ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಸಾವಿನ ಸಂಖ್ಯೆ ಉತ್ಪ್ರೇಕ್ಷಿತ: ಟ್ರಂಪ್ ಟೀಕೆ ತಳ್ಳಿ ಹಾಕಿದ ಅಧಿಕಾರಿಗಳು

Last Updated 4 ಜನವರಿ 2021, 6:43 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಕೋವಿಡ್‌ –19‘ ನಿಂದ ಅಮೆರಿಕದಲ್ಲಿ 3.50 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಉತ್ಪ್ರೇಕ್ಷೆಯಿಂದ ಕೂಡಿದೆ ಎಂಬ ಅಮೆರಿಕದ ಅಧಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ತಳ್ಳಿ ಹಾಕಿರುವ ಅಧಿಕಾರಿಗಳು, ಲಕ್ಷಾಂತರ ಅಮೆರಿಕನ್ನರಿಗೆ ಲಸಿಕೆ ತಲುಪಿಸುವ ವಿಚಾರದಲ್ಲಿ ನಿರೀಕ್ಷಿತ ಗುರಿ ತಲುಪಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಅಮೆರಿಕದಲ್ಲಿ 42 ಲಕ್ಷ ಜನರು ಫೈಝರ್‌–ಬಯೋಎನ್‌ಟೆಕ್‌ ಅಥವಾ ಮಾಡೆರ್ನಾ ಕೋವಿಡ್‌ ಲಸಿಕೆಯ ಎರಡು ಡೋಸೇಜ್‌ ಅನ್ನು ಪ್ರಾಥಮಿಕವಾಗಿ ಸ್ವೀಕರಿಸಿದ್ದಾರೆ. ಆದರೆ ಹೊಸ ವರ್ಷದ ವೇಳೆಗೆ 2 ಕೋಟಿ ಅಮೆರಿಕನ್ನರಿಗೆ ಲಸಿಕೆ ಹಾಕಬಹುದೆಂಬು ಗುರಿಯನ್ನು ತಲುಪಲು ಸಾಧ್ಯವಾಗಿಲ್ಲ.

ಕೋವಿಡ್ 19 ಲಸಿಕೆ ವಿತರಣೆ ವೇಳೆ ಆಗುತ್ತಿರುವ ವಿಳಂಬ ಕುರಿತು ಸ್ಥಳೀಯ ಅಧಿಕಾರಿಗಳ ವಿರುದ್ಧ ಟಂಪ್‌ ಟ್ವೀಟರ್‌ನಲ್ಲಿ ಹರಿಹಾಯ್ದಿದ್ದಾರೆ. ಜತೆಗೆ, ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ರೋಗ ನಿಯಂತ್ರಣ (ಸಿಡಿಸಿ) ನೀತಿಯನ್ನೇ ದೂಷಿಸಿರುವ ಅವರು, ‘ಸಾವಿನ ಬಗ್ಗೆ ಅನುಮಾನ ಬಂದರೆ, ಅದಕ್ಕೆ ಕೋವಿಡ್‌ ಸಾವು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಕೊರೊನಾ ಸೋಂಕು ಮತ್ತು ಸಾವಿಗೆ ಕಾರಣ ಪತ್ತೆ ಮಾಡಲು ಸೂಕ್ತ ವಿಧಾನವಿಲ್ಲದಿರುವುದೇ, ಇಂಥ ಉತ್ಪ್ರೇಕ್ಷಿತ ಅಂಕಿ–ಸಂಖ್ಯೆ ನೀಡಲು ಕಾರಣವಾಗಿದೆ‘ ಎಂದು ಅವರು ಟೀಕಿಸಿದ್ದಾರೆ.

ಟ್ರಂಪ್ ಅವರ ಟ್ವೀಟ್‌ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ವಿಜ್ಞಾನಿ ಆಂಟೊನಿ ಫೌಸಿ, ‘ಕೊರೊನಾದಿಂದ ಸತ್ತಿರುವ ಸಂಖ್ಯೆಗಳು ನೈಜವಾಗಿವೆ‘ ಎಂದು ಹೇಳಿದ್ದಾರೆ. ಟ್ರಂಪ್ ಆಡಳಿತದಲ್ಲಿ ಪ್ರಧಾನ ಸರ್ಜನ್ ಆಗಿ ನೇಮಕಗೊಂಡಿದ್ದ ಜೆರೋಮ್ ಆಡಮ್ಸ್‌ ಕೂಡ ‘ಸಿಡಿಸಿ ನೀಡಿರುವ ಸಂಖ್ಯೆಗಳನ್ನು ಪ್ರಶ್ನಿಸುವ ಕಾರಣವೇ ಇಲ್ಲ‘ ಎಂದು ಹೇಳಿದ್ದಾರೆ.

1.3 ಕೋಟಿಗೂ ಹೆಚ್ಚಿನ ಲಸಿಕೆ ಡೋಸೇಜ್‌ಗಳನ್ನು ರಾಷ್ಟ್ರವ್ಯಾಪಿ ವಿತರಿಸಲಾಗಿದೆ. ಆದರೆ ಕೆಲವೊಂದು ವ್ಯವಸ್ಥೆಯಲ್ಲಿರುವ ಸಮಸ್ಯೆಗಳಿಂದಾಗಿ ಆರೋಗ್ಯ ಕಾರ್ಯಕರ್ತರು ಮತ್ತು ದುರ್ಬಲ ಜನರಿಗೆ ಲಸಿಕೆ ಹಾಕುವ ಪ್ರಯತ್ನಗಳಿಗೆ ಅಡ್ಡಿಯಾಗಿದೆ‌. ‘ಕೆಲವೊಂದು ತೊಂದರೆಗಳಿವೆ. ಅವೆಲ್ಲ ಅರ್ಥವಾಗುವಂಥದ್ದು. ಎಲ್ಲವನ್ನೂ ಸರಿಪಡಿಸಿ, ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಫೌಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT