ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ ಕೋವಿಡ್–19ರ ದೈನಂದಿನ ಪ್ರಕರಣಗಳ ಸಂಖ್ಯೆ 10,000 ದಾಟಿದ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ.
ಥಾಯ್ಲೆಂಡ್‌ನಲ್ಲಿ ಶನಿವಾರ 141 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೇಶದಲ್ಲಿ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ, ಪ್ರಕರಣಗಳು ಹೆಚ್ಚಿರುವ ಬ್ಯಾಂಕಾಕ್ ನಗರ ಸೇರಿದಂತೆ ಇತರೆ ಹಲವಾರು ಪ್ರಾಂತ್ಯಗಳಲ್ಲಿ ರಾತ್ರಿ ಕರ್ಫ್ಯೂ ಸೇರಿ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಏಪ್ರಿಲ್‌ನಿಂದ ಇಲ್ಲಿ ಪ್ರಕರಣಗಳು ಏರುಗತಿಯಲ್ಲಿವೆ. ಆಸ್ಪತ್ರೆಗಳು ತುಂಬಿ ಹೋಗಿವೆ. ಲಸಿಕೆ ಪೂರೈಕೆಯಲ್ಲಿ ಉಂಟಾದ ಕೊರತೆಯಿಂದಾಗಿ ಲಸಿಕೆ ಅಭಿಯಾನವು ನಿಧಾನಗತಿಯಲ್ಲಿ ನಡೆಯುತ್ತಿದೆ. ಈವರೆಗೆ ಒಟ್ಟು ಜನಸಂಖ್ಯೆಯ ಶೇಕಡ 5 ಜನರು ಮಾತ್ರ ಪೂರ್ಣ ಪ್ರಮಾಣದ ಲಸಿಕೆ ಪಡೆದಿದ್ದಾರೆ. ಶೇ 15ರಷ್ಟು ಜನರು ಭಾಗಶಃ (ಒಂದು ಡೋಸ್) ಲಸಿಕೆ ಪಡೆದಿದ್ದಾರೆ.
ಥಾಯ್ಲೆಂಡ್ ಸರ್ಕಾರವು ರಾತ್ರಿ ಸಭೆ, ಸಮಾರಂಭ, ರ‍್ಯಾಲಿಗಳ ಮೇಲೆ ನಿರ್ಬಂಧ ಸೇರಿದಂತೆ ಹೆಚ್ಚುವರಿ ನಿಯಮಗಳನ್ನು ಶುಕ್ರವಾರ ಜಾರಿಗೆ ತಂದಿದೆ.
‘ಈ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ₹91,393 ದಂಡ (1,220 ಡಾಲರ್) ವಿಧಿಸಲಾಗುವುದು’ ಎಂದು ಸರ್ಕಾರ ಹೇಳಿದೆ.
‘ದೇಶದಲ್ಲಿ ಲಸಿಕೆಯ ಕೊರತೆ ಎದುರಾಗಿರುವುದರಂದಿ ಬಹಳ ಕಡಿಮೆ ಜನರು ಲಸಿಕೆ ಪಡೆದಿದ್ದಾರೆ. ಹಾಗಾಗಿ ದೇಶದಲ್ಲಿ ಉತ್ಪಾದಿಸಲಾಗುತ್ತಿರುವ ಆಸ್ಟ್ರಾಜೆನೆಕಾ ಲಸಿಕೆಯ ರಫ್ತನ್ನು ಕಡಿಮೆಗೊಳಿಸಬೇಕು’ ಎಂದು ಥಾಯ್ಲೆಂಡ್‌ನ ಆರೋಗ್ಯ ಅಧಿಕಾರಿಗಳು ಬುಧವಾರ ಒತ್ತಾಯಿಸಿದ್ದಾರೆ.
ಥಾಯ್ಲೆಂಡ್‌ನಲ್ಲಿ ಸಾಂಕ್ರಾಮಿಕದ ಆರಂಭದಿಂದ ಈವರೆಗೆ 391,989 ಪ್ರಕರಣಗಳು ವರದಿಯಾಗಿವೆ. 3,240 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.