ಬುಧವಾರ, ಸೆಪ್ಟೆಂಬರ್ 29, 2021
20 °C

ಕಾಶ್ಮೀರದಲ್ಲಿ ತಾತ್ಕಾಲಿಕ ಸಂವಹನ ಸ್ಥಗಿತ: ವಿಶ್ವಸಂಸ್ಥೆ ಟೀಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತದಲ್ಲಿನ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ತಾತ್ಕಾಲಿಕ ಸಂವಹನ ಸ್ಥಗಿತಗೊಳಿಸುವ ಪ್ರಕ್ರಿಯೆ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್‌ ಮಿಶೆಲ್‌ ಬಶ್ಲೆಟ್‌ ಪ್ರಸ್ತಾಪಿಸಿದ್ದಾರೆ.

ಜಿನೀವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 48ನೇ ಅಧಿವೇಶನದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯನ್ನು ಎದುರಿಸಲು ಮತ್ತು ಜಮ್ಮು–ಕಾಶ್ಮೀರದಲ್ಲಿ ಅಭಿವೃದ್ಧಿಯನ್ನು ಉತ್ತೇಜಿಸಲು ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ.

‘ಆದರೆ ಭಾರತದ ನಿರ್ಬಂಧಿತ ಕ್ರಮಗಳು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಬಹುದು. ಅಲ್ಲದೆ ಮತ್ತಷ್ಟು ಅಸಮಾಧಾನ, ಉದ್ವಿಗ್ನತೆಯನ್ನು ಉಂಟು ಮಾಡಬಹುದು’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ಸಭೆ ಸೇರುವುದಕ್ಕೆ ಭಾರತೀಯ ಅಧಿಕಾರಿಗಳು ನಿರ್ಬಂಧಗಳನ್ನು ಹೇರುತ್ತಿದ್ದಾರೆ. ಅಲ್ಲದೆ ಪದೇ ಪದೇ ತಾತ್ಕಾಲಿಕವಾಗಿ ಸಂವಹನ ಸ್ಥಗಿತಗೊಳಿಸುವುದು ಮುಂದುವರಿದೆ. ನೂರಾರು ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ, ಬಂಧಿಸಲಾಗಿದೆ. ಪತ್ರಕರ್ತರ ಮೇಲೂ ಒತ್ತಡ ಹೆಚ್ಚಿದೆ ಎಂದು ಅವರು ತಿಳಿಸಿದರು.

ಭಾರತದಾದ್ಯಂತ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯ ನಿರಂತರ ಬಳಕೆ ಆತಂಕವನ್ನು ಉಂಟು ಮಾಡಿದೆ ಎಂದಿರುವ ಅವರು, ಜಮ್ಮು ಮತ್ತು ಕಾಶ್ಮೀರವು ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದರು.

ಬಶ್ಲೆಟ್‌ ಅವರ ಟೀಕೆಗಳಿಗೆ ಭಾರತ ಸರ್ಕಾರ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ಇಲ್ಲಿಯವರೆಗೆ ನೀಡಿಲ್ಲ. ಆದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥರ ಟೀಕೆಗಳನ್ನು ಭಾರತವು ಅನೇಕ ಸಂದರ್ಭಗಳಲ್ಲಿ ಬಲವಾಗಿ ತಿರಸ್ಕರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು