ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ಬರದಿದ್ದರೆ, ನಾವೇ ಹೋರಾಡುತ್ತೇವೆ: ಜಾಗತಿಕ ನಾಯಕರಿಗೆ ಭಾರತೀಯ ಬಾಲಕಿ ಸವಾಲು

ಹವಾಮಾನ ವೈಪರೀತ್ಯ: ಜಾಗತಿಕ ನಾಯಕರಿಗೆ ಭಾರತೀಯ ಬಾಲಕಿ ಸವಾಲು
Last Updated 3 ನವೆಂಬರ್ 2021, 22:00 IST
ಅಕ್ಷರ ಗಾತ್ರ

ಗ್ಲೋಸ್ಗೋ: ‘ಜಾಗತಿಕ ತಾಪಮಾನವನ್ನು ತಡೆಗಟ್ಟಲು ತಕ್ಷಣವೇ ಕ್ರಮ ತೆಗೆದುಕೊಳ್ಳಿ, ಭೂಮಿಯನ್ನು ರಕ್ಷಿಸಿ. ನೀವು ಕಾರ್ಯತತ್ಪರರಾಗದಿದ್ದರೆ, ನಾವೇ ಈ ಹೋರಾಟವನ್ನು ಮುನ್ನಡೆಸುತ್ತೇವೆ’ ಎಂದು 15 ವರ್ಷದ ಭಾರತೀಯ ಬಾಲಕಿ, ವಿನಿಶಾ ಉಮಾಶಂಕರ್‌ ಜಾಗತಿಕ ನಾಯಕರಿಗೆ ಸವಾಲು ಹಾಕಿದ್ದಾಳೆ.

ತಮಿಳುನಾಡಿನ ವಿನಿಶಾ ಅನ್ವೇಷಿಸಿರುವ ಸೌರಶಕ್ತಿ ಆಧರಿತ ಇಸ್ತ್ರಿಪೆಟ್ಟಿಗೆಯ ಬಂಡಿಯು,ಪ್ರಿನ್ಸ್‌ ವಿಲಿಯಮ್ಸ್‌ ಅರ್ಥ್‌ಶಾಟ್ ಪ್ರಶಸ್ತಿ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಬ್ರಿಟನ್ ರಾಜಕುಮಾರ ವಿಲಿಯಮ್ಸ್ ಹೆಸರಿನಲ್ಲಿ ಬಿಬಿಸಿಯು ಈ ಪ್ರಶಸ್ತಿಯನ್ನು ನೀಡುತ್ತದೆ.

ರಸ್ತೆ ಬದಿಯ ಇಸ್ತ್ರಿಅಂಗಡಿಯವರು ಬಳಸುವ ಇದ್ದಿಲಿನ ಇಸ್ತ್ರಿಪೆಟ್ಟಿಗೆಗೆ ಬದಲಾಗಿ, ಕಡಿಮೆ ವೆಚ್ಚದಲ್ಲಿ ಸೌರಶಕ್ತಿ ಇಸ್ತ್ರಿಪೆಟ್ಟಿಗೆ ಬಂಡಿಯನ್ನು ವಿನಿಶಾ ವಿನ್ಯಾಸ ಮಾಡಿದ್ದಾರೆ. ಇದರಿಂದ ಇದ್ದಿಲಿನ ಇಸ್ತ್ರಿಪೆಟ್ಟಿಗೆಯಿಂದಾಗುವ ವಾಯು ಮಾಲಿನ್ಯವನ್ನು ಕಡಿಮೆ ಮಾಡಬಹುದು. ಅರ್ಥ್‌ಶಾಟ್‌ ಪ್ರೈಸ್‌ ಸ್ಪರ್ಧೆಯ 'ಶುದ್ಧಗಾಳಿ' ವರ್ಗದಲ್ಲಿ ಈ ಅನ್ವೇಷಣೆಯು ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಈ ಸ್ಪರ್ಧೆಯ ನಂತರ, ಶೃಂಗಸಭೆಯಲ್ಲಿ ಮಾತನಾಡಲು ದೊರೆತ ಅವಕಾಶದಲ್ಲಿ ವಿನಿತಾ ಜಾಗತಿಕ ಪ್ರಮುಖರಿಗೆ ಈ ಸವಾಲು ಹಾಕಿದ್ದಾಳೆ.

ಶುದ್ಧಗಾಳಿ, ಪರಿಸರ ಸಂರಕ್ಷಣೆ, ಸಾಗರ ಪುನರುಜ್ಜೀವನ, ತ್ಯಾಜ್ಯ ಹಾಗೂ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ನಡೆಯುವ ಆವಿಷ್ಕಾರಗಳನ್ನು ಪುರಸ್ಕರಿಸಲು, ರಾಯಲ್‌ ಫೌಂಡೇಶನ್‌ ಮುಖಾಂತರ ಕಳೆದ ವರ್ಷ ಬ್ರಿಟನ್‌ ರಾಜಕುಮಾರ ವಿಲಿಯಮ್ಸ್‌ ಅರ್ಥ್‌ಶಾಟ್ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಕಳೆದ ತಿಂಗಳು ಲಂಡನ್‌ನಲ್ಲಿ ಮೊದಲ ಅರ್ಥ್ ಶಾಟ್‌ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ.

'ನಮ್ಮ ಮುಂದಿರುವ ಬಹುದೊಡ್ಡ ಸವಾಲೇ, ನಮ್ಮ ಮುಂದೆ ಇರುವ ಅತ್ಯಂತ ದೊಡ್ಡ ಅವಕಾಶವೂ ಆಗಿದೆ. ನಾವು ಇತರರನ್ನು ದೂರುವುದನ್ನು ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ ನಮ್ಮನ್ನು ಆರೋಗ್ಯವಂತರನ್ನಾಗಿಸುವ ಮತ್ತು ಸಂಪತ್ಭರಿತರನ್ನಾಗಿಸುವ ಹಾದಿಯನ್ನು ನಾವು ಆಯ್ಕೆ ಮಾಡಿಕೊಳ್ಳುತ್ತೇವೆ. ಹೆಚ್ಚುತ್ತಿರುವ ಈ ಸವಾಲುಗಳು ಹೊಸ ತಲೆಮಾರನ್ನು ರೂಪಿಸುತ್ತದೆ. ಆ ಹೊಸ ತಲೆಮಾರು ಮುಂದಿನ ತಲೆಮಾರಿಗಾಗಿ ಉತ್ತಮ ಜಗತ್ತನ್ನು ನಿರ್ಮಿಸಲಿದೆ' ಎಂದು ವಿನಿಶಾ ಹೇಳಿದ್ದಾಳೆ.

'ಈ ಸವಾಲನ್ನು ಎದುರಿಸಲು ನಾವು ನಿಮಗಾಗಿ ಕಾಯುವುದಿಲ್ಲ. ‘ಭವಿಷ್ಯ’ವಾಗಿರುವ ನಾವೇ ನಾಯಕತ್ವ ವಹಿಸುತ್ತೇವೆ. ನೀವು ತಡಮಾಡಿದರೆ, ಭೂತಕಾಲದಲ್ಲೇ ಉಳಿದರೆ, ನಾವು ಮುನ್ನಡೆಯುತ್ತೇವೆ. ಆದರೆ, ದಯವಿಟ್ಟು ನಮ್ಮ ಆಹ್ವಾನವನ್ನು ಸ್ವೀಕರಿಸಿ ಕಾರ್ಯತತ್ಪರರಾಗಿ, ಅದಕ್ಕಾಗಿ ನೀವು ಎಂದಿಗೂ ವಿಷಾದಿಸುವ ಪ್ರಮೇಯ ಬರುವುದಿಲ್ಲ’ ಎಂದು ಭರವಸೆ ವ್ಯಕ್ತಪಡಿಸಿದ್ದಾಳೆ.

ತಾನು ಯಾವುದೇ ದೇಶವೊಂದಕ್ಕೆ ಸೇರಿದವಳು ಎನ್ನುವದರ ಬದಲಾಗಿ ಈ ಪೃಥ್ವಿಗೆ ಸೇರಿದವಳು ಎಂಬುದನ್ನು ಹೇಳುವ ಮೂಲಕ, ಭೂಮಿಯ ಉಳಿಸುವ ಕಾಳಜಿ ವ್ಯಕ್ತಪಡಿಸಿದ ವಿನಿಶಾ ಮಾತಿಗೆ, ಜಾಗತಿಕ ನಾಯಕರಿಂದ ಮೆಚ್ಚುಗೆಯ ಕರತಾಡನ ಕೇಳಿಬಂದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT