ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಯುದ್ಧ ನಿಲ್ಲದು: ಪುಟಿನ್‌ ಪ್ರತಿಜ್ಞೆ

Last Updated 21 ಫೆಬ್ರುವರಿ 2023, 14:38 IST
ಅಕ್ಷರ ಗಾತ್ರ

ಮಾಸ್ಕೊ (ಎಪಿ/ಎಎಫ್‌ಪಿ/ರಾಯಿಟರ್ಸ್‌): ‘ಉಕ್ರೇನ್‌ನಲ್ಲಿ ವಾಸ್ತವವಾಗಿ ಯುದ್ಧ ಆರಂಭಿಸಿದವರು ಪಶ್ಚಿಮದವರು. ರಷ್ಯಾ ನಾಶಪಡಿಸಲು ಪಶ್ಚಿಮವು ಜಾಗತಿಕ ಯುದ್ಧ ಸೃಷ್ಟಿಸಿದೆ. ಆ ಯುದ್ಧ ಕೊನೆಗೊಳಿಸಲು ನಮ್ಮ ಸೇನಾ ಶಕ್ತಿಯನ್ನು ನಾವು ಬಳಸುತ್ತಿದ್ದೇವೆ. ವರ್ಷದಿಂದ ನಡೆಯುತ್ತಿರುವ ಈ ಯುದ್ಧ ಮುಂದುವರಿಸುತ್ತೇವೆ’ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಪ್ರತಿಜ್ಞೆ ಮಾಡಿದರು.

ಉಕ್ರೇನ್‌ ವಿರುದ್ಧದ ವಿಶೇಷ ಸೇನಾ ಕಾರ್ಯಚರಣೆಯು ಇದೇ 24ರಂದು ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪಾಶ್ಚಿಮಾತ್ಯ ದೇಶಗಳು ರಷ್ಯಾಕ್ಕೆ ಬೆದರಿಕೆಯೊಡ್ಡುತ್ತಿವೆ. ನಮ್ಮ ಸಮಾಜ ವಿಭಜಿಸುವ ಅವರ ಪ್ರಯತ್ನಗಳು ಎಂದಿಗೂ ಫಲಿಸುವುದಿಲ್ಲ. ಬಹುಪಾಲು ರಷ್ಯನ್ನರು ಸೇನಾ ಕಾರ್ಯಾಚರಣೆ ಬೆಂಬಲಿಸಿದ್ದಾರೆ’ ಎಂದರು.

‘ನಿರ್ಬಂಧಗಳನ್ನು ಹೇರಿ, ನಮ್ಮ ಆರ್ಥಿಕತೆ ನಾಶಪಡಿಸುವ ಮತ್ತು ಜನರನ್ನು ಕಷ್ಟಕ್ಕೆ ಸಿಲುಕಿಸಲು ಯತ್ನಿಸಿದ ಪಶ್ಚಿಮದ ರಾಷ್ಟ್ರಗಳಿಗೆ ಯಶಸ್ಸು ಸಿಗಲಿಲ್ಲ. ಅವರ ನಿರ್ಬಂಧಗಳು ಕಠಿಣವಾದಂತೆ, ರಷ್ಯಾ ಮತ್ತಷ್ಟು ಆರ್ಥಿಕವಾಗಿ ಬೆಳೆಯುವ ದಾರಿ ಕಂಡುಕೊಂಡಿತು. ಪಾಶ್ಚಿಮಾತ್ಯರ ಆರ್ಥಿಕ ನಿರ್ಬಂಧಗಳ ಹೊರತಾಗಿಯೂ ರಷ್ಯಾ ತನ್ನ ರಾಷ್ಟ್ರೀಯ ಭದ್ರತೆ ಮತ್ತು ಅಭಿವೃದ್ಧಿ ಖಾತ್ರಿಗೆ ಅಗತ್ಯವಿರುವ ಎಲ್ಲ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿದೆ’ ಎಂದು ಪುಟಿನ್ ಹೇಳಿದರು.

ಭಾಷಣದ ನೇರ ಪ್ರಸಾರಕ್ಕೆ ಅಡಚಣೆ:

ಪುಟಿನ್ ಅವರ ಭಾಷಣವನ್ನು ದೇಶದ ಸಂಸತ್ತಿನ ಎರಡು ಸದನಗಳಲ್ಲಿ ನೇರ ಪ್ರಸಾರ ಮಾಡುವಾಗ ಕೆಲ ಕಾಲ ತಾಂತ್ರಿಕ ಅಡಚಣೆಗಳು ಕಾಣಿಸಿ, ನೇರ ಪ್ರಸಾರ ಸ್ಥಗಿತವಾಯಿತು.

ಆಲ್‌ ರಷ್ಯಾ ಸ್ಟೇಟ್‌ ಟಿಲಿವಿಷನ್‌ ಆ್ಯಂಡ್‌ ರೇಡಿಯೊ ಬ್ರಾಡ್‌ಕಾಸ್ಟಿಂಗ್‌ ಕಂಪನಿ (ವಿಜಿಟಿಆರ್‌ಕೆ) ವೆಬ್‌ಸೈಟ್‌ನಲ್ಲಿ ಭಾಷಣ ನೇರ ಪ್ರಸಾರವನ್ನು ಹಲವು ಸ್ಥಳಗಳಲ್ಲಿ ವೀಕ್ಷಿಸಲು ಸಾಧ್ಯವಾಗಲಿಲ್ಲ. ಇದು ಸೈಬರ್‌ ದಾಳಿಯ ಫಲಿತಾಂಶ ಎಂದು ಸರ್ಕಾರಿ ನಿಯಂತ್ರಿತ ಸುದ್ದಿ ಸಂಸ್ಥೆ ‘ರಿಯಾ ನೊವೊಸ್ಟಿ’ ವರದಿ ಮಾಡಿದೆ.

ಪುಟಿನ್‌ ವಾರ್ಷಿಕ ಭಾಷಣದ ಪ್ರಮುಖಾಂಶಗಳು

* ಯುದ್ಧ ತಪ್ಪಿಸಲು ರಷ್ಯಾ ಎಲ್ಲವನ್ನು ಮಾಡಿದೆ. ಆದರೆ, ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲದಲ್ಲಿ ಉಕ್ರೇನ್, ರಷ್ಯಾ ನಿಯಂತ್ರಿತ ಕ್ರಿಮಿಯಾ ಮೇಲೆ ದಾಳಿಗೆ ಯೋಜಿಸಿತು

* ಸ್ಥಳೀಯ ಸಂಘರ್ಷವನ್ನು ಜಾಗತಿಕಗೊಳಿಸುವುದು ಪಶ್ಚಿಮದ ರಾಷ್ಟ್ರಗಳ ಉದ್ದೇಶ. ಅದಕ್ಕೆ ತಕ್ಕಂತೆ ನಾವು ಪ್ರತಿಕ್ರಿಯಿಸುತ್ತೇವೆ

* ರಷ್ಯಾ ವಿರುದ್ಧ ಕಾರ್ಯತಂತ್ರದ ಜಯ ಸಾಧಿಸುವುದು ಮತ್ತು ರಷ್ಯಾವನ್ನು ಒಮ್ಮೆಗೆ ನಾಶಪಡಿಸುವುದು ಪಶ್ಚಿಮದ ಗುರಿ. ಆದರೆ, ಇದು ಅಸಾಧ್ಯ

* ಉಕ್ರೇನ್ ಜನತೆ ಕೀವ್‌ ಆಡಳಿತ ಮತ್ತು ಅದರ ಪಾಶ್ಚಿಮಾತ್ಯ ನಿಯಂತ್ರಕರ ಒತ್ತೆಯಾಳುಗಳಾಗಿ ಮಾರ್ಪಟ್ಟಿದ್ದಾರೆ. ಉಕ್ರೇನ್‌ ಅನ್ನು ರಾಜಕೀಯ, ಮಿಲಿಟರಿ ಮತ್ತು ಆರ್ಥಿಕ ಅರ್ಥದಲ್ಲಿ ಪಶ್ಚಿಮದವರು ಆಕ್ರಮಿಸಿದ್ದಾರೆ

* ಉಕ್ರೇನ್‌ ಸಂಘರ್ಷ ಉಲ್ಪಣಿಸಲು ಪಶ್ಚಿಮದ ರಾಷ್ಟ್ರಗಳೇ ನೇರ ಕಾರಣ. ಅದರ ಮಿತ್ರರಾಷ್ಟ್ರಗಳು ಹೊಸ ಶಸ್ತ್ರಾಸ್ತ್ರ ಪೂರೈಸುವ ಭರವಸೆ ನೀಡಿದ ನಂತರ ಸಂಘರ್ಷ ಉಲ್ಬಣಿಸಿತು

* ನಮ್ಮ ಗುರಿಯನ್ನು ಹಂತ ಹಂತವಾಗಿ ಬಹಳ ಎಚ್ಚರಿಕೆ ಮತ್ತು ವ್ಯವಸ್ಥಿತವಾಗಿ ಸಾಧಿಸುತ್ತೇವೆ

* ಉಕ್ರೇನ್‌ ಯುದ್ಧದಲ್ಲಿ ಹುತಾತ್ಮರಾದ ರಷ್ಯಾ ಯೋಧರ ಕುಟುಂಬದವರಿಗೆ ವಿಶೇಷ ನಿಧಿಯ ಭರವಸೆ

* ನಮ್ಮಲ್ಲಿದ್ದೇ ನಮ್ಮ ಬೆನ್ನಿಗೆ ಚೂರಿ ಹಾಕಿದ ರಷ್ಯಾ ಪ್ರಜೆಗಳಿಗೂ ಶಿಕ್ಷೆ ಖಚಿತ

‘ಉಕ್ರೇನ್‌ ಆಕ್ರಮಣ ರಷ್ಯಾ ಕಾರ್ಯತಂತ್ರದ ವೈಫಲ್ಯ’

ಅಥೆನ್ಸ್ (ಎಎಫ್‌ಪಿ): ಉಕ್ರೇನ್‌ ಮೇಲಿನ ಯುದ್ಧವನ್ನು ವ್ಯವಸ್ಥಿತವಾಗಿ ಮುಂದುವರಿಸುವುದಾಗಿ ಪುಟಿನ್‌ ಪ್ರತಿಜ್ಞೆ ಮಾಡಿರುವ ಬೆನ್ನಲ್ಲೇ ‘ಉಕ್ರೇನ್‌ ಮೇಲಿನ ಆಕ್ರಮಣವು ರಷ್ಯಾ ಕಾರ್ಯತಂತ್ರದ ವೈಫಲ್ಯ’ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಮಂಗಳವಾರ ಹೇಳಿದರು.

ಐದು ದಿನಗಳ ಪ್ರವಾಸದ ಕೊನೆಯಲ್ಲಿ ಮಾತನಾಡಿದ ಅವರು, ‘ಈ ಯುದ್ಧವು ಎಲ್ಲ ರೀತಿಯಲ್ಲೂ ಪುಟಿನ್‌ ಅವರ ಕಾರ್ಯತಂತ್ರದ ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸಿದೆ. ಈ ಯುದ್ಧವನ್ನು ಯಾರೂ ಬಯಸಲಿಲ್ಲ. ಇದು ಯಾರಿಗೂ ಇಷ್ಟವಿಲ್ಲದ್ದು. ಎಲ್ಲರೂ ಸಾಧ್ಯವಾದಷ್ಟು ಬೇಗ ಯುದ್ಧ ಕೊನೆಯಾಗಬೇಕೆಂದು ಬಯಸುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT