ಮಂಗಳವಾರ, ಡಿಸೆಂಬರ್ 6, 2022
21 °C

ರಷ್ಯಾ ನಿಯಂತ್ರಿತ ಹತ್ತಾರು ಪಟ್ಟಣ ಉಕ್ರೇನ್ ಹಿಡಿತಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀವ್‌: ಆಕ್ರಮಣದ ವೇಳೆ ವಶಕ್ಕೆ ಪಡೆದಿದ್ದ ದಕ್ಷಿಣ ಉಕ್ರೇನ್‌ನ ಪ್ರಾದೇಶಿಕ ರಾಜಧಾನಿ ಕೆರ್ಸಾನ್‌ನಿಂದ ಸೇನೆ ಹಿಂತೆಗೆತವನ್ನು ರಷ್ಯಾ ಘೋಷಣೆ ಮಾಡಿದ ಎರಡು ದಿನಗಳಲ್ಲಿ ಉಕ್ರೇನ್‌ ಪಡೆಗಳು ಹಲವು ಪಟ್ಟಣಗಳು ಮತ್ತು ಹಳ್ಳಿಗಳನ್ನು ಮರು ವಶಕ್ಕೆ ಪಡೆದುಕೊಂಡಿವೆ.

ಕಳೆದ ಒಂಬತ್ತು ತಿಂಗಳಿಂದ ಹಿಡಿತ ಸಾಧಿಸಿದ್ದ ಕೆರ್ಸಾನ್‌ ಅನ್ನು ರಷ್ಯಾ ಪಡೆಗಳು ಸ್ಫೋಟಕಗಳ ಅವಶೇಷಗಳ ತೊಟ್ಟಿಯನ್ನಾಗಿಸಿದ್ದವು. ಈ ನಗರದ ಮೇಲೆ ಉಕ್ರೇನ್‌ ಪಡೆಗಳು ಹಿಡಿತ ಸಾಧಿಸುತ್ತಿದ್ದು, ಮುನ್ನಡೆಯುತ್ತಿವೆ. ಕೆರ್ಸಾನ್‌ ಭಾಗದಲ್ಲಿ 40ಕ್ಕೂ ಹೆಚ್ಚು ಪಟ್ಟಣಗಳು ಮತ್ತು 41 ಜನವಸತಿ ಪ್ರದೇಶಗಳನ್ನು ರಷ್ಯಾ ಹಿಡಿತದಿಂದ ವಿಮೋಚನೆಗೊಳಿಸಿವೆ. ಹಲವು ಪ್ರದೇಶಗಳಲ್ಲಿ ಉಕ್ರೇನ್‌ ಧ್ವಜಗಳು ಪುನಃ ಹಾರಾಡುತ್ತಿವೆ. ಆಕ್ರಮಣಕಾರರ ವಿರುದ್ಧ ಜಯ ಸಾಧಿಸುವ ಸನಿಹದಲ್ಲಿದ್ದೇವೆ ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಗುರುವಾರ ರಾತ್ರಿಯ ವಿಡಿಯೊ ಭಾಷಣದಲ್ಲಿ ಹೇಳಿದ್ದಾರೆ.

ಉಕ್ರೇನ್‌ ನಗರಗಳು ಮತ್ತು ಪಟ್ಟಣಗಳ ಮೇಲೆ ರಷ್ಯಾ ದೂರ ವ್ಯಾಪ್ತಿಯ ಕ್ಷಿಪಣಿಗಳ ದಾಳಿ ಮುಂದುವರಿಸಿದ್ದು, ಗುರುವಾರ ತಡರಾತ್ರಿ ಮೈಕೊಲೈವ್‌ ನಗರದ ಜನವಸತಿ ಕಟ್ಟಡಕ್ಕೆ ಅಪ್ಪಳಿಸಿರುವ ಕ್ಷಿಪಣಿಯಿಂದ 6 ನಾಗರಿಕರು ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಅಮೆರಿಕವು ಮತ್ತೆ ಹೊಸದಾಗಿ ಸುಮಾರು ₹3,200 ಕೋಟಿ ಮೊತ್ತದ ಭದ್ರತಾ ನೆರವಿನ ಪ್ಯಾಕೇಜ್‌ ಅನ್ನು ಉಕ್ರೇನ್‌ಗೆ ನೀಡಿದೆ. ಇದರಲ್ಲಿ ರಕ್ಷಣಾ ವ್ಯವಸ್ಥೆ ಭೂ ಮೇಲ್ಮೈನಿಂದ ವಾಯು ದಾಳಿ ನಡೆಸುವ ಕ್ಷಿಪಣಿಗಳು ಸೇರಿವೆ. ಇತ್ತೀಚೆಗೆ ರಷ್ಯಾ ಪಡೆಗಳು ಕೀವ್‌ ನಗರದ ಮೂಲಸೌಕರ್ಯಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿದ್ದರಿಂದ ಅಮೆರಿಕ ಭದ್ರತಾ ನೆರವಿನ ಪ್ಯಾಕೇಜ್‌ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು