ಕೋವಿಡ್: ನಿರಂತರ ಮಾಹಿತಿ ಒದಗಿಸಲು ಚೀನಾಕ್ಕೆ ಡಬ್ಲ್ಯುಎಚ್‌ಒ ಮನವಿ

ಬೀಜಿಂಗ್: ದೇಶದಲ್ಲಿ ಕಾಣಿಸಿಕೊಂಡಿರುವ ಕೋವಿಡ್–19ನ ಅಲೆ ಕುರಿತು ನಿರಂತರವಾಗಿ ಮಾಹಿತಿಯನ್ನು ಬಿಡುಗಡೆ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಚೀನಾಕ್ಕೆ ಮನವಿ ಮಾಡಿದೆ.
ದೇಶದಲ್ಲಿ ಕೋವಿಡ್‌ನಿಂದಾಗಿ ಸಂಭವಿಸುತ್ತಿರುವ ಸಾವು–ನೋವುಗಳ ಬಗ್ಗೆ ಚೀನಾ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಈ ದೂರುಗಳ ಹಿನ್ನೆಲೆಯಲ್ಲಿ ಮಾಹಿತಿ ಹಂಚಿಕೊಂಡಿದ್ದ ಚೀನಾ, ಡಿಸೆಂಬರ್‌ನಿಂದ ಈ ವರೆಗೆ ಕೋವಿಡ್‌ನಿಂದಾಗಿ 60 ಸಾವಿರದಷ್ಟು ಜನರು ಮೃತಪಟ್ಟಿರುವುದಾಗಿ ಶನಿವಾರ ಹೇಳಿತ್ತು. ಇದರ ಬೆನ್ನಲ್ಲೇ, ಡಬ್ಲ್ಯುಎಚ್‌ಒ ಈ ಮನವಿ ಮಾಡಿದೆ.
‘ಚೀನಾ ನೀಡಿರುವ ಮಾಹಿತಿಯು ಆ ದೇಶದಲ್ಲಿರುವ ಕೋವಿಡ್ ಪಿಡುಗಿನ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ. ಈ ರೀತಿಯ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವ ಪ್ರಕ್ರಿಯೆ ಮುಂದುವರಿಯಬೇಕು’ ಎಂದೂ ಡಬ್ಲ್ಯುಎಚ್‌ಒ ತಿಳಿಸಿದೆ.
ಮಾಹಿತಿ ಹಂಚಿಕೊಳ್ಳುವ ಸಂಬಂಧ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೋಮ್ ಘೆಬ್ರೆಯೆಸಿಸ್ ಅವರು ಚೀನಾ ಆರೋಗ್ಯ ಸಚಿವರಾದ ಮಾ ಶವೊವೀ ಅವರೊಂದಿಗೆ ಮಾತನಾಡಿದ್ದಾರೆ ಎಂದು ಡಬ್ಲ್ಯುಎಚ್‌ಒ ಪ್ರಕಟಣೆ ತಿಳಿಸಿದೆ.
‘ಆಸ್ಪತ್ರೆಗಳಲ್ಲಿ ಸಂಭವಿಸಿದ ಸಾವುಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 8ರಿಂದ ಜನವರಿ 12ರ ನಡುವೆ, ಕೋವಿಡ್‌ನಿಂದಾಗಿ ಕಂಡುಬಂದ ಉಸಿರಾಟದ ತೊಂದರೆ ಕಾರಣದಿಂದ 5,503 ಜನರು ಮೃತಪಟ್ಟಿದ್ದಾರೆ. ಕೋವಿಡ್–19 ಜೊತೆಗೆ, ಕ್ಯಾನ್ಸರ್, ಹೃದ್ರೋಗ ಹಾಗೂ ಇತರ ಕಾಯಿಲೆಗಳಿಂದಾಗಿ ಸತ್ತವರ ಸಂಖ್ಯೆ 54,435’ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.