ. ಈ ಎರಡು ಗುಂಪುಗಳ ನಡುವೆ ಮಧ್ಯಸ್ಥಿಕೆ ವಹಿಸುವುದಕ್ಕಾಗಿ ಫೈಜ್‌ ಅವರು ಕಾಬೂಲ್‌ಗೆ ಹೋಗಿದ್ದರು ಎನ್ನಲಾಗಿದೆ.

‘ಮಧ್ಯಂತರ ಸರ್ಕಾರ ಶೀಘ್ರ ಅಸ್ತಿತ್ವಕ್ಕೆ’

ಕಾಬೂಲ್‌ ಅನ್ನು ವಶಪಡಿಸಿಕೊಂಡು ಮೂರು ವಾರಗಳಾಗಿದ್ದರೂ ಹೊಸ ಸರ್ಕಾರ ರಚಿಸುವುದು ತಾಲಿಬಾನ್‌ಗೆ ಸಾಧ್ಯವಾಗಿಲ್ಲ. ಅಫ್ಗಾನಿಸ್ತಾನದ ಪ್ರಮುಖ ಸಂಸ್ಥೆಗಳನ್ನು ತಾಲಿಬಾನ್‌ ತನ್ನ ನಿಯಂತ್ರಣಕ್ಕೆ ಪಡೆದಿದೆ.

ಮಧ್ಯಂತರ ಸರ್ಕಾರವು ಶೀಘ್ರ ಅಸ್ತಿತ್ವಕ್ಕೆ ಬರಲಿದೆ. ಮುಂದೆ ಬದಲಾವಣೆಗೆ ಅವಕಾಶ ಕಲ್ಪಿಸಿ ಈ ಸರ್ಕಾರ ರಚಿಸಲಾಗುವುದು. ಮಹತ್ವದ ನಿರ್ಧಾರಗಳೆಲ್ಲವೂಆಗಿವೆ. ತಾಂತ್ರಿಕ ವಿಚಾರಗಳು ಮಾತ್ರ ಅಂತಿಮಗೊಳ್ಳಬೇಕಿದೆ ಎಂದು ತಾಲಿಬಾನ್‌ ವಕ್ತಾರ ಝಬೀವುಲ್ಲಾ ಮುಜಾಹಿದ್‌ ಹೇಳಿದ್ದಾರೆ.

1996ರಿಂದ 2001 ನಡುವೆ ತಾಲಿಬಾನ್‌ ನೇತೃತ್ವದ ಸರ್ಕಾರ ಇದ್ದಾಗ ಕಠಿಣ ನಿಯಮಗಳು ಜಾರಿಯಲ್ಲಿದ್ದವು ಮತ್ತು ಕ್ರೂರವಾದ ಶಿಕ್ಷಾ ವ್ಯವಸ್ಥೆ ಇತ್ತು. ಮಹಿಳೆಯರಿಗೆ ಯಾವುದೇ ಸ್ವಾತಂತ್ರ್ಯ ಇರಲಿಲ್ಲ. ಈ ಬಾರಿ, ಸರ್ಕಾರವು ಎಲ್ಲರನ್ನೂ ಒಳಗೊಳ್ಳಲಿದೆ ಮತ್ತು ಅಫ್ಗಾನಿಸ್ತಾನದ ಸಂಕೀರ್ಣವಾದ ಬುಡಕಟ್ಟು ಗುಂಪುಗಳಿಗೆ ಪ್ರಾತಿನಿಧ್ಯ ದೊರೆಯಲಿದೆ ಎಂದು ತಾಲಿಬಾನ್‌ ಹೇಳಿದೆ.

ಆಹ್ವಾನ: ಚೀನಾ ಮೌನ

ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗುವಂತೆ ಚೀನಾ, ಪಾಕಿಸ್ತಾನ, ರಷ್ಯಾ, ಟರ್ಕಿ, ಇರಾನ್‌ ಮತ್ತು ಕತಾರ್‌ಗೆ ತಾಲಿಬಾನ್‌ ಆಹ್ವಾನ ನೀಡಿದೆ ಎಂಬ ವರದಿಗೆ ಚೀನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂತಹ ಆಹ್ವಾನದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರಾದ ವಾಂಗ್‌ ವೆನ್‌ಬಿನ್‌ ಹೇಳಿದ್ದಾರೆ.

ತನ್ನ ಮಿತ್ರ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ರಷ್ಯಾ ಜತೆಗೆ ಸೇರಿಕೊಂಡು ಅಫ್ಗಾನಿಸ್ತಾನ ನೀತಿ ಏನಿರಬೇಕು ಎಂಬ ಬಗ್ಗೆ ಚೀನಾ ಸಮಾಲೋಚನೆ ನಡೆಸುತ್ತಿದೆ. ಅಫ್ಗಾನಿಸ್ತಾನದಲ್ಲಿರುವ ತಮ್ಮ ರಾಯಭಾರ ಕಚೇರಿಗಳನ್ನು ಈ ಮೂರೂ ದೇಶಗಳು ತೆರೆದೇ ಇರಿಸಿವೆ. ಜತೆಗೆ, ಸರ್ಕಾರ ರಚನೆಯಾದ ಬಳಿಕ ಅದಕ್ಕೆ ಮಾನ್ಯತೆ ನೀಡಲು ಕೂಡ ಈ ದೇಶಗಳು ಉತ್ಸುಕವಾಗಿವೆ.

ಮಹಿಳಾ ಪೊಲೀಸ್‌ ಹತ್ಯೆ

ಮಹಿಳಾ ಪೊಲೀಸ್‌ ಸಿಬ್ಬಂದಿಯೊಬ್ಬರನ್ನು ಘೋರ್‌ ಪ್ರಾಂತ್ಯದಲ್ಲಿ ತಾಲಿಬಾನ್‌ ಸೈನಿಕರು ಗುಂಡಿಟ್ಟು ಕೊಂದಿದ್ದಾರೆ ಎಂದು ಸ್ಥಳೀಯ ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿದ್ಧಾರೆ. ಮಹಿಳೆಯು ಆರು ತಿಂಗಳ ಗರ್ಭಿಣಿ ಎಂದು ಹೇಳಲಾಗಿದೆ. ನಿಗರ ಎಂಬ ಹೆಸರಿನ ಈ ಮಹಿಳೆಯ ಗಂಡ ಮತ್ತು ಮಕ್ಕಳ ಎದುರೇ ಹತ್ಯೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT