ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಅಮೆರಿಕದಲ್ಲಿ ನಿತ್ಯ 1 ಲಕ್ಷ ಹೊಸ ಕೋವಿಡ್‌ ಪ್ರಕರಣಗಳು

ಲಸಿಕೆ ಪಡೆಯದವರಿಂದ ಸೋಂಕು ಹರಡುವಿಕೆ: ಆರೋಗ್ಯ ಅಧಿಕಾರಿಗಳ ಎಚ್ಚರಿಕೆ
Last Updated 7 ಆಗಸ್ಟ್ 2021, 8:43 IST
ಅಕ್ಷರ ಗಾತ್ರ

ಬಾಲ್ಟಿಮೋರ್‌ (ಅಮೆರಿಕ): ಅಮೆರಿಕದಲ್ಲಿ ಈಗ ಪ್ರತಿ ದಿನ ಒಂದು ಲಕ್ಷ ಕೋವಿಡ್‌–19ರ ಹೊಸ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದು, ಇದು ದೇಶದಲ್ಲಿ ‘ಡೆಲ್ಟಾ’ ರೂಪಾಂತರ ಸೋಂಕು ವೇಗವಾಗಿ ಹರಡುತ್ತಿರುವ ಸೂಚನೆಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಆರೇಳು ವಾರಗಳ ಹಿಂದೆ, ಅಂದರೆ, ಜೂನ್‌ ತಿಂಗಳಾಂತ್ಯದಲ್ಲಿ ಅಮೆರಿಕದಲ್ಲಿ ನಿತ್ಯ ಸರಾಸರಿ 11 ಸಾವಿರ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ, ಈಗ ನಿತ್ಯ ಸೋಂಕಿನ ಪ್ರಮಾಣ 1, 07,143ಕ್ಕೆ ಏರಿದೆ. ಅಷ್ಟರಮಟ್ಟಿಗೆ ಕೋವಿಡ್‌ ಸಾಂಕ್ರಾಮಿಕದ ಡೆಲ್ಟಾ ರೂಪಾಂತರ ಸೋಂಕು ವೇಗವಾಗಿ ಹರಡುತ್ತಿದೆ.

ಕಳೆದ ವರ್ಷದ ಚಳಿಗಾಲದಲ್ಲಿ ಇದೇ ರೀತಿ ಕೋವಿಡ್‌ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಈಗ ಡೆಲ್ಟಾ ರೂಪಾಂತರ ತಳಿ ಸೋಂಕು ಹರಡುತ್ತಿರುವ ವೇಗ ಗಮನಿಸಿದರೆ, ಮತ್ತೆ ಹಿಂದಿನ ವರ್ಷದಲ್ಲಾದಂತೆ ಸೋಂಕಿನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಕಾಣುತ್ತಿದೆ.

ಈ ವರ್ಷದ ಜನವರಿ ತಿಂಗಳ ಆರಂಭದಲ್ಲಿ ಪ್ರತಿ ದಿನ ಸರಾಸರಿ 2,50,000 ಹೊಸ ಸೋಂಕಿನ ಪ್ರಕರಣಗಳು ದಾಖಲಾಗಿತ್ತು. ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಪ್ರತಿ ದಿನ ಸರಾಸರಿ 1 ಲಕ್ಷ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ದೇಶದಲ್ಲಿ ಶೇ 70ರಷ್ಟು ಹದಿಹರೆಯದವರಿಗೆ ಕೋವಿಡ್‌ ಲಸಿಕೆ ಹಾಕಿಸಿದ್ದರೂ, ಈ ಪ್ರಮಾಣದಲ್ಲಿ ಸೋಂಕು ಏರುತ್ತಿತ್ತು. ಈ ವರ್ಷದ ಜೂನ್ ತಿಂಗಳಲ್ಲಿ ಸೋಂಕಿನ ಪ್ರಕರಣ ಕಡಿಮೆಯಾಗಿತ್ತು. ಆರು ವಾರಗಳಿಂದೀಚೆಗೆ ಪುನಃ ಪ್ರಕರಣಗಳು ಏರಿಕೆಯಾಗುತ್ತಿವೆ.

ಲಸಿಕೆ ಪಡೆಯದ ಜನರಿಂದಲೇ ವೇಗವಾಗಿ ಸೋಂಕು ಹರಡುತ್ತಿದೆ. ದಕ್ಷಿಣ ಅಮೆರಿಕದಲ್ಲಂತೂ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ಹೋಗಿವೆ. ‘ಜನರು ಲಸಿಕೆ ಪಡೆಯಲು ಹಿಂಜರಿದರೆ, ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆ ಇದೆ‘ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

‘ಜನರು ಲಸಿಕೆ ಹಾಕಿಸಿಕೊಳ್ಳದಿದ್ದರೆ, ನಿತ್ಯ ಸೋಂಕಿನ ಪ್ರಮಾಣ ಲಕ್ಷಗಟ್ಟಲೆ ಹೆಚ್ಚಾಗುತ್ತವೆ ಎಂಬುದನ್ನು ನಮ್ಮಲ್ಲಿರುವ ಮಾದರಿಗಳು ಸ್ಪಷ್ಟಪಡಿಸುತ್ತಿವೆ. ಕಳೆದ ಜನವರಿಯಲ್ಲಿ ಇದೇ ರೀತಿ ಸೋಂಕಿನ ಪ್ರಕರಣಗಳು ಹೆಚ್ಚಾಗಿತ್ತು‘ ಎಂದು ಕೇಂದ್ರೀಯ ರೋಗ ತಡೆ ಮತ್ತು ನಿಯಂತ್ರಣ ಇಲಾಖೆಯ ನಿರ್ದೇಶಕ ರೋಚೆಲ್ಲೆ ವಾಲೆನ್ಸ್‌ಕಿ ‘ಸಿಎನ್‌ಎನ್‌ ದಿಸ್‌ ವೀಕ್‌‘ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅಮೆರಿಕದಲ್ಲಿ ವೈರಸ್‌ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆಯೂ ಗಗನಕ್ಕೇರಿದೆ. ಇದು ತುಂಬಾ ಗಂಭೀರವಾದ ವಿಷಯವಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಹಾಸಿಗೆಯ ಕೊರತೆಯೂ ಎದುರಾಗಿದೆ. ತಮ್ಮ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳಿಗೆ ಹಾಸಿಗೆಗಳನ್ನು ಪೂರೈಸಲು ಪರದಾಡುವಂತಾಗಿದೆ.

ಕೋವಿಡ್‌–19 ಸೋಂಕಿನ ಅಲೆ, ಸ್ಥಳೀಯ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ತರಹದ ಪರಿಣಾಮ ಬೀರಿದೆ ಎಂದು ಹೂಸ್ಟನ್‌ನಲ್ಲಿರುವ ಆರೋಗ್ಯ ಅಧಿಕಾರಿಗಳು ಹೇಳುತ್ತಿದ್ದಾರೆ. ಪರಿಣಾಮವಾಗಿ, ಕೆಲವು ರೋಗಿಗಳು ವೈದ್ಯಕೀಯ ಸೇವೆ ಪಡೆಯಲು ಉತ್ತರ ಡಕೊಟಾ ಸೇರಿದಂತೆ, ನಗರದಿಂದ ದೂರವಿರುವ ಪ್ರದೇಶಗಳಿಗೆ ಹೋಗುತ್ತಿದ್ದಾರೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT