ಶುಕ್ರವಾರ, ಡಿಸೆಂಬರ್ 4, 2020
24 °C
ಬರ್ಲಿನ್ ಗೋಡೆ ಕೆಡವಿದ ದಿನ

PV Web Exclusive | ಆಡಳಿತಶಾಹಿಯ ದುರಭಿಮಾನಕ್ಕೆ ಬಿದ್ದ ಏಟು: ಬರ್ಲಿನ್ ಗೋಡೆ ಪತನ

ನವೀನ್‌ ಕುಮಾರ್‌ ಜಿ. Updated:

ಅಕ್ಷರ ಗಾತ್ರ : | |

Prajavani

ಅದು 1989 ನವೆಂಬರ್‌ 9ರ ಮಧ್ಯರಾತ್ರಿ. ಜರ್ಮನಿಯ ರಾಜಧಾನಿ ಬರ್ಲಿನ್‌ನ ಜನರಿಗೆ ಅದು ಮರೆಯಲಾರದ ಘಳಿಗೆ. ತಮ್ಮ ಮುಕ್ತ ಸಂಚಾರಕ್ಕೆ ತಡೆಯೊಡ್ಡಿದ್ದ, ಪ್ರೀತಿಪಾತ್ರರನ್ನು ಹಲವು ವರ್ಷಗಳ ಕಾಲ ಬೇರ್ಪಡಿಸಿದ್ದ ಗೋಡೆಯ ಬಗ್ಗೆ ಅವರಿಗಿದ್ದ ಅಸಹನೆಯು ಕಟ್ಟೆಯೊಡೆದಿತ್ತು.

ಚೆಕ್‌ ಪೋಸ್ಟ್‌ಗಳ ಮೂಲಕ ಪೂರ್ವ ಜರ್ಮನಿಯ ಜನರು ಪಶ್ಚಿಮ ಜರ್ಮನಿಗೆ ಸಂಚರಿಸಬಹುದು ಎಂದು ಪೂರ್ವದ ಕಮ್ಯುನಿಸ್ಟ್‌ ಸರ್ಕಾರ ಘೋಷಿಸಿದ್ದೇ ತಡ. ಜನರು ಪ್ರವಾಹದಂತೆ ಗೋಡೆಯ ಬಳಿ ನೆರೆದರು. ಅವರನ್ನು ನಿಯಂತ್ರಿಸಲು ಸೈನಿಕರಿಗೂ ಸಾಧ್ಯವಾಗಲಿಲ್ಲ. ಕೆಲವರು ಗೋಡೆಯ ಮೇಲೆ ಹತ್ತಿ ದಾಟಿದರು. ಇನ್ನು ಕೆಲವರು ಕೈಗೆ ಸಿಕ್ಕಿದ ಹಾರೆ, ಸುತ್ತಿಗೆಯಿಂದ ಇದುವರೆಗೆ ತಮ್ಮ ಆತ್ಮಾಭಿಮಾನಕ್ಕೆ ಕುತ್ತು ತಂದಿದ್ದ ಗೋಡೆಯನ್ನು ಕೆಡವಿದರು.

ಗಡಿ ದಾಟಿ ಬಂದ ಪೂರ್ವದ ಜನರನ್ನು ಪಶ್ಚಿಮದವರು ಬಿಗಿದಪ್ಪಿ ಬರಮಾಡಿಕೊಂಡರು, ಕಣ್ಣೀರು ಸುರಿಸಿ ಪರಸ್ಪರ ಸಾಂತ್ವನ ಹೇಳಿದರು. ಹೀಗೆ ಆಡಳಿತಶಾಹಿಯ ದುರಭಿಮಾನದ ಸಂಕೇತವಾಗಿದ್ದ ‘ಬರ್ಲಿನ್‌ ಗೋಡೆ‘ಯು ಪತನಗೊಂಡಿತು.
ಸುಮಾರು 30 ವರ್ಷಗಳ ಕಾಲ ಬರ್ಲಿನ್‌ ನಗರದ ಪೂರ್ವ ಮತ್ತು ಪಶ್ಚಿಮದ ಜನರನ್ನು ಪ್ರತ್ಯೇಕಿಸಿದ್ದ ಈ ಗೋಡೆಯ ಪತನದೊಂದಿಗೆ ಯುರೋಪ್‌ನಲ್ಲಿ ಹೊಸ ಯುಗ ಆರಂಭವಾಯಿತು.

ಈ ಗೋಡೆ ಕೆಡವುದಕ್ಕೂ ಐದು ದಿನಗಳ ಹಿಂದೆ ಬರ್ಲಿನ್‌ನಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಸೇರಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಆಡಳಿತಗಾರರ ಮೇಲೆ ಪ್ರಭಾವ ಬೀರಲು ಇದೂ ಕಾರಣವಾಯಿತು.

ಎರಡನೇ ಮಹಾಯುದ್ಧ ಕೊನೆಗೊಂಡ ಬಳಿಕ ಸೋಲಿನಿಂದ ಕಂಗೆಟ್ಟಿದ್ದ ಜರ್ಮನಿಯನ್ನು ಫ್ರಾನ್ಸ್‌, ಅಮೆರಿಕ, ಸೋವಿಯತ್‌ ಒಕ್ಕೂಟ(ಇಂದಿನ ರಷ್ಯಾ) ಹಾಗೂ ಬ್ರಿಟನ್‌ ನಾಲ್ಕು ಪ್ರಾಂತ್ಯಗಳನ್ನಾಗಿ ಮಾಡಿ ಆಳ್ವಿಕೆ ಆರಂಭಿಸಿತು. ಜರ್ಮನಿಯ ರಾಜಧಾನಿ ಬರ್ಲಿನ್‌ ಕೂಡ ನಾಲ್ಕು ಹೋಳುಗಳಾಯಿತು.

ಫ್ರಾನ್ಸ್‌, ಅಮೆರಿಕ ಮತ್ತು ಬ್ರಿಟನ್‌ ಆಳ್ವಿಕೆಯ ಪ್ರದೇಶವು ಫೆಡರಲ್‌ ರಿಪಬ್ಲಿಕ್‌ ಆಫ್‌ ಜರ್ಮನಿಯಾದರೆ (ಎಫ್‌ಆರ್‌ಜಿ), ಸೋವಿಯತ್‌ ಒಕ್ಕೂಟದ ಆಳ್ವಿಕೆಯ ಪೂರ್ವ ಜರ್ಮನಿಯು, ಜರ್ಮನ್‌ ಡೆಮಾಕ್ರೆಟಿಕ್‌ ರಿಪಬ್ಲಿಕ್‌ (ಜಿಡಿಆರ್‌) ಆಯಿತು.

ಗೋಡೆ ಯಾಕೆ ನಿರ್ಮಾಣವಾಯಿತು?
ಎಫ್‌ಆರ್‌ಜಿ ಅಧೀನದ ಬಂಡವಾಳಶಾಹಿ ನಗರವಾದ ಪಶ್ಚಿಮ ಬರ್ಲಿನ್‌, ಸಮಾಜವಾದಿ ಸಿದ್ಧಾಂತದ ಸೋವಿಯತ್‌ ಒಕ್ಕೂಟಕ್ಕೆ ಸದಾ ಮಗ್ಗುಲ ಮುಳ್ಳಾಗಿತ್ತು. ಈ ನಗರ ಪ್ರದೇಶವನ್ನು ಎಫ್‌ಆರ್‌ಜಿ ಹಿಡಿತದಿಂದ ತಪ್ಪಿಸಲು ಪ್ರಯತ್ನವನ್ನೂ ನಡೆಸಿತು. ಆದರೆ ಆ ಮೂರು ದೇಶಗಳು ಇದಕ್ಕೆ ಸೊಪ್ಪು ಹಾಕಲಿಲ್ಲ.

1958ರಲ್ಲಿ ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ನಡುವೆ ಉದ್ವಿಗ್ನತೆ ಸೃಷ್ಟಿಯಾಯಿತು. ಕಮ್ಯುನಿಸ್ಟ್‌ ಆಡಳಿತದಿಂದ ಬೇಸತ್ತ ಪೂರ್ವ ಜರ್ಮನಿಯ ಜನರು ಪಶ್ಚಿಮ ಜರ್ಮನಿಯ ಕಡೆ ವಲಸೆ ಹೋಗಲು ಆರಂಭಿಸಿದರು. ಸುಮಾರು 19 ಸಾವಿರ ಜನರು ಪೂರ್ವ ಜರ್ಮನಿಯನ್ನು ತೊರೆದರು.

ಆಗ ಸೋವಿಯತ್‌ ಒಕ್ಕೂಟದ ಪ್ರಧಾನಿ ಕ್ರುಶ್ರೇವ್‌ ಅವರು ಜನರ ವಲಸೆ ತಡೆಯುವಂತೆ ಪೂರ್ವ ಜರ್ಮನಿಯ ಕಮ್ಯುನಿಸ್ಟ್‌ ಸರ್ಕಾರಕ್ಕೆ ಸೂಚಿಸಿದರು. ಇದರ ಪರಿಣಾಮವಾಗಿ ಬರ್ಲಿನ್‌ ಗೋಡೆ ತಲೆ ಎತ್ತಿದೆ.

ಪೂರ್ವ ಜರ್ಮನಿಯಿಂದ ಪಶ್ಚಿಮದ ಕಡೆಗೆ ಜನರು ವಲಸೆ ಹೋಗುವುದನ್ನು ತಡೆಯಲು ಸೈನಿಕರು, ಪೊಲೀಸರು, ಸ್ವಯಂ ಸೇವಕರು ಸೇರಿ ತಾತ್ಕಾಲಿಕವಾಗಿ ಮುಳ್ಳು ತಂತಿ , ಕಾಂಕ್ರಿಟ್‌ ಬಳಸಿ ಗೋಡೆ ನಿರ್ಮಿಸಿದರು. 1961 ಆಗಸ್ಟ್ 13ರಂದು ಗೋಡೆಕಟ್ಟುವ ಕಾರ್ಯ ಆರಂಭವಾಯಿತು.

ಪೂರ್ವ ಜರ್ಮನಿಗೆ ಪಶ್ಚಿಮದ ಬಂಡವಾಳಶಾಹಿ ದೇಶದ ಪ್ರಭಾವ ಬೀರಬಾರದು ಎಂಬ ಕಾರಣಕ್ಕೆ ಗೋಡೆ ನಿರ್ಮಿಸುವುದಾಗಿ ಜಿಡಿಆರ್‌ ಹೇಳಿತ್ತು. ಆದರೆ ಇದರಿಂದ ಬರ್ಲಿನ್‌ನ ಜನರು ಪಡಬಾರದ ಕಷ್ಟ ಪಟ್ಟರು. ಒಂದೇ ನಗರದ ಜನರು ಭೌತಿಕವಾಗಿಯೂ, ಭಾವನಾತ್ಮಕವಾಗಿಯೂ ಬೇರೆ ಬೇರೆಯಾದರು. ಬಂಧುಗಳಿಂದ ಪ್ರತ್ಯೇಕಗೊಂಡ ಜನರು ಮಮ್ಮಲ ಮರುಗಿದರು. ತಾವು ಅದುವರೆಗೂ ಸ್ವಚ್ಚಂದವಾಗಿ ಸಂಚಾರ ನಡೆಸುತ್ತಿದ್ದ ಪ್ರದೇಶವು ಅಲ್ಲಿನ ಜನರಿಗೆ ಪರಕೀಯವಾಗಿ ಬದಲಾಗಿತ್ತು.ಇದು ಅಲ್ಲಿನ ಕಮ್ಯುನಿಸ್ಟ್‌ ಸರ್ಕಾರದ ಬಗ್ಗೆ ಜನರಲ್ಲಿ ಇನ್ನಷ್ಟು ಅಸಹನೆ ಉಂಟು ಮಾಡಿತು.

140 ಕಿ.ಮೀ.ಗಿಂತಲೂ ಉದ್ದದ ಈ ಗೋಡೆಯು ಎರಡೂ ಕಡೆಯ ಜನರ ಮುಕ್ತ ಸಂಚಾರಕ್ಕೂ ತಡೆಯೊಡ್ಡಿತು. ಜನರಿಗೆ ಚೆಕ್‌ಪೋಸ್ಟ್‌ಗಳ ಮೂಲಕ ವಿರಳವಾಗಿ ಗೋಡೆ ದಾಟಲು ಅನುಮತಿ ನೀಡಲಾಗುತ್ತಿದ್ದು.

ಈ ಗೋಡೆಯನ್ನು ದಾಟಲು ಯತ್ನಿಸಿ 171 ಜನರು ಸೈನಿಕರ ಗುಂಡೇಟಿಗೆ ಬಲಿಯಾಗಿದ್ದಾರೆ. ಆದರೂ ಜನರು ಬೇರೆ ಬೇರೆ ದಾರಿಗಳ ಮೂಲಕ ಗಡಿ ದಾಟುವ ಯತ್ನ ನಡೆಸುತ್ತಲೇ ಇದ್ದರು. ಸುರಂಗಗಳ ಮೂಲಕ, ಬಿಸಿಗಾಳಿ ಬೆಲೂನ್‌ಗಳ ಮೂಲಕವೂ ಗೋಡೆ ದಾಟಲು ಪ್ರಯತ್ನಿಸುತ್ತಿದ್ದರು. ಹಲವರು ಇದರಲ್ಲಿ ಯಶಸ್ವಿಯೂ ಆಗಿದ್ದರು.

ಹೀಗೆ ಜನರ ಭಾವನೆಗಳನ್ನು ಲೆಕ್ಕಿಸಿದೆ ಕಟ್ಟಿದ್ದ ಗೋಡೆ ಪತನಗೊಂಡ ಬಳಿಕ 1990 ಅಕ್ಟೋಬರ್‌ 3 ರಂದು ಜರ್ಮನಿಯ ಪುನರ್‌ ಏಕೀಕರಣವಾಯಿತು. ಮುಂದೆ ಬ್ರಿಟನ್‌ ಮತ್ತು ಫ್ರಾನ್ಸ್‌ಗೆ ಪರ್ಯಾಯವಾಗಿ ಜರ್ಮನಿ ಪ್ರಬಲ ದೇಶವಾಗಿ ರೂಪುಗೊಂಡಿತು. ಸಮಾಜವಾದಿ ಮತ್ತು ಬಂಡವಾಳಶಾಹಿ ಎರಡೂ ಸಿದ್ಧಾಂತಗಳು ಆ ದೇಶದ ಮೇಲೆ ಗಾಢ ಪ್ರಭಾವ ಬೀರಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು