ಭಾನುವಾರ, ಜುಲೈ 3, 2022
25 °C

ಮಾತುಕತೆಗೆ ಬನ್ನಿ: ಪುಟಿನ್‌ಗೆ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಮನವಿ

ಎಪಿ Updated:

ಅಕ್ಷರ ಗಾತ್ರ : | |

ಮಾಸ್ಕೋ (ರಷ್ಯಾ): ಒಂದೆಡೆ ರಷ್ಯಾ ಆಕ್ರಮಣದ ಭೀತಿ, ಇನ್ನೊಂದೆಡೆ ರಷ್ಯಾ ಬೆಂಬಲಿತ ಬಂಡುಕೋರರು ದೇಶದ ಒಳಗೆ ನಡೆಸುತ್ತಿರುವ ಹಿಂಸಾಚಾರಗಳನ್ನು ಎದುರಿಸಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಉಕ್ರೇನ್‌ ಅಧ್ಯಕ್ಷ ವ್ಲಾಡಿಮಿರ್‌ ಝೆಲೆನ್‌ಸ್ಕಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಇಂದು(ಭಾನುವಾರ) ಮಾತುಕತೆಗೆ ಆಹ್ವಾನಿಸಿದರು.

‘ರಷ್ಯಾ ಅಧ್ಯಕ್ಷರು ಏನು ಬಯಸುತ್ತಿದ್ದಾರೆಂದು ನನಗೆ ತಿಳಿದಿಲ್ಲ. ಹೀಗಾಗಿ ನಾನು ಸಭೆಯ ಪ್ರಸ್ತಾವವನ್ನು ಮುಂದಿಡುತ್ತಿದ್ದೇನೆ. ಮಾತುಕತೆಗಾಗಿ ಸ್ವತಃ ರಷ್ಯಾ ಸ್ಥಳ ನಿಗದಿ ಮಾಡಬಹುದು’ ಎಂದು ಝೆಲೆನ್‌ಸ್ಕಿ ಅವರು ‘ಮ್ಯೂನಿಕ್‌ ಭದ್ರತಾ ಸಮ್ಮೇಳನ’ದಲ್ಲಿ ಹೇಳಿದ್ದಾರೆ. ಮ್ಯೂನಿಕ್‌ ಸಮ್ಮೇಳನದಲ್ಲಿ ಅವರು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾದರು.

‘ಸಮಸ್ಯೆಯ ಶಾಂತಿಯುತ ಇತ್ಯರ್ಥಕ್ಕೆ ಉಕ್ರೇನ್ ರಾಜತಾಂತ್ರಿಕ ಮಾರ್ಗ ಅನುಸರಿಸುವುದನ್ನು ಮುಂದುವರಿಸಲಿದೆ’ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಉಕ್ರೇನ್‌ ಅಧ್ಯಕ್ಷರ ಪ್ರಸ್ತಾವದ ಬಗ್ಗೆ ರಷ್ಯಾ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಪೂರ್ವ ಉಕ್ರೇನ್‌ನಲ್ಲಿ ಪ್ರತ್ಯೇಕತಾವಾದಿ ನಾಯಕರು ಶನಿವಾರ ಮಿಲಿಟರಿಯನ್ನು ಸಜ್ಜುಗೊಳಿಸಲು ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಝೆಲೆನ್‌ಸ್ಕಿ ಈ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ, ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ ನಡೆಸಲಿದೆ ಎಂದು ಪಾಶ್ಚಾತ್ಯ ದೇಶಗಳು ಎಚ್ಚರಿಕೆ ನೀಡಿವೆ.

ಕೆಲವೇ ದಿನಗಳಲ್ಲಿ ಯುದ್ಧವು ಪ್ರಾರಂಭವಾಗಬಹುದೆಂಬ ಮನ್ಸೂಚನೆಗಳ ಹಿನ್ನೆಲೆಯಲ್ಲಿ ಜರ್ಮನಿ ಮತ್ತು ಆಸ್ಟ್ರಿಯಾ ದೇಶಗಳು ಉಕ್ರೇನ್‌ನಲ್ಲಿರುವ ತಮ್ಮ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿವೆ. ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ಥಾನ್ಸಾ, ಉಕ್ರೇನ್‌ ರಾಜಧಾನಿ ಕೀವ್‌ ಮತ್ತು ಕಪ್ಪು ಸಮುದ್ರದ ಬಳಿ ಇರುವ ಒಡೆಸ್ಸಾಗೆ ವಿಮಾನಗಳನ್ನು ರದ್ದುಗೊಳಿಸಿದೆ. ರಷ್ಯಾ ಆಕ್ರಮಣದ ವೇಳೆ ಈ ಪ್ರದೇಶಗಳೇ ಹೆಚ್ಚು ಗುರಿಯಾಗಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಜರ್ಮನಿ ಈ ಕ್ರಮ ಕೈಗೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು