ಭಾನುವಾರ, ಅಕ್ಟೋಬರ್ 25, 2020
23 °C

ಕಮಲಾ–ಪೆನ್ಸ್‌ ಸಂವಾದ: ಅಂತರ ಕಾಪಾಡಲು ‘ಪ್ಲೆಕ್ಸಿ ಗ್ಲಾಸ್‌’

ಎಪಿ Updated:

ಅಕ್ಷರ ಗಾತ್ರ : | |

Prajavani

ಸಾಲ್ಟ್‌ ಲೇಕ್‌ ಸಿಟಿ: ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಕಮಲಾ ಹ್ಯಾರಿಸ್‌ ಹಾಗೂ ಮೈಕ್ ಪೆನ್ಸ್‌ ನಡುವೆ ಬುಧವಾರ ರಾತ್ರಿ ಸಂವಾದ ಏರ್ಪಡಿಸಲಾಗಿತ್ತು. ಈ ವೇಳೆ ಎಲ್ಲರ ಗಮನ ಸೆಳೆದಿದ್ದು ವೇದಿಕೆಯಲ್ಲಿ ಅಳವಡಿಸಿದ್ದ ‘ಪ್ಲೆಕ್ಸಿ ಗ್ಲಾಸ್‌’. 

ಅಮೆರಿಕದಲ್ಲಿ ಕೊರೊನಾ ಸೋಂಕು ವೇಗವಾಗಿ ಪಸರಿಸುತ್ತಲಿದೆ. ಹೀಗಾಗಿ ಮುಂಜಾಗ್ರತೆಯ ದೃಷ್ಟಿಯಿಂದ ಆಯೋಜಕರು ಈ ಕ್ರಮ ಕೈಗೊಂಡಿದ್ದರು. ಡೆಮಾಕ್ರಟಿಕ್‌ ಪಕ್ಷದ ಕಮಲಾ ಹಾಗೂ ರಿಪಬ್ಲಿಕನ್‌ ಪಕ್ಷದ ಪೆನ್ಸ್‌ ಅವರ ಆಸನಗಳ ನಡುವೆ 12 ಅಡಿಗಳಿಗಿಂತಲೂ ಹೆಚ್ಚು ಅಂತರವಿರುವಂತೆ ಎಚ್ಚರವಹಿಸಲಾಗಿತ್ತು.  

ಕ್ಲೀವ್‌ಲ್ಯಾಂಡ್‌ನಲ್ಲಿ ನಡೆದಿದ್ದ ಅಧ್ಯಕ್ಷೀಯ ಅಭ್ಯರ್ಥಿಗಳ ಸಂವಾದದ ಬೆನ್ನಲ್ಲೇ ಡೊನಾಲ್ಡ್‌ ಟ್ರಂಪ್‌ಗೆ ಕೋವಿಡ್‌ ದೃಢಪಟ್ಟಿತ್ತು. ಹೀಗಾಗಿ ಕಮಲಾ ಹ್ಯಾರಿಸ್‌ ಅವರ ತಂಡದವರು ಆಸನಗಳ ನಡುವೆ ‘ಪ್ಲೆಕ್ಸಿ ಗ್ಲಾಸ್‌’ ಅಳವಡಿಸುವಂತೆ ಆಯೋಜಕರಿಗೆ ಮನವಿ ಮಾಡಿದ್ದರು. ಇದಕ್ಕೆ ಪೆನ್ಸ್‌ ತಂಡದವರು ವಿರೋಧ ವ್ಯಕ್ತಪಡಿಸಿದರು. ಟ್ರಂಪ್‌ ಕೋವಿಡ್‌ನಿಂದ ಗುಣಮುಖರಾಗಿ ಶ್ವೇತಭವನಕ್ಕೆ ಮರಳಿದ್ದಾರೆ ಎಂದೂ ತಿಳಿಸಿದರು.

ಕೋವಿಡ್‌–19 ಹಿನ್ನೆಲೆಯಲ್ಲಿ ಯೂನಿವರ್ಸಿಟಿ ಆಫ್‌ ಯುಟಾಹ್‌ನ ಮುಖ್ಯ ಸಭಾಂಗಣದಲ್ಲಿ 20 ಗಣ್ಯರಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಆಸನದ ನಡುವೆ ಆರು ಅಡಿ ಅಂತರ ಇರುವಂತೆ ನೋಡಿಕೊಳ್ಳಲಾಗಿತ್ತು. ಸಭಾಂಗಣದ ಬಾಲ್ಕನಿಯಲ್ಲಿ 60 ವಿದ್ಯಾರ್ಥಿಗಳು ಕುಳಿತುಕೊಂಡಿದ್ದರು.

ಸಭಾಂಗಣದ ಪ್ರವೇಶ ದ್ವಾರದ ಬಳಿ ನಿಂತಿದ್ದ ಸಿಬ್ಬಂದಿಯು ಗಣ್ಯರು ಹಾಗೂ ಇತರರ ದೇಹದ ಉಷ್ಣಾಂಶ ಪರೀಕ್ಷಿಸಿ ಅವರನ್ನು ಒಳಗೆ ಬಿಡುತ್ತಿದ್ದರು. ಕೈಗಳಿಗೆ ಸ್ಯಾನಿಟೈಸರ್‌ ಹಾಕಿಕೊಳ್ಳುವಂತೆಯೂ ಸೂಚಿಸುತ್ತಿದ್ದರು. ಜೊತೆಗೆ ಮಾಸ್ಕ್‌ ಧರಿಸುವುದನ್ನೂ ಕಡ್ಡಾಯಗೊಳಿಸಲಾಗಿತ್ತು.

ಕಳೆದ ವಾರ ನಡೆದಿದ್ದ ಅಧ್ಯಕ್ಷೀಯ ಅಭ್ಯರ್ಥಿಗಳ ಸಂವಾದದ ವೇಳೆ ಟ್ರಂಪ್‌ ಬೆಂಬಲಿಗರಿಗೆ ಮಾಸ್ಕ್‌ ನೀಡಿದ್ದರೂ ಅವುಗಳನ್ನು ಹಾಕಿಕೊಳ್ಳಲು ಅವರು ನಿರಾಕರಿಸಿದ್ದರು. 

‘ಕಮಲಾ ಹಾಗೂ ಪೆನ್ಸ್‌ ಅವರು ಮಂಗಳವಾರ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು. ಇಬ್ಬರ ವರದಿಯೂ ‘ನೆಗೆಟಿವ್‌’ ಬಂದಿತ್ತು’ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.   ಸಂವಾದದ ವೇಳೆ ಇಬ್ಬರೂ ಪರಸ್ಪರ ಆರೋಪ–ಪ್ರತ್ಯಾರೋಪಕ್ಕಿಳಿದಿದ್ದರಿಂದ ಚರ್ಚೆಯು ಕಾವೇರಿತ್ತು.

‘ಟ್ರಂಪ್ ವಿದೇಶಾಂಗ ನೀತಿಯಿಂದ ಅಮೆರಿಕಗೆ ಆಪತ್ತು’

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತಾವಧಿಯಲ್ಲಿನ ವಿದೇಶಾಂಗ ನೀತಿಗಳನ್ನು ಟೀಕಿಸಿರುವ ಉಪಾಧ್ಯಕ್ಷ ಸ್ಥಾನದ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌, ‘ನಮ್ಮ ಸ್ನೇಹಿತರಿಗೆ ದ್ರೋಹ ಬಗೆದು, ಸರ್ವಾಧಿಕಾರಿಗಳನ್ನು ಬೆಂಬಲಿಸುತ್ತಿದ್ದಾರೆ' ಎಂದು ದೂರಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿದೇಶಾಂಗ ನೀತಿಗಳು ಏಕಪಕ್ಷೀಯವಾಗಿವೆ. ಇದರಿಂದ, ಅಮೆರಿಕವನ್ನು ಅಪಾಯದ ಸ್ಥಿತಿಗೆ ತಳ್ಳಲಾಗಿದೆ’ ಎಂದು ಟೀಕಿಸಿದರು.

‘ನೀವು ಸ್ನೇಹಿತರಿಗೆ ನೀಡಿದ ಮಾತಿನಂತೆ ನಡೆದುಕೊಳ್ಳಬೇಕು. ಸ್ನೇಹಿತರಿಗೆ ನಿಷ್ಠರಾಗಿರಬೇಕು’ ಎಂದು ಹ್ಯಾರಿಸ್‌ ಹೇಳಿದರು. 

ಹ್ಯಾರಿಸ್‌ ಅವರ ಮಾತುಗಳಿಗೆ ತಿರುಗೇಟು ನೀಡಿದ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್‌‌, ಟ್ರಂಪ್‌ ಅವರ ಆಡಳಿತವನ್ನು ಸಮರ್ಥಿಸಿಕೊಂಡರು.

‘ಟ್ರಂಪ್‌  ಅವರು ಸದಾ ಮಿತ್ರ ರಾಷ್ಟ್ರಗಳ ಪರವಾಗಿ ನಿಂತಿದ್ದಾರೆ. ಮೈತ್ರಿ ರಾಷ್ಟ್ರಗಳೊಂದಿಗೆ ನಮ್ಮ ಸಂಬಂಧವನ್ನು ಬಲಿಷ್ಠಗೊಳಿಸಿದ್ದೇವೆ. ಅದೇ ರೀತಿ ಅಮೆರಿಕಗೆ ಹಾನಿ ಮಾಡುವವರ ವಿರುದ್ಧವೂ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ಹೇಳಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು