ಬ್ರಿಟನ್‌ನಲ್ಲಿ ಕೊರೊನಾ ಸೋಂಕು ವ್ಯಾಪಕ: 88,376 ಹೊಸ ಪ್ರಕರಣಗಳು ಪತ್ತೆ

ಲಂಡನ್: ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿರುವ ಪರಿಣಾಮ ಬ್ರಿಟನ್‌ನಲ್ಲಿ ಕೋವಿಡ್ ದೃಢಪಟ್ಟ ಪ್ರಕರಣಗಳ ಸಂಖ್ಯೆ ಎರಡನೇ ದಿನವೂ ಏರುಗತಿಯಲ್ಲಿದೆ. 24 ಗಂಟೆಗಳ ಅಂತರದಲ್ಲಿ 88,376 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಹೊಸ ಪ್ರಕರಣಗಳ ಪೈಕಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 1,691. ಬ್ರಿಟನ್‌ನ ಆರೋಗ್ಯ ಇಲಾಖೆಯ ಪ್ರಕಾರ, ಬುಧವಾರದ ವರೆಗೂ ಒಟ್ಟು 11,708 ಓಮೈಕ್ರಾನ್ ಪ್ರಕರಣಗಳು ವರದಿಯಾಗಿದ್ದವು.
ನಿನ್ನೆ ಬ್ರಿಟನ್‌ನಲ್ಲಿ ಕೋವಿಡ್ ದೃಢಪಟ್ಟ 78,610 ಪ್ರಕರಣಗಳು ದಾಖಲಾಗಿದ್ದವು. ಈಗ ಒಟ್ಟು ಪ್ರಕರಣಗಳ ಸಂಖ್ಯೆ 1,10,97,851ಕ್ಕೆ ಏರಿಕೆಯಾಗಿದೆ.
24 ಗಂಟೆಗಳ ಅಂತರದಲ್ಲಿ ಕೋವಿಡ್ ಕಾರಣಗಳಿಂದಾಗಿ 146 ಮಂದಿ ಮೃತಪಟ್ಟಿದ್ದು, ಈವರೆಗೂ ಸಾವಿಗೀಡಾದವರ ಸಂಖ್ಯೆ 1.46 ಲಕ್ಷ ದಾಟಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೆ ಐದು ಓಮೈಕ್ರಾನ್ ಪ್ರಕರಣಗಳು ಪತ್ತೆ
ಓಮೈಕ್ರಾನ್ ಸೋಂಕಿಗೆ ಒಳಗಾಗಿರುವ ಪ್ರತಿ ವ್ಯಕ್ತಿಯು ಸರಾಸರಿ ಮೂರರಿಂದ ಐದು ಜನರಿಗೆ ಸೋಂಕು ಹರಡುತ್ತಿದ್ದಾರೆ ಎಂದು ಬ್ರಿಟನ್ ಆರೋಗ್ಯ ಇಲಾಖೆಯ (ಯುಕೆಎಚ್‌ಎಸ್‌ಎ) ಪ್ರಧಾನ ವೈದ್ಯಕೀಯ ಸಲಹೆಗಾರ ಸುಸಾನ್ ಹಾಪ್ಕಿನ್ಸ್ ಅಭಿಪ್ರಾಯ ಪಟ್ಟಿದ್ದರು. ಅದರ ಬೆನ್ನಲ್ಲೇ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವುದು ಪತ್ತೆಯಾಗಿದೆ.
ಪ್ರತಿ ಎರಡು ದಿನದಲ್ಲಿ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಆಗುತ್ತಿರುವುದನ್ನು ಗಮನಿಸಲಾಗಿದೆ.
ಇದನ್ನೂ ಓದಿ: ಡೆಲ್ಟಾಗಿಂತಲೂ 70 ಪಟ್ಟು ಹೆಚ್ಚು ಸೋಂಕುಕಾರಕ ಓಮೈಕ್ರಾನ್: ಅಧ್ಯಯನ
ಕ್ರಿಸ್‌ಮಸ್ ಸಮೀಪಿಸುತ್ತಿರುವುದರಿಂದ ಬಹುತೇಕ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇನ್ನೂ ಕೆಲವು ಶಾಲೆಗಳು ವಾರದಿಂದ ಮತ್ತೆ ಆನ್‌ಲೈನ್ ಶಿಕ್ಷಣ ಆರಂಭಿಸಿವೆ. 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಶೇಕಡ 89ಕ್ಕೂ ಹೆಚ್ಚು ಜನರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ವಿತರಣೆಯಾಗಿದೆ ಹಾಗೂ ಶೇಕಡ 81ಕ್ಕೂ ಹೆಚ್ಚು ಜನರು ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಹಾಗೇ ಶೇಕಡ 44ರಷ್ಟು ಜನರು ಈಗಾಗಲೇ ಬೂಸ್ಟರ್ ಡೋಸ್ ಅಥವಾ ಮೂರನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.