ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌, ಚೀನಾ– ಭಾರತ ಗಡಿಗಳಲ್ಲಿ ಸಂಘರ್ಷ ಸಾಧ್ಯತೆ: ಅಮೆರಿಕ ಗುಪ್ತಚರ ವರದಿ

ಅಮೆರಿಕ ಮಧ್ಯಪ್ರವೇಶಕ್ಕೆ ಒತ್ತಾಯ
Last Updated 9 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ–ಪಾಕಿಸ್ತಾನ ಹಾಗೂ ಭಾರತ–ಚೀನಾ ಗಡಿಗಳಲ್ಲಿ ತೀವ್ರವಾದ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಇದು ಮುಂದೆ ಸಂಘರ್ಷಕ್ಕೂ ಕಾರಣವಾಗುವ ಸಾಧ್ಯತೆಗಳಿವೆ ಎಂದು ಅಮೆರಿಕದ ಗುಪ್ತಚರ ವಿಭಾಗವು ಅಮೆರಿಕ ಸಂಸತ್ತಿಗೆ ನೀಡಿರುವ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು, ಪಾಕಿಸ್ತಾನದ ಪ್ರಚೋದನೆಗಳಿಗೆ ಸೇನಾಬಲದ ಮೂಲಕ ‍ಪ್ರತಿಕ್ರಿಯೆ ನೀಡುವ ಸಾಧ್ಯತೆಯೂ ಹೆಚ್ಚಿದೆ ಎಂದೂ ಹೇಳಿದೆ.

2021ರ ಪ್ರಾರಂಭದಲ್ಲಿ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಕದನವಿರಾಮ ಪ್ರಕ್ರಿಯೆ ಪುನರಾರಂಭವಾದ ಬಳಿಕ ಭಾರತ–ಪಾಕಿಸ್ತಾನದ ನಡುವೆ ಶಾಂತಿ ಏರ್ಪಟ್ಟಿತ್ತು. ಈ ಶಾಂತಿ ಸ್ಥಿತಿಯನ್ನು ಮುಂದುವರಿಸಲು ಎರಡೂ ದೇಶಗಳು ಬಹುಶಃ ಒಲವು ತೋರಿಸುತ್ತಿವೆ.

ಹಾಗಿದ್ದರೂ, ಭಾರತ ವಿರೋಧಿ ಉಗ್ರ ಸಂಘಟನೆಗಳಿಗೆ ಬೆಂಬಲ ನೀಡಿದ ದೊಡ್ಡ ಇತಿಹಾಸವನ್ನು ಪಾಕಿಸ್ತಾನ ಹೊಂದಿದೆ. ಆದ್ದರಿಂದ ಎರಡೂ ದೇಶಗಳ ನಡುವೆ ಸಂಘರ್ಷದ ಸಾಧ್ಯತೆಗಳು ಹೆಚ್ಚಿವೆ. ಕಾಶ್ಮೀರದಲ್ಲಿರುವ ಅಶಾಂತಿ ಹಾಗೂ ಭಾರತದ ಮೇಲೆ ನಡೆಯುತ್ತಿರುವ ಉಗ್ರರ ದಾಳಿಯು ಇದಕ್ಕೆ ಪೂರಕವಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತ–ಚೀನಾ ಗಡಿಗೆ ಸಂಬಂಧಿಸಿ ಎರಡೂ ದೇಶಗಳು ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಂಡಿವೆ. ಇನ್ನೂ ಕೆಲವು ಸಮಸ್ಯೆಗಳಿಗೆ ಸಂಬಂಧಿಸಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿವೆ. ಆದರೆ, 2020ರಲ್ಲಿ ಎರಡೂ ದೇಶಗಳ ಮಧ್ಯೆ ನಡೆದ ಭೀಕರ ಸಂಘರ್ಷದ ನಂತರ ಸಂಬಂಧ ಇನ್ನಷ್ಟು ಹಾಳಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ವಿವಾದಾತ್ಮಕ ಗಡಿ ಪ್ರದೇಶದಲ್ಲಿ ಭಾರತ ಹಾಗೂ ಚೀನಾವು ಸೇನಾ ಚಟುವಟಿಕೆಗಳನ್ನು ತೀವ್ರಗೊಳಿಸಿವೆ. ಈ ಕ್ರಮವು ಅಣುಶಕ್ತಿ ಹೊಂದಿರುವ ಎರಡೂ ದೇಶಗಳ ಮಧ್ಯೆ ಸಶಸ್ತ್ರ ಮುಖಾಮುಖಿಯ ಅಪಾಯವನ್ನು ಹೆಚ್ಚಿಸಿದೆ. ಇದು ಅಮೆರಿಕ ಹಾಗೂ ಅಲ್ಲಿನ ಜನರ ಹಿತಾಸಕ್ತಿಗೆ ತೊಂದರೆ ಉಂಟುಮಾಡಲಿದೆ. ಆದ್ದರಿಂದ ಅಮೆರಿಕವು ಮಧ್ಯಪ್ರವೇಶಿಸಬೇಕು ಎಂದು ವರದಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT