ಗುರುವಾರ , ಡಿಸೆಂಬರ್ 3, 2020
23 °C

ಪಾಕಿಸ್ತಾನ ಸೇರಿ 12 ರಾಷ್ಟ್ರಗಳ ಪ್ರವಾಸಿಗರಿಗೆ ಯುಎಇ ವೀಸಾ ತಾತ್ಕಾಲಿಕ ಸ್ಥಗಿತ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: 'ಪಾಕಿಸ್ತಾನ ಮತ್ತು ಇತರ 11 ದೇಶಗಳ ಪ್ರವಾಸಿಗರಿಗೆ ಹೊಸ ವೀಸಾಗಳ ವಿತರಣೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಬುಧವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ,' ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದೆ.

'ಕೋವಿಡ್-19ರ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಯುಎಇ ಈ ನಿರ್ಧಾರ ಕೈಗೊಂಡಿದೆ ಎಂದು ನಾವು ಭಾವಿಸಿದ್ದೇವೆ,' ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಜಾಹಿದ್ ಹಫೀಜ್ ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ಪಾಕಿಸ್ತಾನ ಸೇರಿದಂತೆ 12 ದೇಶಗಳಿಗೆ ಯುಎಇ ಪ್ರವಾಸಿ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ ಎಂದು ನಮಗೆ ಗೊತ್ತಾಗಿದೆ. ಈ ವಿಷಯದಲ್ಲಿ ಯುಎಇ ಅಧಿಕಾರಿಗಳಿಂದ ಅಧಿಕೃತ ದೃಢೀಕರಣವನ್ನು ಪಾಕಿಸ್ತಾನ ಸರ್ಕಾರ ಕೇಳಿದೆ,' ಎಂದು ಅವರು ಹೇಳಿದರು.

ಈಗಾಗಲೇ ಮಂಜೂರಾಗಿರುವ ವೀಸಾಗಳಿಗೆ ಈ ನಿರ್ಧಾರದಿಂದ ಯಾವುದೇ ಸಮಸ್ಯೆ ಇಲ್ಲ ಎಂದೂ ವಿದೇಶಾಂಗ ಕಚೇರಿ ಸ್ಪಷ್ಟಪಡಿಸಿದೆ.

ಪಾಕಿಸ್ತಾನದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಜುಲೈ 3ರವರೆಗೆ ಪ್ರಯಾಣಿಕರ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಯುಎಇ ಜೂನ್‌ನಲ್ಲಿ ಘೋಷಿಸಿತ್ತು.

ಎಮಿರೇಟ್ಸ್ ವಿಮಾನದಲ್ಲಿ ಹಾಂಕಾಂಗ್‌ಗೆ ತೆರಳಿದ್ದ ಸುಮಾರು 30 ಪಾಕಿಸ್ತಾನಿಯರಲ್ಲಿ ಕೊರೊನಾ ವೈರಸ್‌ ಸೋಂಕು ಇದ್ದದ್ದು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೇ ಹಿನ್ನೆಲೆಯಲ್ಲಿ ಯುಎಇ ಪಾಕಿಸ್ತಾನದ ಪ್ರವಾಸಿಗರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಮುಂದಿನ ಆದೇಶದ ವರೆಗೆ ಇದು ಜಾರಿಯಲ್ಲಿರಲಿದೆ.

ಟರ್ಕಿ, ಇರಾನ್, ಯೆಮೆನ್, ಸಿರಿಯಾ, ಇರಾಕ್, ಸೊಮಾಲಿಯಾ, ಲಿಬಿಯಾ, ಕೀನ್ಯಾ ಮತ್ತು ಅಫ್ಘಾನಿಸ್ತಾನದ ಪ್ರವಾಸಿಗರಿಗೂ ಯುಎಇ ವೀಸಾ ನಿರ್ಬಂಧಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು