ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್ ಮುಂದಿನ ನಡೆ: ಜಿ7 ಶೃಂಗಸಭೆಯಲ್ಲಿ ಚರ್ಚಿಸಲು ಬೈಡನ್–ಬೋರಿಸ್ ಸಮ್ಮತಿ

ವರ್ಚುವಲ್ ಸಭೆ
Last Updated 18 ಆಗಸ್ಟ್ 2021, 3:20 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿನ ಬೆಳವಣಿಗೆಗಳ ಸಂಬಂಧ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತು ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮಂಗಳವಾರ ಮಾತುಕತೆ ನಡೆಸಿದ್ದಾರೆ. ಅಫ್ಗನ್‌ ಬಿಕ್ಕಟ್ಟಿನ ಕುರಿತು ವರ್ಚುವಲ್‌ ಆಗಿ ಜಿ7 ಮುಖಂಡರ ಶೃಂಗಸಭೆ ನಡೆಯಲಿದೆ ಎಂದು ಶ್ವೇತ ಭವನ ಪ್ರಕಟಿಸಿದೆ.

ಕಾಬೂಲ್‌ ಅನ್ನು ತಾಲಿಬಾನ್‌ ವಶಕ್ಕೆ ಪಡೆದ ನಂತರದಲ್ಲಿ ಇದೇ ಮೊದಲ ಬಾರಿಗೆ ಬೈಡನ್‌ ವಿದೇಶಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಮೆರಿಕ ತನ್ನ ಸೇನಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಅಫ್ಗನ್‌ ಬಗ್ಗೆ ಮುಂದಿನ ನಡೆಯನ್ನು ಚರ್ಚಿಸಲು ವರ್ಚುವಲ್‌ ಆಗಿ ಜಿ7 ಶೃಂಗಸಭೆಯನ್ನು ನಡೆಸಲು ಉಭಯ ನಾಯಕರು ಸಮ್ಮತಿಸಿರುವುದಾಗಿ ಶ್ವೇತ ಭವನ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ಷಿಪ್ರಗತಿಯಲ್ಲಿ ತಾಲಿಬಾನ್‌ ಕಂಡ ವಿಜಯವು ಅಫ್ಗಾನಿಸ್ತಾನದ ಜನ ಸಾಮಾನ್ಯರಲ್ಲಿ ಆತಂಕದ ಕಾರ್ಮೋಡ ಸೃಷ್ಟಿಸಿದೆ. ಹಲವು ಮಂದಿ ಅದಾಗಲೇ ರಾಷ್ಟ್ರ ತೊರೆದು ವಲಸಿಗರಾಗಿ ವಿದೇಶಗಳ ಮೊರೆ ಹೋಗಿದ್ದಾರೆ. ಸಾವಿರಾರು ಜನರನ್ನು ಏರ್‌ಲಿಫ್ಟ್‌ ಮಾಡುವ ಸಮಯದಲ್ಲಿ ಪೂರ್ವ ಸಿದ್ಧತೆಯ ಕೊರತೆಯ ಬಗ್ಗೆ ಬೈಡನ್‌ ಅವರು ಜಾಗತಿಕವಾಗಿ ಟೀಕೆಗಳಿಗೆ ಒಳಗಾಗಿದ್ದಾರೆ. 'ಅಫ್ಗಾನಿಸ್ತಾನದ ವಿಷಯವಾಗಿ ಮಿತ್ರ ರಾಷ್ಟ್ರಗಳು ಜೊತೆಯಾಗಿ ಸಾಗಬೇಕಿರುವ ಅಗತ್ಯತೆಯ' ಕುರಿತು ಬೋರಿಸ್‌ ಚರ್ಚಿಸಿರುವುದಾಗಿ ಪ್ರಕಟಣೆಯಲ್ಲಿದೆ.

'ವಲಸಿಗರು ಮತ್ತು ಅಫ್ಗನ್‌ನ ನಿರಾಶ್ರಿತರಿಗೆ ಜಾಗತಿಕವಾಗಿ ನೀಡಬಹುದಾದ ಮಾನವೀಯ ಸಹಕಾರದ' ಬಗ್ಗೆ ಮಾತುಕತೆ ನಡೆದಿದೆ. ಕಳೆದ 20 ವರ್ಷಗಳಲ್ಲಿ ಅಫ್ಗಾನಿಸ್ತಾನದಲ್ಲಿ ಆಗಿರುವ ಬದಲಾವಣೆಗಳು ಅಳಿಸಿ ಹೋಗದಂತೆ ತಡೆಯುವುದು ಪ್ರಮುಖವಾಗಿದೆ ಎಂದು ಬೋರಿಸ್‌ ಒತ್ತಿ ಹೇಳಿರುವುದಾಗಿಯೂ ಪ್ರಕಟಿಸಲಾಗಿದೆ.

ಈ ವರ್ಷ ಬ್ರಿಟನ್‌ ಜಿ7 ಶೃಂಗಸಭೆಯ ನೇತೃತ್ವ ವಹಿಸಿದೆ. ಜಗತ್ತಿನ ಪ್ರಮುಖ ಆರ್ಥಿಕ ಬಲಾಡ್ಯ ದೇಶಗಳಾದ ಅಮೆರಿಕ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಬ್ರಿಟನ್‌ ದೇಶಗಳು ಸೇರಿ ಮಾಡಿಕೊಂಡಿರುವ ಒಕ್ಕೂಟವೇ ಜಿ–7 ಗುಂಪು.

ಅಫ್ಗಾನಿಸ್ತಾನದಿಂದ ಅಮೆರಿಕದ ಸೇನಾ ಪಡೆಯನ್ನು ವಾಪಸ್‌ ಕರೆಸಿಕೊಂಡಿರುವುದನ್ನು ಸಮರ್ಥಿಸಿಕೊಂಡಿರುವ ಅಧ್ಯಕ್ಷ ಜೋ ಬೈಡನ್‌, ತಮ್ಮ ನಿರ್ಧಾರಕ್ಕೆ ಬದ್ಧ ಇರುವುದಾಗಿ ಸೋಮವಾರ ಹೇಳಿದ್ದಾರೆ. ಇದೇ ವೇಳೆ, ದೇಶವನ್ನು ಸುಲಭವಾಗಿ ತಾಲಿಬಾನ್‌ ತುತ್ತಾಗಿಸಿದ, ಅಫ್ಗಾನಿಸ್ತಾನ ಸರ್ಕಾರ ಹಾಗೂ ಸೇನೆಯನ್ನೂ ದೂಷಿಸಿದ್ದಾರೆ.

ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಬೈಡನ್‌, ‘ಕಳೆದ 20 ವರ್ಷಗಳಲ್ಲಿ ಮಾಡಿದ ತಪ್ಪುಗಳನ್ನು ಮತ್ತೆ ಮಾಡಲಾಗದು. ಅಫ್ಗಾನಿಸ್ತಾನದಲ್ಲಿ ಸಮರ ಪರಿಸ್ಥಿತಿಯ ಮೇಲೆ ನಿಗಾವಹಿಸುವ ಕೆಲಸವನ್ನು ಇನ್ನು ಮುಂದೆಯೂ ಮಾಡಲಾಗದು. ನಮ್ಮ ಸೈನಿಕರ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿ, ಮತ್ತೊಂದು ರಾಷ್ಟ್ರದ ನಾಗರಿಕ ಯುದ್ಧದಲ್ಲಿ ನಿರಂತರವಾಗಿ ಹೋರಾಡಲು ನಮ್ಮ ಪಡೆಗಳಿಗೆ ಸೂಚಿಸಲು ಸಾಧ್ಯವಿಲ್ಲ. ಇದು ನಮ್ಮ ರಾಷ್ಟ್ರದ ಭದ್ರತೆ ಹಿತಾಸಕ್ತಿಗೆ ‍ಪೂರಕವಾಗಿಲ್ಲ ಹಾಗೂ ಅಮೆರಿಕದ ಜನತೆಗೆ ಇದು ಬೇಕಿಲ್ಲ’ ಎಂದಿದ್ದಾರೆ.

ಅಫ್ಗಾನಿಸ್ತಾನದ ಆಳ್ವಿಕೆಯು ತಾಲಿಬಾನ್‌ ಕೈಗೆ ಸಿಕ್ಕಿದ್ದು ಸುತ್ತಲಿನ ದೇಶಗಳಾದ ಇರಾನ್‌ ಮತ್ತು ಟರ್ಕಿಯ ಕಳವಳಕ್ಕೆ ಕಾರಣವಾಗಿದೆ. ತಾಲಿಬಾನ್‌ ಆಳ್ವಿಕೆ ಯಿಂದ ಕಂಗೆಡುವ ಜನರು ಈ ಎರಡೂ ದೇಶಗಳಿಗೆ ನುಗ್ಗುವ ಸಾಧ್ಯತೆ ಹೆಚ್ಚು. ಎರಡೂ ದೇಶಗಳಲ್ಲಿ ಕೊರೊನಾ ಸಾಂಕ್ರಾಮಿಕವು ತೀವ್ರವಾಗಿದೆ. ಈ ಸಂದರ್ಭದಲ್ಲಿ ಹೊರಗಿನ ಜನರು ನುಗ್ಗುವುದು ಇನ್ನಷ್ಟು ಅಪಾಯಕ್ಕೆ ಕಾರಣ ಆಗಬಹುದು ಎಂಬ ಆತಂಕವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT