ಸೋಮವಾರ, ಅಕ್ಟೋಬರ್ 18, 2021
22 °C

ಬ್ರಿಟನ್ ಪ್ರಯಾಣ ಮಾರ್ಗಸೂಚಿಯಲ್ಲಿ ಗೊಂದಲ; ಭಾರತೀಯರಿಗೆ ಮುಕ್ತ ಪ್ರವೇಶ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ಲಂಡನ್/ನವದೆಹಲಿ: ಬ್ರಿಟನ್‌ ರೂಪಿಸಿರುವ ನೂತನ ‘ಕೋವಿಡ್‌ ಅಂತರರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿ’ಯಲ್ಲಿ ಭಾರತದಲ್ಲಿ ತಯಾರಾದ ಕೋವಿಶೀಲ್ಡ್‌ ಲಸಿಕೆಗೆ ಮಾನ್ಯತೆ ನೀಡಿದೆ. ಆದರೆ, ಕ್ವಾರಂಟೈನ್ ಇಲ್ಲದೆಯೇ ಬ್ರಿಟನ್ ಪ್ರವೇಶಕ್ಕೆ ಅವಕಾಶ ಪಡೆದ ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರು ಇಲ್ಲ. ಹೀಗಾಗಿ ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡ ಭಾರತೀಯರೂ ಬ್ರಿಟನ್ ಪ್ರವೇಶದ ನಂತರ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ.

ಅಕ್ಟೋಬರ್‌ 4ರಿಂದ ಜಾರಿ ಯಾಗಲಿರುವ ನೂತನ ಮಾರ್ಗಸೂಚಿಯನ್ನು ಬ್ರಿಟನ್‌ ಈಚೆಗೆ ಪ್ರಕಟಿಸಿತ್ತು. ಮಾರ್ಗಸೂಚಿಯಲ್ಲಿ ಕೋವಿಶೀಲ್ಡ್‌ ಲಸಿಕೆ ಮತ್ತು ಭಾರತಕ್ಕೆ ಮಾನ್ಯತೆ ನೀಡಿರಲಿಲ್ಲ. ಇದಕ್ಕೆ ವಿದೇಶಾಂಗ ಸಚಿವಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ, ಬ್ರಿಟನ್‌ನ ಈ ಕ್ರಮಕ್ಕೆ ತಕ್ಕ ಪ್ರತ್ಯುತ್ತರದ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿತ್ತು. ಬ್ರಿಟನ್‌ನ ಈ ಕ್ರಮಕ್ಕೆ ಪ್ರತಿಭಟನೆಯಾಗಿ, ಆ ದೇಶಕ್ಕೆ ಪೂರ್ವನಿಗದಿಯಾಗಿದ್ದ ಪ್ರವಾಸವನ್ನು ಸಂಸದ ಶಶಿ ತರೂರ್ ರದ್ದುಪಡಿಸಿದ್ದರು.

ಇದರ ಬೆನ್ನಲ್ಲೇ ಬ್ರಿಟನ್‌ ತನ್ನ ಅಂತರರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಯನ್ನು ಬದಲಿಸಿದೆ. ‘ಆಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್‌, ಆಸ್ಟ್ರಾಜೆನೆಕಾದ ವ್ಯಾಕ್ಸೆವ್ರಿಯಾ ಮತ್ತು ಮೊಡೆರ್ನಾ ಕಂಪನಿಯ ಟಕೇಡಾ ಕೋವಿಡ್‌ ಲಸಿಕೆಯ ಪೂರ್ಣ ಡೋಸ್‌ಗಳನ್ನು ಹಾಕಿಸಿಕೊಂಡವರು ಬ್ರಿಟನ್‌ಗೆ ಮುಕ್ತವಾಗಿ ಪ್ರವೇಶಿಸಬಹುದು. ಲಸಿಕೆಯ ಕೊನೆಯ ಡೋಸ್‌ ಹಾಕಿಸಿಕೊಂಡು 14 ದಿನ ಕಳೆದ ನಂತರ, ಮುಕ್ತ ಪ್ರವೇಶಕ್ಕೆ ಈ ನಿಯಮ ಅವಕಾಶ ಕೊಡುತ್ತದೆ. ಆಸ್ಟ್ರೇಲಿಯಾ, ಜಪಾನ್‌, ಸಿಂಗಪುರ ಮತ್ತು ಮಲೇಷ್ಯಾ ಸೇರಿ 17 ದೇಶಗಳ ಜನರಿಗೆ ಈ ನಿಯಮ ಅನ್ವಯವಾಗಲಿದೆ’ ಎಂದು ಬ್ರಿಟನ್‌ನ ಆರೋಗ್ಯ ಇಲಾಖೆ ಹೇಳಿದೆ.

ಬ್ರಿಟನ್‌ನ ಈ ಗೊಂದಲಕಾರಿ ನಿಯಮಕ್ಕೆ ಭಾರತದ ವಿದೇಶಾಂಗ ಸಚಿವಾಲಯವು ಮತ್ತು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಓದಿ: 

‘ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಲಸಿಕೆಯನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಈ ಲಸಿಕೆಯನ್ನು ಬ್ರಿಟನ್‌ ಸರ್ಕಾರದ ಮನವಿಯ ಮೇರೆಗೆ, ಅಲ್ಲಿಯ ಜನರಿಗೆ ನೀಡಲಾಗಿದೆ. ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡ ಬೇರೆ ದೇಶಗಳ ಜನರು, ಬ್ರಿಟನ್‌ಗೆ ಮುಕ್ತವಾಗಿ ಪ್ರವೇಶಿಸಬಹುದು. ಆದರೆ, ಅದೇ ಲಸಿಕೆ ಹಾಕಿಸಿಕೊಂಡಿರುವ ಭಾರತೀಯರು, ಬ್ರಿಟನ್‌ ಅನ್ನು ಕ್ವಾರಂಟೈನ್‌ ಇಲ್ಲದೆ ಪ್ರವೇಶಿಸುವಂತಿಲ್ಲ. ಬ್ರಿಟನ್‌ನ ಇಂತಹ ತಾರತಮ್ಯದ ನೀತಿಯನ್ನು ಖಂಡಿಸುತ್ತೇವೆ. ಈ ನೀತಿಯನ್ನು ಸರಿಪಡಿಸದೇ ಇದ್ದರೆ, ತಕ್ಕ ಕ್ರಮವನ್ನು ನಾವೂ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ಹೇಳಿದ್ದಾರೆ.

ಭಾರತೀಯರಿಗೆ ಈಗ ಕ್ವಾರಂಟೈನ್ ಕಡ್ಡಾಯ
ಕೋವಿಶೀಲ್ಡ್‌ನ ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡಿರುವ ಭಾರತೀಯರು, ಬ್ರಿಟನ್ ಪ್ರವೇಶದ ನಂತರ 10 ದಿನಗಳ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕು. ಬ್ರಿಟನ್ ಪ್ರವಾಸಕ್ಕೂ ಮೂರು ದಿನ ಮೊದಲು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಟ್ಟಿರಬೇಕು.

ಬ್ರಿಟನ್ ಪ್ರವೇಶದ ನಂತರ ತಾವು ಎಲ್ಲಿ ಕ್ವಾರಂಟೈನ್‌ಗೆ ಒಳಗಾಗುತ್ತೇವೆ ಎಂಬುದರ ಮಾಹಿತಿಯನ್ನು ನೀಡಬೇಕು. ಬ್ರಿಟನ್‌ ಪ್ರವೇಶದ ನಂತರ ಎರಡು ಬಾರಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಬೇಕು. ಪರೀಕ್ಷೆಯನ್ನು ಮುಂಗಡವಾಗಿಯೇ ಕಾಯ್ದಿರಿಸಬೇಕು. ಎರಡೂ ಆರ್‌ಟಿಪಿಸಿಆರ್‌ ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಬಂದರೆ ಕ್ವಾರಂಟೈನ್‌ ಅನ್ನು 5 ದಿನಗಳಿಗೇ ಕೊನೆಗೊಳಿಸಬಹುದು.

ಆದರೆ ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡಿರುವ ಬೇರೆ ದೇಶಗಳ ಪ್ರಯಾಣಿಕರಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲ. ಬ್ರಿಟನ್‌ನ ಕೋವಿಡ್‌ ಅಂತರರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಯಲ್ಲಿ ಭಾರತದ ಹೆಸರನ್ನೂ ಸೇರಿಸಿದರೆ, ಭಾರತೀಯರಿಗೂ ಈ ನಿಯಮಗಳು ಅನ್ವಯವಾಗುವುದಿಲ್ಲ.

ಓದಿ: 

ಪ್ರಮಾಣಪತ್ರದಲ್ಲಿ ತೊಂದರೆ: ಬ್ರಿಟನ್
‘ಕೋವಿಶೀಲ್ಡ್‌ ಲಸಿಕೆಯಲ್ಲಿ ಯಾವುದೇ ತೊಂದರೆಯಿಲ್ಲ. ಆದರೆ, ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡವರಿಗೆ ನೀಡಲಾದ ಲಸಿಕೆ ಪ್ರಮಾಣಪತ್ರವನ್ನು ಪರಿಗಣಿಸುವಲ್ಲಿ ಸಮಸ್ಯೆ ಇದೆ’ ಎಂದು ಬ್ರಿಟನ್ ಹೇಳಿದೆ.

ಬ್ರಿಟನ್‌ ತೆಗೆದುಕೊಂಡ ಕ್ರಮಕ್ಕೆ ಪ್ರತಿಯಾಗಿ, ತಾವೂ ತಕ್ಕುದಾದ ಕ್ರಮ ತೆಗೆದುಕೊಳ್ಳಬಹುದು ಎಂದು ಭಾರತದ ವಿದೇಶಾಂಗ ಸಚಿವಾಲಯವು ಎಚ್ಚರಿಕೆ ನೀಡಿದ ಬೆನ್ನಲ್ಲೇ ಬ್ರಿಟನ್ ಈ ಸ್ಪಷ್ಟನೆ ನೀಡಿದೆ.

ಭಾರತದಲ್ಲಿ ನೀಡಲಾಗುತ್ತಿರುವ ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಯಾವ ಸಮಸ್ಯೆ ಇದೆ ಎಂಬುದನ್ನು ಬ್ರಿಟನ್ ಸ್ಪಷ್ಟಪಡಿಸಿಲ್ಲ. ಬದಲಿಗೆ, ಈ ಪ್ರಮಾಣಪತ್ರವನ್ನು ಮಾನ್ಯ ಮಾಡುವುದು ಹೇಗೆ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಇದಕ್ಕಾಗಿ ಭಾರತ ಸರ್ಕಾರದ ಜತೆಗೆ ಚರ್ಚಿಸುತ್ತೇವೆ ಎಂದು ಬ್ರಿಟನ್ ಹೇಳಿದೆ.

***

ಬ್ರಿಟನ್‌ನ ಈ ಗೊಂದಲಕಾರಿ ನೀತಿಯಿಂದ ಭಾರತದ ಸಾವಿರಾರು ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ತೊಂದರೆಯಾಗಲಿದೆ. ಇದನ್ನು ನಾವು ಖಂಡಿಸುತ್ತೇವೆ.
-ಹರ್ಷವರ್ಧನ್ ಶೃಂಗ್ಲಾ, ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು