ಉಕ್ರೇನ್: ಶಾಲೆಗೆ ಅಪ್ಪಳಿಸಿದ ರಷ್ಯಾದ ಶೆಲ್– 21 ಸಾವು

ಕೀವ್: ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳು ಗುರುವಾರ ನಡೆಸಿದ ಶೆಲ್ ದಾಳಿಯಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದು, 25 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಗುರುವಾರ ಮುಂಜಾನೆ ಹಾರ್ಕಿವ್ ನಗರದ ಹೊರಗಿನ ಮೆರೆಫಾ ಪಟ್ಟಣದಲ್ಲಿರುವ ಶಾಲೆ ಮತ್ತು ಸಾಂಸ್ಕೃತಿಕ ಕೇಂದ್ರದ ಮೇಲೆ ಶೆಲ್ ದಾಳಿ ನಡೆದಿದೆ ಎಂದು ಪ್ರಾದೇಶಿಕ ತನಿಖಾಧಿಕಾರಿಗಳು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ 10 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾಧಿಕಾರಿಗಳು ತಮ್ಮ ಹೇಳಿಕೆಯ ಜೊತೆ ಪೋಸ್ಟ್ ಮಾಡಿರುವ ಚಿತ್ರದಲ್ಲಿ ಹಲವು ಮಹಡಿಗಳ ಕಟ್ಟಡವು ದಾಳಿಯಿಂದ ಹಾಳಾಗಿದ್ದು, ಕಿಟಕಿಗಳು ಹಾರಿಹೋಗಿವೆ. ರಕ್ಷಣಾ ಕಾರ್ಯಾಚರಣೆಯ ತಂಡ ಕಾರ್ಯಪ್ರವೃತ್ತರಾಗಿರುವುದು ಕಂಡುಬಂದಿದೆ.
ಉಕ್ರೇನ್‌ನ ಎರಡನೇ ಅತಿದೊಡ್ಡ ನಗರ ಹಾರ್ಕಿವ್ ಮತ್ತು ಮೆರೆಫಾದಿಂದ ಉತ್ತರಕ್ಕೆ ಸುಮಾರು 30 ಕಿ.ಮೀ (18 ಮೈಲುಗಳು) ದೂರದಲ್ಲಿ ರಷ್ಯಾವು ತೀವ್ರವಾದ ವಾಯುದಾಳಿಗಳನ್ನು ನಡೆಸುತ್ತಿದ್ದು, ಅಧಿಕ ಹಾನಿ ಸಂಭವಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.