ಉಗ್ರರಿಗೆ ಪ್ರೇರಣೆಯಾಗಲಿದೆ ತಾಲಿಬಾನ್: ಬ್ರಿಟನ್ ಗುಪ್ತಚರ ಇಲಾಖೆ ಮುಖ್ಯಸ್ಥ

ಲಂಡನ್: ಅಫ್ಗಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಬೆಳವಣಿಗೆಯು ವಿಶ್ವದಲ್ಲಿ ಭಯೋತ್ಪಾದಕರಿಗೆ ಧೈರ್ಯ ತುಂಬುವ ಸಾಧ್ಯತೆಯಿದೆ. ಅಲ್ಲದೆ, ಅಮೆರಿಕ ಮೇಲೆ ನಡೆದ 9/11 ಮಾದರಿಯ ಭಯೋತ್ಪಾದಕ ದಾಳಿಯ ಆತಂಕ ಜೀವಂತವಾಗಿದೆ ಎಂದು ಬ್ರಿಟನ್ ಗುಪ್ತಚರ ಇಲಾಖೆಯ ಮುಖ್ಯಸ್ಥರು ಶುಕ್ರವಾರ ಎಚ್ಚರಿಸಿದ್ದಾರೆ.
ಈ ಕುರಿತು ಸುದ್ದಿ ಮಾಧ್ಯಮ ‘ಬಿಬಿಸಿ’ ಜೊತೆಗೆ ಮಾತನಾಡಿರುವ ಬ್ರಿಟನ್‌ನ ಭದ್ರತಾ ಸೇವೆ–ಎಂ15ನ ಮಹಾನಿರ್ದೇಶಕ ಕೆನ್ ಮೆಕಲಮ್, ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳು ಕಳೆದ ತಿಂಗಳು ಅಫ್ಗಾನಿಸ್ತಾನದಿಂದ ಹೊರ ನಡೆದ ನಂತರ, ಅಫ್ಗನಿಸ್ತಾನದಲ್ಲಿನ ಬೆಳವಣಿಗೆಗಳು ಬೇರೆ ಉಗ್ರರಿಗೆ ಮನೋಸ್ಥೈರ್ಯ ಹೆಚ್ಚಿಸುವ ಸಾಧ್ಯತೆಗಳಿವೆ. ಹೀಗಾಗಿ ಹೆಚ್ಚಿನ ಜಾಗರೂಕತೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಅಫ್ಗಾನಿಸ್ತಾನದಿಂದ ಸದ್ಯ ನಮಗೆ ಕಾಣುತ್ತಿರುವ ದೊಡ್ಡ ಆತಂಕವೆಂದರೆ, ಭಯೋತ್ಪಾದಕರು ಮತ್ತೆ ಗುಂಪುಗೂಡಬಹುದು. ಅವರ ಕಾರ್ಯವೈಖರಿಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಬಹುದು, ಅತ್ಯಾಧುನಿಕ ಮಾದರಿಯಲ್ಲಿ ಅವರು ನಮ್ಮನ್ನು ಎದುರಾಗಬಹುದು. ಈ ಮೂಲಕ ಮುಂದಿನ ದಿನಗಳಲ್ಲಿ 9/11ರ ಮಾದರಿಯ ದಾಳಿಯ ಆತಂಕವನ್ನು ಅವರು ನಮ್ಮಲ್ಲಿ ಮೂಡಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಬ್ರಿಟನ್‌ನ ಪೊಲೀಸರು ಮತ್ತು ಗುಪ್ತಚರ ಸೇವೆಗಳು ದೇಶದಲ್ಲಿ ನಡೆಯಲಿದ್ದ 31 ಅಂತಿಮ ಹಂತದ ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿವೆ ಎಂದೂ ಅವರು ಇದೇ ವೇಳೆ ಬಹಿರಂಗಪಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.