ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲೇ ಹೆಚ್ಚು ಕೋವಿಡ್‌ ಪರೀಕ್ಷೆ, ಮೋದಿಯಿಂದಲೇ ಮೆಚ್ಚುಗೆ: ಟ್ರಂಪ್

ರೆನೊದಲ್ಲಿ ಆಯೋಜನೆಯಾಗಿದ್ದ ಪ್ರಚಾರ ರ‍್ಯಾಲಿಯಲ್ಲಿ ಟ್ರಂಪ್‌ ಹೇಳಿಕೆ
Last Updated 14 ಸೆಪ್ಟೆಂಬರ್ 2020, 6:46 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಅಮೆರಿಕದಲ್ಲೇ ಅತಿ ಹೆಚ್ಚು ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಸಂಬಂಧ ಭಾರತದ ಪ್ರಧಾನಿ ನರೇಂದ್ರ ಮೋದಿಯವರೇ ನನಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ನವೆಂಬರ್‌ನಲ್ಲಿ ನಿಗದಿಯಾಗಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಟ್ರಂಪ್‌, ನೆವಾಡ ಪ್ರಾಂತ್ಯದ ರೆನೊದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.

‘ಕೊರೊನಾ ಪರೀಕ್ಷೆಯ ವಿಷಯದಲ್ಲಿ ನಾವು ಭಾರತಕ್ಕಿಂತಲೂ ಬಹಳ ಮುಂದಿದ್ದೇವೆ. ಆ ದೇಶವು ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದೆ. ನಮ್ಮಲ್ಲಿ ಭಾರತಕ್ಕಿಂತಲೂ 4.4 ಕೋಟಿ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ. ಸ್ವತಃ ಮೋದಿಯವರೇ ಕರೆ ಮಾಡಿ ನನ್ನ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಈ ಅಪ್ರಾಮಾಣಿಕ ಜನರಿಗೆ (ಮಾಧ್ಯಮದವರು) ಈ ಬಗ್ಗೆ ವಿವರಿಸಿ ಹೇಳಿ ಎಂದು ನಾವು ಅವರಿಗೆ ತಿಳಿಸಿದೆ. ಈಗಿನ ಪರಿಸ್ಥಿತಿಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅಧ್ಯಕ್ಷ ಸ್ಥಾನದಲ್ಲಿದ್ದಿದ್ದರೆ ಸಾವಿರಾರು ಜನ ಸಾಯುತ್ತಿದ್ದರೇನೊ. ಅವರು ಅಮೆರಿಕದ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ದೇಶದ ಆರ್ಥಿಕತೆ ಹದಗೆಟ್ಟಿತ್ತು. ಅದರಿಂದ ಅತಿ ಹೆಚ್ಚು ತೊಂದರೆಯಾಗಿದ್ದು ನೆವಾಡ ಪ್ರಾಂತ್ಯದ ನಾಗರಿಕರಿಗೆ. ಇಂತಹ ವ್ಯಕ್ತಿಯ ಅಗತ್ಯ ನಿಮಗಿಲ್ಲ’ ಎಂದು ಬೈಡನ್‌ ವಿರುದ್ಧ ಹರಿಹಾಯ್ದಿದ್ದಾರೆ.

‘ನನ್ನ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಅಮೆರಿಕದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸಿ ಅದು ಸ್ಥಳೀಯರಿಗೆ ಸಿಗುವಂತೆ ಮಾಡಲು ಶ್ರಮಿಸಿದ್ದೇನೆ. ಗಡಿ ಭದ್ರತೆಗೆ ಆದ್ಯತೆ ನೀಡಿದ್ದೇನೆ. ಸೇನೆಯ ಶಕ್ತಿಯನ್ನು ಹೆಚ್ಚಿಸಿದ್ದಷ್ಟೇ ಅಲ್ಲದೇ ಚೀನಾ ವಿರುದ್ಧ ಗಟ್ಟಿ ಧ್ವನಿಯನ್ನೂ ಎತ್ತಿದ್ದೇನೆ. ಹಿಂದೆ ಆಡಳಿತ ನಡೆಸಿದ್ದ ಯಾರೊಬ್ಬರೂ ಈ ಕೆಲಸ ಮಾಡಿರಲಿಲ್ಲ’ ಎಂದು ನುಡಿದಿದ್ದಾರೆ.

‘ಬೈಡನ್‌ ಗೆದ್ದರೆ ಅಮೆರಿಕವು ಎಡಪಂಥೀಯರಿಂದ ನಿಯಂತ್ರಿಸಲ್ಪಡುತ್ತದೆ. ನಮ್ಮ ದೇಶವನ್ನು‌ ಗಲಭೆಕೋರರ ಸುಪರ್ದಿಗೆ ನೀಡುವುದು ಬೈಡನ್‌ ತಂತ್ರ. ಒಂದೊಮ್ಮೆ ಬೈಡನ್‌ ಗೆದ್ದರೆ ಚೀನಾವೂ ಗೆದ್ದ ಹಾಗೆಯೇ. ಬೈಡನ್‌ ಗೆಲುವು, ಗಲಭೆಕೋರರ ಗೆಲುವೂ ಆಗಲಿದೆ. ಬೈಡನ್‌ ಜಯವು ಅರಾಜಕತಾವಾದಿಗಳು, ದೇಶದ ಧ್ವಜವನ್ನು ಸುಡುವವರು ಹೀಗೆ ಎಲ್ಲರ ಗೆಲುವೂ ಆಗಲಿದೆ’ ಎಂದು ಟ್ರಂಪ್‌ ಪ್ರತಿಪಾದಿಸಿದ್ದಾರೆ.

‘ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅಭ್ಯರ್ಥಿ ಎಂದರೆ ಅದು ಬೈಡನ್‌. ತಾನು ಜೀವಂತವಾಗಿದ್ದೇನೆ ಎಂಬುದೇ ಬೈಡನ್‌ಗೆ ಗೊತ್ತಿಲ್ಲ’ ಎಂದು ಕಾಲೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT