ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಕೋವಿಡ್‌–19 ಮಾದರಿ 44 ರಾಷ್ಟ್ರಗಳಲ್ಲಿ ಪತ್ತೆ: ಡಬ್ಲ್ಯುಎಚ್‌ಒ

Last Updated 12 ಮೇ 2021, 3:33 IST
ಅಕ್ಷರ ಗಾತ್ರ

ಜಿನೀವಾ: ಭಾರತದಲ್ಲಿ ತೀವ್ರವಾಗಿ ವ್ಯಾಪಿಸುತ್ತಿರುವ ಕೋವಿಡ್‌–19 ರೂಪಾಂತರಗೊಂಡ ಮಾದರಿಯು ಜಗತ್ತಿನಾದ್ಯಂತ ಹತ್ತಾರು ರಾಷ್ಟ್ರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಬುಧವಾರ ಹೇಳಿದೆ.

ಕೋವಿಡ್‌–19 'ಬಿ.1.617' ಮಾದರಿಯು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಅದೇ ಮಾದರಿಯ ಕೊರೊನಾ ವೈರಸ್‌ ಸೋಂಕು 44 ರಾಷ್ಟ್ರಗಳಲ್ಲಿರುವುದು 4,500 ಪರೀಕ್ಷೆ ಮಾದರಿಗಳ ಫಲಿತಾಂಶಗಳಿಂದ ತಿಳಿದು ಬಂದಿದೆ.

'ಹೆಚ್ಚುವರಿಯಾಗಿ ಐದು ರಾಷ್ಟ್ರಗಳಲ್ಲಿಯೂ ಈ ಮಾದರಿಯ ವೈರಸ್‌ ಪತ್ತೆಯಾಗಿರುವ ಬಗ್ಗೆ ಡಬ್ಲ್ಯುಎಚ್‌ಒಗೆ ವರದಿಗಳು ಬಂದಿವೆ' ಎಂದು ಕೋವಿಡ್‌ ಸಾಂಕ್ರಾಮಿಕದ ಕುರಿತ ವಾರದ ಪ್ರಕಟಣೆಯಲ್ಲಿ ತಿಳಿಸಿದೆ.

'ಬಿ.1.617' ಮಾದರಿಯನ್ನು ಕಳವಳಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಈಗಾಗಲೇ ಘೋಷಿಸಿದೆ. ಭಾರತ ಹೊರತು ಪಡಿಸಿದರೆ, ಬ್ರಿಟನ್‌ನಲ್ಲಿ ಇದೇ ಮಾದರಿಯ ವೈರಸ್‌ನಿಂದ ಅಧಿಕ ಕೋವಿಡ್‌ ಪ್ರಕರಣಗಳು ದಾಖಲಾಗಿವೆ.

ಬ್ರಿಟನ್‌, ಬ್ರೆಜಿಲ್‌ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್‌–19 ಮಾದರಿಗಳ ಸಾಲಿಗೆ ಭಾರತದ ಮಾದರಿಯು ಸೇರ್ಪಡೆಯಾಗಿದೆ. ಈ ಮಾದರಿಯು ಮೂಲ ಕೊರೊನಾ ವೈರಸ್‌ಗಿಂತ ಅಧಿಕ ಪರಿಣಾಮಕಾರಿಯಾಗಿದ್ದು, ವೇಗವಾಗಿ ಹರಡುವುದು, ಲಸಿಕೆ ಹಾಕಿಸಿಕೊಂಡವರಲ್ಲಿಯೂ ಸೋಂಕು ತಗುಲುವುದು ಹಾಗೂ ಹೆಚ್ಚಿನ ಸಾವಿಗೆ ಕಾರಣವಾಗುತ್ತಿರುವುದರಿಂದ ಅಪಾಯಕಾರಿ ಮಾದರಿ ಎಂದು ವಿಶ್ಲೇಷಿಸಲಾಗಿದೆ.

ಭಾರತದಲ್ಲಿ ನಿತ್ಯ ಕೋವಿಡ್‌–19 ದೃಢಪಟ್ಟ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿದ್ದು, 4,000 ಮಂದಿ ಸಾವಿಗೀಡಾಗುತ್ತಿದ್ದಾರೆ. ಅಮೆರಿಕ ನಂತರ ಅತಿ ಹೆಚ್ಚು ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಭಾರತವು ಅಮೆರಿಕ ನಂತರದ ಸ್ಥಾನದಲ್ಲಿದೆ. ಮುಂಬೈ, ನವದೆಹಲಿ ಹಾಗೂ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹಾಸಿಗೆ ಮತ್ತು ಆಮ್ಲಜನಕದ ಕೊರತೆ ಎದುರಾಗಿದೆ.

ಭಾರತದಲ್ಲಿ ಹೊಸ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ದಿಢೀರ್‌ ಹೆಚ್ಚಳವಾಗಲು 'ಬಿ.1.617' ಜೊತೆಗೆ ಇತರೆ ಕೋವಿಡ್‌–19 ಮಾದರಿಗಳು ವ್ಯಾಪಿಸಿರುವುದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಹಲವು ಧಾರ್ಮಿಕ ಹಾಗೂ ರಾಜಕೀಯ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದು ಹಾಗೂ ಸಾಮಾಜಿಕವಾಗಿ ಅನುಸರಿಸಬೇಕಾದ ಕ್ರಮಗಳನ್ನು ಕಡೆಗಣಿಸಿರುವುದನ್ನೂ ಪ್ರಸ್ತಾಪಿಸಿದೆ. ಭಾರತದಲ್ಲಿ ಒಟ್ಟು ಕೋವಿಡ್‌ ಪಾಸಿಟಿವ್ ಪ್ರಕರಣಗಳ ಪೈಕಿ ಶೇ 0.1ರಷ್ಟು ಪ್ರಕರಣಗಳಲ್ಲಿ ಮಾತ್ರ ವೈರಸ್‌ನ ವಂಶವಾಹಿ ಪರಿಶೀಲನೆಗೆ ಒಳಪಡಿಸಿದ ಮಾಹಿತಿಯನ್ನು ಜಿಐಎಸ್‌ಎಐಡಿ ದತ್ತಾಂಶಕೋಶಕ್ಕೆ ಅಪ್‌ಲೋಡ್‌ ಮಾಡಲಾಗಿದೆ ಡಬ್ಲ್ಯುಎಚ್‌ಒ ಒತ್ತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT