ಲಂಡನ್: ‘ಬ್ರಿಟನ್ ಸರ್ಕಾರವು ಭಾರತೀಯ ಹೈಕಮಿಷನ್‌ಗೆ ಅಗತ್ಯ ಭದ್ರತೆ ಒದಗಿಸಲಿದೆ’ ಎಂದು ಬ್ರಿಟನ್‌ನ ಉನ್ನತ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
‘ಖಾಲಿಸ್ತಾನ ಪರವಾಗಿ ಭಾನುವಾರ ಹೋರಾಟ ನಡೆಸಿದ್ದ ಪ್ರತ್ಯೇಕತಾವಾದಿಗಳು ಭಾರತೀಯ ಹೈಕಮಿಷನ್ ಎದುರು ಅಳವಡಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಲು ಮುಂದಾಗಿದ್ದರು. ಈ ಘಟನೆಯು ಖಂಡನೀಯವಾದುದು’ ಎಂದು ಅವರು ತಿಳಿಸಿದ್ದಾರೆ.
‘ತ್ರಿವರ್ಣ ಧ್ವಜ ಕೆಳಗಿಳಿಸುವ ದುಷ್ಕರ್ಮಿಗಳ ಪ್ರಯತ್ನವನ್ನು ವಿಫಲಗೊಳಿಸಲಾಗಿತ್ತು. ಅದೇ ಜಾಗದಲ್ಲಿ ಮತ್ತೆ ತ್ರಿವರ್ಣ ಧ್ವಜ ರಾರಾಜಿಸುವಂತೆ ಮಾಡಲಾಗಿದೆ. ಜೊತೆಗೆ ಹೈಕಮಿಷನ್ ಕಟ್ಟಡದ ಎದುರು ಬೃಹದಾಕಾರದ ಮತ್ತೊಂದು ತ್ರಿವರ್ಣ ಧ್ವಜವನ್ನು ಕಟ್ಟಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಪ್ರತ್ಯೇಕತಾವಾದಿಗಳು ನಡೆಸಿದ್ದ ಪ್ರತಿಭಟನೆ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಅವರು ಈಗ ಚೇತರಿಸಿಕೊಂಡಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ’ ಎಂದು ಮೆಟ್ರೊಪಾಲಿಟನ್ ಪೊಲೀಸ್ ಹೇಳಿದೆ.
ಲಂಡನ್ ಮೇಯರ್ ಸಾದಿಕ್ ಖಾನ್ ಅವರು ಘಟನೆಯನ್ನು ಖಂಡಿಸಿದ್ದಾರೆ. ‘ಈ ರೀತಿಯ ದುರ್ವರ್ತನೆಯನ್ನು ನಾವು ಸಹಿಸುವುದಿಲ್ಲ. ಇಂತಹ ಚಟುವಟಿಕೆಗಳಿಗೆ ಲಂಡನ್ ನಗರದಲ್ಲಿ ಅವಕಾಶವೂ ಇಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
‘ಈ ಘಟನೆಯು ನಾಚಿಕೆಗೇಡಿನದ್ದು. ಇದು ಸ್ವೀಕಾರಾರ್ಹವಲ್ಲ’ ಎಂದು ಭಾರತದಲ್ಲಿನ ಬ್ರಿಟನ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಹೇಳಿದ್ದಾರೆ.
‘ಭಾನುವಾರ ನಡೆದ ಘಟನೆಯು ಕಳವಳಕಾರಿಯಾಗಿದ್ದು, ಭಾರತದ ಹೈಕಮಿಷನ್‌ಗೆ ಬಿಗಿ ಭದ್ರತೆ ಒದಗಿಸುವ ವಿಚಾರವನ್ನು ಬ್ರಿಟನ್ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ’ ಎಂದು ಬ್ರಿಟನ್‌ನ ಸಚಿವ ತಾರಿಕ್ ಅಹ್ಮದ್ ಟ್ವೀಟ್ ಮಾಡಿದ್ದಾರೆ.
‘ಪ್ರತಿಭಟನಕಾರರು ಹೈಕಮಿಷನ್ ಕಟ್ಟಡದ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ’ ಎಂದು ಮೆಟ್ರೊಪಾಲಿಟನ್ ಪೊಲೀಸ್ ಪ್ರಕಟಣೆ ತಿಳಿಸಿದೆ.
‘ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಪ್ರತಿಭಟನಕಾರರ ಪೈಕಿ ಹಲವರು ಅಲ್ಲಿಂದ ಪರಾರಿಯಾಗಿದ್ದರು. ಘಟನೆ ಕುರಿತು ತನಿಖೆ ಆರಂಭಿಸಲಾಗಿದೆ. ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿಸಲಾಗಿದೆ’ ಎಂದು ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.