ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್: ಕೆರ್ಸಾನ್‌ ನಗರಕ್ಕೆ ಮತ್ತೆ ಜೀವಕಳೆ

ಮದ್ದು–ಗುಂಡುಗಳ ಸದ್ದಿನಿಂದ ಬೆಚ್ಚಿ ಬೀಳುತ್ತಿದ್ದ ಸ್ಥಳೀಯರ ಮೊಗದಲ್ಲಿ ಈಗ ಮಂದಹಾಸ
Published : 19 ನವೆಂಬರ್ 2022, 13:40 IST
ಫಾಲೋ ಮಾಡಿ
Comments

ಕೆರ್ಸಾನ್‌, ಉಕ್ರೇನ್‌: ರಷ್ಯಾ ಸೈನಿಕರ ಆಕ್ರಮಣದಿಂದ ನಲುಗಿದ್ದ ಕೆರ್ಸಾನ್‌ ನಗರಕ್ಕೆ ಮತ್ತೆ ಜೀವಕಳೆ ಬಂದಿದೆ. ಹಗಲು ರಾತ್ರಿ ಮದ್ದು–ಗುಂಡುಗಳ ಸದ್ದಿನಿಂದ ಬೆಚ್ಚಿ ಬೀಳುತ್ತಿದ್ದ ಸ್ಥಳೀಯರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.

ರಷ್ಯಾವು ಕೆರ್ಸಾನ್‌ನಿಂದ ತನ್ನ ಸೇನಾಪಡೆ ಹಿಂದಕ್ಕೆ ಕರೆಸಿಕೊಂಡ ಬಳಿಕ ಈ ಪ್ರದೇಶಕ್ಕೆ ಮರಳಿರುವ ಸ್ಥಳೀಯರ ಮೊಗದಲ್ಲಿ ಸಂತಸ ಮನೆ ಮಾಡಿದೆ.

‘ಮನಸ್ಸು ಹಗುರಾಗಿದೆ. ಉಸಿರಾಟವೂ ಸರಾಗವಾಗಿ. ಈಗ ಎಲ್ಲವೂ ಭಿನ್ನವಾಗಿದೆ’ ಎಂದು ಒಲೆನಾ ಸ್ಮೋಲಿಯಾನ ಎಂಬುವರು ಖುಷಿ ವ್ಯಕ್ತಪಡಿಸಿದ್ದಾರೆ.

‘ಕೆರ್ಸಾನ್‌ನಲ್ಲಿ ಇದ್ದವರು ರಷ್ಯಾ ಭಾಷೆಯಲ್ಲೇ ಸಂವಹನ ನಡೆಸಬೇಕಿತ್ತು. ಅವರ ಭಾಷೆಯಲ್ಲಿ ಮಾತನಾಡುವುದ‌ಕ್ಕೆ ನಾನು ನಾಚಿಕೆಪಡುತ್ತಿದ್ದೆ. ಅವರು ದೈಹಿಕ ಮತ್ತು ಮಾನಸಿಕವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರು. ಅವರ ಕಿರುಕುಳ ತಾಳಲಾರದೆ ಕೆಲವರು ನಗರ ಬಿಟ್ಟು ಓಡಿಹೋದರು’ ಎಂದು ತಿಳಿಸಿದ್ದಾರೆ.

ರಷ್ಯಾ ಆಕ್ರಮಣಕ್ಕೂ ಮುನ್ನ 3 ಲಕ್ಷದಷ್ಟಿದ್ದ ಕೆರ್ಸಾನ್‌ನ ಜನಸಂಖ್ಯೆ ಸದ್ಯ 80 ಸಾವಿರಕ್ಕೆ ತಗ್ಗಿದೆ. ಕೀವ್‌ನಿಂದ ಕೆರ್ಸಾನ್‌ಗೆ ರೈಲು ಸಂಚಾರ ಆರಂಭವಾಗಿದ್ದು, ನಾಗರಿಕರು ನಿಧಾನವಾಗಿ ನಗರಕ್ಕೆ ವಾಪಸ್ಸಾಗುತ್ತಿದ್ದಾರೆ.

‘ರಷ್ಯಾ ಸೈನಿಕರು ನಗರವನ್ನು ಆಕ್ರಮಿಸಿಕೊಂಡ ನಂತರ ನಮ್ಮ ಸ್ಥಿತಿ ಶೋಚನೀಯವಾಗಿತ್ತು. ಜೋರಾಗಿ ಏನನ್ನೂ ಹೇಳುವಂತಿರಲಿಲ್ಲ. ಉಕ್ರೇನ್‌ ಭಾಷೆಯಲ್ಲಿ ಮಾತನಾಡುವಂತಿರಲಿಲ್ಲ. ರಷ್ಯಾ ಸೈನಿಕರ ನಿಗಾ ಸದಾ ನಮ್ಮ ಮೇಲೆ ಇರುತ್ತಿತ್ತು. ಹೀಗಾಗಿ ಅತ್ತ ಇತ್ತ ತಿರುಗಿ ನೋಡುವುದಕ್ಕೂ ಭಯಪಡುವಂತಾಗಿತ್ತು’ ಎಂದು 57 ವರ್ಷದ ಒಲೆಕ್ಸಾಂಡ್ರಾ ನೆನಾಡಿಸುಕ್‌ ಎಂಬುವರು 8 ತಿಂಗಳ ಕಾಲ ಅನುಭವಿಸಿದ ಯಾತನೆ ಬಿಚ್ಚಿಟ್ಟಿದ್ದಾರೆ.

‘ನಗರ ಬಿಟ್ಟು ಓಡಿಹೋಗಲು ಮೂರು ಬಾರಿ ಪ್ರಯತ್ನಿಸಿದ್ದೆವು. ಆದರೆ ರಷ್ಯಾ ಸೈನಿಕರು ಇದಕ್ಕೆ ಅವಕಾಶ ನೀಡಲಿಲ್ಲ. ನಗರದಿಂದ ಹೊರ ಹೋಗಲು ಇದ್ದ ಎಲ್ಲಾ ಮಾರ್ಗಗಳನ್ನೂ ಅವರು ಮುಚ್ಚಿದ್ದರು’ ಎಂದು 37 ವರ್ಷದ ತೆತಿಯಾನ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT