ಭಾನುವಾರ, ಜುಲೈ 25, 2021
24 °C

ಕೋವಿಡ್ ಉಗಮ: ಪ್ರಯೋಗಾಲಯ ಸೋರಿಕೆ ಸಿದ್ಧಾಂತವನ್ನು ತಳ್ಳಿಹಾಕಲಾಗದು– ಡಬ್ಲ್ಯುಎಚ್‌ಒ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬರ್ಲಿನ್: ಕೋವಿಡ್‌ ಸಾಂಕ್ರಾಮಿಕ ಮತ್ತು ಚೀನಾದ ವುಹಾನ್‌ ಪ್ರಯೋಗಾಲಯದ ಸೋರಿಕೆಯ ನಡುವಿನ ಸಂಭಾವ್ಯ ಸಂಬಂಧವನ್ನು ಈಗಲೇ ಸಾರಾಸಗಟಾಗಿ ತಳ್ಳಿಹಾಕಲಾಗದು ಎಂದು ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೊಸ್‌ ಗೆಬ್ರೇಷಿಯಸ್ ಹೇಳಿದ್ದಾರೆ.

ಈ ಮೂಲಕ ಪ್ರಯೋಗಾಲಯದಿಂದ ಕೊರೊನಾ ವೈರಸ್ ಸೋರಿಕೆಯಾಗಿರುವ ಸಾಧ್ಯತೆ ‘ ಅತ್ಯಂತ ಅಸಂಭವ’ ಎಂಬ ತನ್ನ ಮಾರ್ಚ್‌ ತಿಂಗಳ ವರದಿಯಿಂದ ಹಿಂದೆ ಸರಿದಿರುವುದು ಇದೀಗ ಸ್ಪಷ್ಟವಾಗಿದೆ.

ಕೊರೊನಾ ವೈರಸ್‌ನ ಉಗಮದ ಶೋಧ ಕಾರ್ಯ ಕೈಗೊಂಡಿರುವ ವಿಜ್ಞಾನಿಗಳ ಜತೆ ಚೀನಾ ಹೆಚ್ಚು ಪಾರದರ್ಶಕವಾಗಿರಬೇಕು ಎಂದು ಟೆಡ್ರೊಸ್‌ ಅವರು ಸೂಚಿಸಿದ್ದಾರೆ.

‘ಈ ವಿಚಾರದಲ್ಲಿ ವಾಸ್ತವವಾಗಿ ಚೀನಾ ಪಾರದರ್ಶಕ ಮತ್ತು ಮುಕ್ತವಾಗಿ ನಡೆದುಕೊಳ್ಳಬೇಕು. ತನಿಖೆಗೆ ಅಗತ್ಯ ಸಹಕಾರ ನೀಡಬೇಕು. ಪ್ರಮುಖವಾಗಿ ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಿಗೆ ಸಂಬಂಧಿಸಿದಂತೆ ನಾವು ಕೇಳಿದ ಮಾಹಿತಿ ಮತ್ತು ದತ್ತಾಂಶಗಳನ್ನು ಒದಗಿಸಬೇಕು‍‍‍‌‍’ ಎಂದು ಟೆಡ್ರೊಸ್‌ ಸುದ್ದಿಗಾರರಿಗೆ ತಿಳಿಸಿದರು.

‘ನಾನು ರೋಗ ನಿರೋಧಕ ತಜ್ಞ, ಅಲ್ಲದೆ ಲ್ಯಾಬ್ ತಂತ್ರಜ್ಞನಾಗಿ, ಲ್ಯಾಬ್‌ನಲ್ಲಿ ಕೆಲಸವನ್ನೂ ಮಾಡಿದ್ದೇನೆ. ಲ್ಯಾಬ್‌ನಲ್ಲಿ ಅಪಘಾತಗಳು ಸಂಭವಿಸುತ್ತವೆ. ಅದು ಸಾಮಾನ್ಯ ಕೂಡ. ಚೀನಾ ಸರಿಯಾದ ಮಾಹಿತಿಯನ್ನು ನೀಡಿದರೆ ಪ್ರಯೋಗಾಲಯದಿಂದ ನಿಜಕ್ಕೂ ವೈರಸ್‌ ಸೋರಿಕೆ ಆಗಿದೆಯೇ, ಇಲ್ಲವೇ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಾಗುತ್ತದೆ’ ಎಂದು ಟೆಡ್ರೊಸ್ ತಿಳಿಸಿದರು.

‘ಸಾಂಕ್ರಾಮಿಕ ರೋಗದ ಮೊದಲು ಮತ್ತು ಪ್ರಾರಂಭದಲ್ಲಿ ವುಹಾನ್‌ ಲ್ಯಾಬ್‌ನ ಪರಿಸ್ಥಿತಿ ಹೇಗಿತ್ತು ಎಂಬುದರ ಕುರಿತು ನಮಗೆ ಖಚಿತ ಮಾಹಿತಿ ಬೇಕು. ಇದಕ್ಕೆ ಚೀನಾದ ಸಹಕಾರ ನಿರ್ಣಾಯಕವಾಗುತ್ತದೆ’ ಎಂದು ಅವರು ಸೂಚಿಸಿದರು.

ಕೋವಿಡ್‌–19ರ ಮೂಲದ ಪತ್ತೆಗಾಗಿ ಈ ವರ್ಷದ ಆರಂಭದಲ್ಲಿ ಚೀನಾಕ್ಕೆ ಪ್ರಯಾಣಿಸಿದ್ದ ಅಂತರರಾಷ್ಟ್ರೀಯ ತಂಡಕ್ಕೆ ದತ್ತಾಂಶ ಸಂಗ್ರಹಿಸುವುದು ಸವಾಲಾಗಿತ್ತು. ಚೀನಾದ ವುಹಾನ್‌ ನಗರದಲ್ಲಿ ಕೋವಿಡ್‌ನ ಮೊದಲ ಮಾನವ ಪ್ರಕರಣ ದಾಖಲಾಗಿತ್ತು.

ಅತ್ಯಂತ ದುರ್ಬಲ ಸಂಘಟನೆ: ಕೊರೊನಾದ ಉಗಮದ ಬಗ್ಗೆ ಸತ್ಯಶೋಧನೆ ನಡೆಸಲು ವಿಫಲವಾಗಿರುವ ಡಬ್ಲ್ಯುಎಚ್‌ಒ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಇದೊಂದು ಅತ್ಯಂತ ದುರ್ಬಲ ಸಂಘಟನೆ ಎಂದು ಹಲವು ತಜ್ಞರು ಆರೋಪಿಸಿದ್ದಾರೆ.

ಕೊರೊನಾ ಉಗಮದ ಬಗ್ಗೆ ತನಿಖೆ ನಡೆಸುವ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದು ಚೀನಾಕ್ಕೆ ಟೆಡ್ರೊಸ್‌ ಮನವಿ ಮಾಡುವುದು ಬಿಟ್ಟರೆ ಬೇರೆ ಯಾವ ಅಧಿಕಾರವೂ ಈ ವಿಶ್ವ ಸಂಘಟನೆಗೆ ಇಲ್ಲವಾಗಿರುವುದು ವಿಪರ್ಯಾಸ ಎಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞ ಹಾಗೂ ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಪ್ರೊಫೆಸರ್‌ ಲಾರೆನ್ಸ್ ಗಸ್ಟಿನ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು