ಶುಕ್ರವಾರ, ಅಕ್ಟೋಬರ್ 22, 2021
25 °C

ಶಂಕಿತ ಐಎಸ್‌ ಉಗ್ರರ ಅಡಗುತಾಣಗಳ ಮೇಲೆ ತಾಲಿಬಾನ್ ದಾಳಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ಕಾಬೂಲ್‌ ನಗರದಲ್ಲಿನ ಶಂಕಿತ ಇಸ್ಲಾಮಿಕ್ ಸ್ಟೇಟ್‌(ಐಸಿಸ್‌) ಉಗ್ರರ ಅಡಗುತಾಣದ ಮೇಲೆ ತಾಲಿಬಾನ್ ಪಡೆಗಳು ದಾಳಿ ನಡೆಸಿ, ಅಲ್ಲಿದ್ದ ಕೆಲವು ಬಂಡುಕೋರರನ್ನು ಕೊಂದಿರುವುದಾಗಿ ತಾಲಿಬಾನ್ ಸರ್ಕಾರ ಸೋಮವಾರ ತಿಳಿಸಿದೆ.

ಇಲ್ಲಿನ ಈದ್ಗಾ ಮಸೀದಿ ಹೊರಭಾಗದಲ್ಲಿ ಭಾನುವಾರ ಬಾಂಬ್‌ದಾಳಿ ನಡೆದಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಸೇನಾಪಡೆಗಳು ಐಎಸ್‌ ಅಡಗುತಾಣಗಳ ಮೇಲೆ ದಾಳಿ ನಡೆಸಿವೆ.

ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರ ತಾಯಿಯ ನಿಧನಕ್ಕೆ ಸಂತಾಪ ಸೂಚಿಸುವುದಕ್ಕಾಗಿ ತಾಲಿಬಾನ್ ಆಡಳಿತದ ಅಧಿಕಾರಿಗಳು ಮಸೀದಿಯಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಮಸೀದಿ ಹೊರಭಾಗದಲ್ಲಿ ಬಾಂಬ್ ದಾಳಿ ನಡೆದಿತ್ತು. ಈ ಘಟನೆಯಲ್ಲಿ ಐವರು ನಾಗರಿಕರು ಹತರಾಗಿದ್ದರು. ಘಟನೆಯ ನಂತರ ಈ ದಾಳಿಯ ಹೊಣೆಯನ್ನು ಯಾರೂ ಹೊತ್ತುಕೊಂಡಿರಲಿಲ್ಲ. ಆದರೆ, ಇದು ಐಎಸ್‌ ಉಗ್ರರ ಗುಂಪಿನದ್ದೇ ಕೆಲಸ ಎಂದು ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಾಲಿಬಾನ್‌ ಪಡೆಗಳು ತಕ್ಷಣ ಕಾರ್ಯಾಚರಣೆ ನಡೆಸಿದವು.

‘ತಾಲಿಬಾನ್‌ ಪಡೆಗಳು ಕಾಬೂಲ್‌ನ ಉತ್ತರ ಭಾಗದ ಖಾರಿ ಖಾನಾ ಪ್ರದೇಶದಲ್ಲಿದ್ದ ಇಸ್ಲಾಮಿಕ್ ಸ್ಟೇಟ್ ಬೆಂಬಲಿತ ಅಡಗುತಾಣಗಳ ಮೇಲೆ ದಾಳಿ ನಡೆಸಿವೆ. ಕಾರ್ಯಾಚರಣೆ ಯಶಸ್ವಿಯಾಗಿದ್ದು, ಐಸಿಸ್‌ ಕೇಂದ್ರವನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ. ಅಡಗುತಾಣದಲ್ಲಿ ಎಲ್ಲ ಬಂಡುಕೋರರನ್ನು ಕೊಲ್ಲಲಾಗಿದೆ‘ ಎಂದು ಮುಜಾಹಿದ್‌ ಟ್ವೀಟ್‌ ಮಾಡಿದ್ದಾರೆ.

ಶಂಕಿತ ಐಸಿಸ್‌ ದಾಳಿಯಲ್ಲಿ ಐವರು ಹತರಾಗಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ನಾಗರಿಕರು ಮತ್ತು ತಾಲಿಬಾನ್ ಸದಸ್ಯರೂ ಸೇರಿದ್ದಾರೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ ತಾಲಿಬಾನ್ ಸರ್ಕಾರದ ಸಂಸ್ಕೃತಿ ಆಯೋಗದ ಅಧಿಕಾರಿ, ಬಂಧಿತರ ಹೆಸರುಗಳನ್ನು ಬಹಿರಂಗಪಡಿಸಿಲ್ಲ.

ಶಂಕಿತ ಐಸಿಸ್‌ ಬಂಡುಕೋರರ ತಾಣಗಳ ಮೇಲೆ ತಾಲಿಬಾನ್ ಸೈನಿಕರು ದಾಳಿ ನಡೆಸಿದ ವೇಳೆ ನಡೆದ ಗುಂಡಿನ ಚಕಮಕಿಯ ಶಬ್ಧವನ್ನು ಸುದ್ದಿ ಸಂಸ್ಥೆಯ ವರದಿಗಾರರು ಮತ್ತು ಪ್ರತ್ಯಕ್ಷ ಸಾಕ್ಷಿಗಳು ಕೇಳಿಸಿಕೊಂಡಿದ್ದಾರೆ. ಹಾಗೆಯೇ, ಘಟನಾ ಸ್ಥಳದಲ್ಲಿ ತಾವು ನೋಡಿದ ಭಾರಿ ಸ್ಪೋಟ ಮತ್ತು ಬೆಂಕಿ ಹೊತ್ತಿಕೊಂಡಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಹಲವು ಗಂಟೆಗಳ ಕಾಲ ಸೈನಿಕರು ಮತ್ತು ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ಕಾಬೂಲ್ ನಿವಾಸಿ ಮತ್ತು ಸರ್ಕಾರಿ  ಉದ್ಯೋಗಿ ಅಬ್ದುಲ್ ರಹಮಾನ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು