ಗುರುವಾರ , ಮೇ 13, 2021
19 °C
‘ಸದನದ ಆಡಳಿತ ಸಮಿತಿ’ ಮುಂದೆ ಹೇಳಿಕೆ ನೀಡಲಿರುವ ಪೊಲೀಸ್‌ ಅಧಿಕಾರಿಗಳು

ಕ್ಯಾಪಿಟಲ್‌ ಹಿಂಸಾಚಾರ: ಪೊಲೀಸ್‌ ಇಲಾಖೆ ವೈಫಲ್ಯ ಬಹಿರಂಗ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕ್ಯಾಪಿಟಲ್‌ ಹಿಲ್‌ನಲ್ಲಿ ಜನವರಿ 6ರಂದು ನಡೆದ ಹಿಂಸಾಚಾರದ ಕುರಿತು ಇದೇ ಮೊದಲ ಬಾರಿ ಪೊಲೀಸರು ಹೇಳಿಕೆ ನೀಡಲಿದ್ದಾರೆ.

ಘಟನೆ ಕುರಿತು ಗುಪ್ತಚರ ಮಾಹಿತಿ ಸಂಗ್ರಹಿಸುವಲ್ಲಿ ತೋರಿದ ನಿರ್ಲಕ್ಷ್ಯ ಸೇರಿದಂತೆ ಇಲಾಖೆಯ ವೈಫಲ್ಯಗಳ ಬಗ್ಗೆ ಡೆಮಾಕ್ರಟಿಕ್‌ ಪಕ್ಷದ ಸಂಸತ್‌ ಸದಸ್ಯ ರೆ. ಝೋ ಲೋಫ್‌ಗ್ರೆನ್‌ ಅಧ್ಯಕ್ಷತೆಯ ’ಸದನದ ಆಡಳಿತ ಸಮಿತಿ’ಯ ಮುಂದೆ ಪೊಲೀಸರು ವಿವರಿಸಲಿದ್ದಾರೆ. 

ಕ್ಯಾಪಿಟಲ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಜನರಲ್‌ ಮಿಷೆಲ್‌ ಎ. ಬೊಲ್ಟನ್‌ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿದ್ದಾರೆ. ಪೊಲೀಸರು ಕ್ರಮಕೈಗೊಳ್ಳುವಲ್ಲಿ ಎಡವಿದ್ದೆಲ್ಲಿ ಎನ್ನುವ ಬಗ್ಗೆ ಸಮಗ್ರ ಪರಿಶೀಲನೆ ಕೈಗೊಂಡಿದ್ದಾರೆ.

ಅಂದು ಅಧ್ಯಕ್ಷರಾಗಿದ್ದ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ಸಂಸತ್‌ ಭವನಕ್ಕೆ (ಕ್ಯಾಪಿಟಲ್‌) ನುಗ್ಗಿ ದಾಂದಲೆ ನಡೆಸಿದ್ದರು. ಸ್ಪೀಕರ್‌ ಕಚೇರಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಡಿದ್ದರು. ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು. ಕಲಾಕೃತಿಗಳನ್ನು ಹೊತ್ತೊಯ್ದಿದ್ದರು.

ಭವಿಷ್ಯದಲ್ಲಿ ಇದೇ ರೀತಿಯ ಘಟನೆ ಮರುಕಳಿಸಿದರೆ ಅದನ್ನು ಎದುರಿಸುವ ಸಾಮರ್ಥ್ಯದ ಬಗ್ಗೆ ಬೊಲ್ಟನ್‌ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಿಂಸಾಚಾರದಂತಹ ಘಟನೆಗಳನ್ನು ಎದುರಿಸಲು ತಕ್ಷಣವೇ ಕೈಗೊಳ್ಳಬೇಕಾದ ಕ್ರಮಗಳು ಅಥವಾ ಯೋಜನೆ ರೂಪಿಸುವ ಸಾಮರ್ಥ್ಯ ಸದ್ಯ ಪೊಲೀಸ್‌ ಇಲಾಖೆಗೆ ಇಲ್ಲ ಎಂದು ಬೊಲ್ಟನ್‌ ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಲಾಖೆಯಲ್ಲಿ ಶಸ್ತ್ರಾಸ್ತ್ರಗಳು ಹಳೆಯದಾಗಿವೆ ಮತ್ತು ಅವುಗಳನ್ನು ಸಮರ್ಪಕವಾಗಿ ಸಂಗ್ರಹಿಸಿಲ್ಲ. ಅಧಿಕಾರಿಗಳಿಗೆ ಪರಿಪೂರ್ಣವಾದ ಅಗತ್ಯ ತರಬೇತಿ ನೀಡಿಲ್ಲ. ಜತೆಗೆ, ಗುಪ್ತಚರ ಮಾಹಿತಿಯನ್ನು ಗ್ರಹಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವರದಿ ತಿಳಿಸಿದೆ.

 ಈ ವರದಿಯನ್ನು ಕ್ಯಾಪಿಟಲ್‌ ಪೊಲೀಸರು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು