ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಪ್ರಾಬಲ್ಯ: ಅಮೆರಿಕ ವೈಫಲ್ಯ?

Last Updated 16 ಆಗಸ್ಟ್ 2021, 19:36 IST
ಅಕ್ಷರ ಗಾತ್ರ

ಲಂಡನ್: ಅಫ್ಗಾನಿಸ್ತಾನದಲ್ಲಿ ಎರಡು ದಶಕಗಳಿಂದ ರಕ್ಷಣೆಯ ಗೋಡೆಯಂತಿದ್ದ ಅಮೆರಿಕವು ತನ್ನ ಸೇನೆಯನ್ನು ಅಲ್ಲಿಂದ ಹಿಂತೆಗೆದುಕೊಳ್ಳುವ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದು ವೈಫಲ್ಯವೂ ಹೌದು ಎನ್ನುತ್ತಿದೆ ಅಂತರರಾಷ್ಟ್ರೀಯ ಸಮುದಾಯ. ಈಗಿನ ಪರಿಸ್ಥಿತಿಗೆ ಅಮೆರಿಕ ಕಾರಣ ಎಂಬ ಅರ್ಥದಲ್ಲಿ ಇರಾನ್, ಬ್ರಿಟನ್, ಜರ್ಮನಿ ಮೊದಲಾದ ದೇಶಗಳು ಮಾತನಾಡಿವೆ.

ಅಫ್ಗಾನಿಸ್ತಾನದಲ್ಲಿ ಅಮೆರಿಕದ ಸೇನಾ ವೈಫಲ್ಯದಿಂದ ದೇಶದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಅವಕಾಶ ಸಿಕ್ಕದೆ ಎಂದುಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸೋಮವಾರ ಹೇಳಿದ್ದಾರೆ.

‘ಅಮೆರಿಕವು ತನ್ನ ಸೇನೆ ವಾಪಸ್ ಪಡೆದಿದ್ದು ಮತ್ತು ಅದರ ಹಿಂದೆಯೇ ಎದುರಾದ ಸೋಲು, ಅಫ್ಗಾನಿಸ್ತಾನದಲ್ಲಿ ಜೀವನ, ಭದ್ರತೆ ಮತ್ತು ಸುದೀರ್ಘ ಶಾಂತಿ ಪುನಃಸ್ಥಾಪಿಸಲು ಒಂದು ಅವಕಾಶವಾಗಿ ಪರಿಣಮಿಸಬೇಕು’ ಎಂದು ರೈಸಿ ಹೇಳಿದ್ದಾರೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿ ವರದಿ ಮಾಡಿದೆ.

ಅಮೆರಿಕ ಪಡೆಗಳ ವಿರುದ್ಧ ತಾಲಿಬಾನ್ ಹೋರಾಟಗಾರರಿಗೆ ಇರಾನ್ ರಹಸ್ಯ ನೆರವು ನೀಡಿದೆ ಎಂದು ಈ ಹಿಂದೆ ಅಮೆರಿಕ ಆರೋಪಿಸಿತ್ತು. ಎಲ್ಲಾ ಜನಾಂಗೀಯ ಗುಂಪುಗಳು ಮತ್ತು ಪಂಗಡಗಳನ್ನು ಒಳಗೊಂಡ ಅಫ್ಗನ್ ಸರ್ಕಾರವನ್ನು ಬೆಂಬಲಿಸುವ ಇರಾನ್, ಅಮೆರಿಕದ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿತ್ತು.

ಅಫ್ಗಾನಿಸ್ತಾನವನ್ನು ತೊರೆಯುವ ಜೋ ಬೈಡನ್ ಅವರ ನಿರ್ಧಾರದಿಂದ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಬ್ರಿಟನ್ ರಕ್ಷಣಾ ಸಚಿವಬೆನ್ ವ್ಯಾಲೇಸ್ ಆರೋಪಿಸಿದ್ದಾರೆ.ಅಫ್ಗನ್‌ನಲ್ಲಿ ತಾಲಿಬಾನ್ ಪ್ರಾಬಲ್ಯ ಪಡೆದ ಹಿನ್ನೆಲೆಯಲ್ಲಿ ಮತ್ತೆ ನ್ಯಾಟೊ ಪಡೆಗಳನ್ನು ರವಾನಿಸುವ ಸಾಧ್ಯತೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಮತ್ತೆ ಅಫ್ಗನ್‌ಗೆ ಸೇನೆ ಕಳುಹಿಸುವುದಿಲ್ಲ ಎಂದು ಬ್ರಿಟನ್ ಸೋಮವಾರ ಸ್ಪಷ್ಟಪಡಿಸಿದೆ.

ಅಫ್ಗಾನಿಸ್ತಾನದಿಂದ ಸೇನಾ ವಾಪಸಾತಿಯನ್ನು ಅಮೆರಿಕ ಘೋಷಿಸಿದ್ದು ತನ್ನ ಆಂತರಿಕ ರಾಜಕೀಯ ಕಾರಣಗಳಿಂದ ಎಂದುಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರು ಹೇಳಿದ್ದಾರೆ.ಸುಮಾರು ಎರಡು ದಶಕಗಳಿಂದ ಭದ್ರತೆಯ ಹೊಣೆ ಹೊತ್ತಿದ್ದ ನ್ಯಾಟೊ ಪಡೆಗಳನ್ನು ಹೊರ ಕಳಿಸುವುದು ಅಂತಿಮವಾಗಿ ಅಮೆರಿಕದ ನಿರ್ಧಾರವಾಗಿತ್ತು ಎಂದು ಅವರು ಹೇಳಿದ್ದಾರೆ.

‘ಅಮೆರಿಕವು ಅಫ್ಗನ್‌ನಲ್ಲಿ ಉಳಿದರೆ ಮಾತ್ರ ನಾವು ನಮ್ಮ ಸೇನೆಯನ್ನು ಅಲ್ಲಿ ಮುಂದುವರಿಸುತ್ತೇವೆ ಎಂದು ಅಮೆರಿಕಕ್ಕೆ ಅನೇಕ ಬಾರಿ ಸ್ಪಷ್ಪಪಡಿಸಿದ್ದೆವು’ ಎಂದು ಮರ್ಕೆಲ್ ಹೇಳಿದ್ದಾರೆ. ಸೇನಾ ವಾಪಸಾತಿಯಿಂದ ತಾಲಿಬಾನ್ ಮತ್ತೆ ಪ್ರವರ್ಧಮಾನಕ್ಕೆ ಬರಲು ಕಾರಣವಾಯಿತು ಎಂದು ಅವರು ವಿಶ್ಲೇಷಿಸಿದ್ದಾರೆ.

ಅಮೆರಿಕದ ನಿರೀಕ್ಷೆ ತಲೆಕೆಳಗಾಗಿಸಿದ ತಾಲಿಬಾನ್

ತಾಲಿಬಾನ್ ಸಂಘಟನೆಯು ಅಫ್ಗಾನಿಸ್ತಾನವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡ ವೇಗಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಉನ್ನತ ಅಧಿಕಾರಿಗಳು ದಿಗ್ಭ್ರಮೆಗೊಂಡಿದ್ದಾರೆ. ಅಷ್ಟು ಸುಲಭವಾಗಿ ಅಫ್ಗನ್ ಸರ್ಕಾರ ಪತನವಾಗಿದ್ದು, ಮತ್ತು ಆನಂತರ ಉಂಟಾದ ಗಲಭೆಗಳು ಅಮೆರಿಕ ಸೇನೆಯ ಅತ್ಯುಚ್ಛ ನಾಯಕರೂ ಆಗಿರುವ ಬೈಡನ್ ಅವರನ್ನು ಗಂಭೀರ ಪರೀಕ್ಷೆಗೆ ಒಡ್ಡಿದವು. ಇದು ಬೈಡನ್ ವೈಫಲ್ಯ ಎಂದು ರಿಪಬ್ಲಿಕನ್ ಸದಸ್ಯರು ನೇರವಾಗಿ ದೂರಿದ್ದಾರೆ.

ಅಮೆರಿಕದ ಸೇನೆಯನ್ನು ವಾಪಸ್ ಕರೆಸಿಕೊಂಡ ಬೆನ್ನಲ್ಲೇ, ಅಲ್ಲಿದ್ದ ತನ್ನ ರಾಜತಾಂತ್ರಿಕ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರಲು ಅಮೆರಿಕ ಏದುಸಿರುಬಿಡಬೇಕಾಯಿತು. ಅಫ್ಗನ್ ಸೇನೆಯ ದಿಢೀರ್ ವೈಫಲ್ಯ ಮತ್ತು ತಾಲಿಬಾನಿಗಳ ಚುರುಕಿನ ಆಕ್ರಮಣದಿಂದ ಅಮೆರಿಕ ವಿಚಲಿತಗೊಂಡಿದ್ದು ಸುಳ್ಳಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

‘ತಾಲಿಬಾನಿಗಳಿಂದ ತಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹೋರಾಡುವ ‘ಆತ್ಮಸ್ಥೈರ್ಯವನ್ನು’ ಅಫ್ಗನ್ ಭದ್ರತಾ ಪಡೆಗಳಿಗೆ ನೀಡಲು ಅಮೆರಿಕಕ್ಕೆ ಸಾಧ್ಯವಾಗಲಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸಲಿವನ್‌ ಅವರು ಒಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT