ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Explainer: US Independence Day; ಅಮೆರಿಕ ಇತಿಹಾಸದಲ್ಲಿ ಜುಲೈ 4ರ ಪ್ರಾಮುಖ್ಯತೆ

ಅಕ್ಷರ ಗಾತ್ರ
ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ದೇಶದ, ಚಾರಿತ್ರಿಕ, ಸಾಂಸ್ಕೃತಿಕ, ಧಾರ್ಮಿಕ ಮಹತ್ವದ, ಕೆಲವು ಮುಖ್ಯ ಘಟನೆಗಳು ಸಂಭವಿಸಿದ ದಿನಗಳನ್ನು ನೆನಪಿಸಿಕೊಳ್ಳಲು, ಆ ದಿನವನ್ನು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಪ್ರತಿವರ್ಷ ಆಚರಿಸುವುದು ಸಾಮಾನ್ಯ. ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದವರನ್ನು ಸ್ಮರಿಸಿ, ಅವರಿಗೆ ಗೌರವ ಸಮರ್ಪಣೆ ಮಾಡುವುದಕ್ಕೂ ಈ ದಿನ ಮೀಸಲಾಗಿರುತ್ತದೆ.

ಅಂತೆಯೇ, ಅಮೆರಿಕದ ಜನರು ಯುನೈಟೆಡ್ ಸ್ಟೇಟ್ಸ್ (ಯುಎಸ್) ಸ್ಥಾಪನೆಯಾದ 245ನೇ ವಾರ್ಷಿಕೋತ್ಸವವನ್ನು ಆಚರಿಸಲು ಈ ವರ್ಷ ಸಜ್ಜಾಗಿದ್ದಾರೆ. ದೇಶವು ಸ್ವಾತಂತ್ರ್ಯ ಪಡೆದಾಗಿನಿಂದಲೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ 'ಜುಲೈ 4' ಪ್ರಮುಖ ರಜಾದಿನವಾಗಿದೆ.

ಜುಲೈ 4 ಅಮೆರಿಕಕ್ಕೆ ಏಕೆ ಮುಖ್ಯವಾಗಿದೆ? ಏಕೆಂದರೆ ಜುಲೈ 4 ಅನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುವ ಸಂಪ್ರದಾಯವು 18 ನೇ ಶತಮಾನಕ್ಕೆ ಕರೆದುಕೊಂಡು ಹೋಗುತ್ತದೆ. 1776 ರ ಜುಲೈ 4 ರಂದು ಅಮೆರಿಕದಲ್ಲಿ ಎರಡನೇ 'ಕಾಂಟಿನೆಂಟಲ್ ಕಾಂಗ್ರೆಸ್' ಸಮಾವೇಶದಲ್ಲಿ ಸ್ವಾತಂತ್ರ್ಯ ಘೋಷಣೆಯನ್ನು ಅಂಗೀಕರಿಸಲಾಯಿತು. ಅಂದು ಅಮೆರಿಕಾ ಸಂಯುಕ್ತ ರಾಜ್ಯಗಳ ಒಕ್ಕೂಟ ಅಸ್ತಿತ್ವಕ್ಕೆ ಬಂತು.

ಹೀಗಾಗಿ, ಮೆರವಣಿಗೆಗಳು ಮತ್ತು ಬಾರ್ಬೆಕ್ಯೂಗಳನ್ನು (ಕಟ್ಟಿಗೆ ಉರಿಯ ಬಿಸಿ ಹೊಗೆಯಲ್ಲಿ ಆಹಾರವನ್ನು ಸುಡುವ ಒಂದು ವಿಧಾನ) ಆಯೋಜಿಸುವ ಮೂಲಕ ಅಮೆರಿಕನ್ನರು 'ಜುಲೈ 4' ಅಥವಾ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ಅವರು ಈ ದಿನ ಕೆಂಪು, ಬಿಳಿ ಮತ್ತು ನೀಲಿ ಬಣ್ಣದ ತೊಡುಗೆಗಳನ್ನು ಧರಿಸುತ್ತಾರೆ. ಯುಎಸ್ ಇತಿಹಾಸ ಮತ್ತು ಸಂಪ್ರದಾಯದಲ್ಲಿ ಸ್ವಾತಂತ್ರ್ಯ ದಿನದ ದಿನಾಚರಣೆಗೆ ಪಟಾಕಿಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಅಮೆರಿಕ ಸ್ವಾತಂತ್ರ್ಯ ದಿನದ ಇತಿಹಾಸ

ಸದ್ಯದ ಮಟ್ಟಿಗೆ ಜುಲೈ 4 ಒಂದು ವಿಶೇಷ ದಿನವಾಗಿದ್ದರೂ ಕೂಡ, 1776ರ ಜುಲೈ 2 ರಂದು ಅಮೆರಿಕದ 13 ವಸಾಹತುಗಳಲ್ಲಿ 12 ಅಧಿಕೃತವಾಗಿ ಗ್ರೇಟ್ ಬ್ರಿಟನ್‌ನಿಂದ ಬೇರೆಯಾಗಲು ನಿರ್ಧರಿಸಿದವು. ಮತದಾನ ಮಾಡಿ 'ಕಾಂಟಿನೆಂಟಲ್ ಕಾಂಗ್ರೆಸ್' ಮೂಲಕ ಸ್ವಾತಂತ್ರ್ಯಕ್ಕಾಗಿ ಬೇಡಿಕೆ ಇಟ್ಟವು. ಅದಾದ ಎರಡು ದಿನಗಳ ಬಳಿಕ ಎಲ್ಲಾ 13 ಅಮೆರಿಕನ್ ವಸಾಹತುಗಳು ಸ್ವಾತಂತ್ರ್ಯ ಘೋಷಣೆಯನ್ನು ಅಂಗೀಕರಿಸಲು ಮತ ಚಲಾಯಿಸಿದವು ಮತ್ತು ಬ್ರಿಟಿಷ್ ಆಡಳಿತಕ್ಕೆ ವಿದಾಯ ಸೂಚಿಸುವ ನಿಟ್ಟಿನಲ್ಲಿ ಕೆಲಸ ಮಾಡಿದವು.

ಜುಲೈ ನಾಲ್ಕರ ಆಚರಣೆಯು 1776ರ ಜುಲೈ 4 ರಂದು ಅಮೆರಿಕದ ಸಂಸ್ಥಾಪಕರು ಅಮೆರಿಕದ ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿದ್ದನ್ನು ಗೌರವಿಸುತ್ತದೆ.

ರಾಜಕೀಯ ತತ್ವಜ್ಞಾನಿ ಬೆಂಜಮಿನ್ ಫ್ರಾಂಕ್ಲಿನ್ ಜೊತೆಗೆ ಹೆಸರಾಂತ ರಾಜಕಾರಣಿ ಮತ್ತು ರಾಜತಾಂತ್ರಿಕ ಥಾಮಸ್ ಜೆಫರ್‌ಸನ್ ಸೇರಿದಂತೆ ಅನೇಕರು ಬ್ರಿಟಿಷ್ ಸಾಮ್ರಾಜ್ಯವನ್ನು ತ್ಯಜಿಸಿದರು ಮತ್ತು ಉತ್ತರ ಅಮೆರಿಕದ ವಸಾಹತುಗಳನ್ನು ಮುಕ್ತ ರಾಜ್ಯಗಳೆಂದು ಘೋಷಿಸಿದರು. ಬಳಿಕ ಅಮೆರಿಕಾ ಸಂಯುಕ್ತ ರಾಜ್ಯಗಳ ಒಕ್ಕೂಟ ಉದಯವಾಯಿತು.

ಜುಲೈ ನಾಲ್ಕರಂದು ಪಟಾಕಿ ಏಕೆ ಮುಖ್ಯ?

ಸ್ವಾತಂತ್ರ್ಯ ಘೋಷಣೆಯಾದ ಫಿಲಡೆಲ್ಫಿಯಾ ನಗರದಲ್ಲಿಯೇ 1777ರ ಜುಲೈ 4 ರಂದು ಪಟಾಕಿ ಸಿಡಿಸುವ ಸಂಪ್ರದಾಯ ಪ್ರಾರಂಭವಾಯಿತು. ಸ್ವಾತಂತ್ರ್ಯ ದಿನಾಚರಣೆಯ ಮೊದಲ ಆಚರಣೆಯ ಸಂದರ್ಭದಲ್ಲಿ ಆರಂಭವಾಯಿತು. ಬೆಳಿಗ್ಗೆ ಮತ್ತು ಸಂಜೆ 13 ಗುಂಡು ಹಾರಿಸುವ ಮೂಲಕ ವಂದನೆ ಸಲ್ಲಿಸಲಾಯಿತು.

ಇದು ದೇಶದ ಮೊದಲ ಔಪಚಾರಿಕ ಜುಲೈ 4 ಆಚರಣೆಯಾಗಿದ್ದು, ಆ ಸಮಯದಲ್ಲಿ ಅದು ಜನರಿಗೆ ಹೆಮ್ಮೆಯ ಸಂಗತಿಯಾಗಿತ್ತು. ಬಳಿಕ 1778 ರಲ್ಲಿ, ಆಗ ಕ್ರಾಂತಿಕಾರಿ ಸೈನ್ಯದಲ್ಲಿ ಜನರಲ್ ಆಗಿದ್ದ ಜಾರ್ಜ್ ವಾಷಿಂಗ್ಟನ್ ತನ್ನ ಸೈನಿಕರಿಗೆ ದುಪ್ಪಟ್ಟು ಪಡಿತರವನ್ನು ನೀಡುವ ಮೂಲಕ ಆ ದಿನದಂದು ಹುರಿದುಂಬಿಸಿದರು.

ಆದಾಗ್ಯೂ, 1776 ರ ಜುಲೈ 4 ರಂದು ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕುವ ಮೊದಲು ಯುಎಸ್‌ನ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಜಾನ್ ಆಡಮ್ಸ್ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಪಟಾಕಿಗಳನ್ನು ಸಿಡಿಸುವ ಕಲ್ಪನೆಯನ್ನು ಹೊಂದಿದ್ದರು ಎಂಬುದನ್ನು ಗಮನಿಸಬೇಕು. ಅಂದಿನಿಂದಲೂ ಇದು ಅಮೆರಿಕನ್ನರು ಜುಲೈ ನಾಲ್ಕನೇ ದಿನವನ್ನು ಭವ್ಯವಾದ ಪಟಾಕಿ ಪ್ರದರ್ಶನಗಳೊಂದಿಗೆ ಆಚರಿಸುವ ಆಚರಣೆಯಾಗಿ ಮಾರ್ಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT