ಶನಿವಾರ, ಡಿಸೆಂಬರ್ 3, 2022
21 °C
ಈಜಿಪ್ಟ್‌ನಲ್ಲಿ ಹವಾಮಾನ ಬದಲಾವಣೆ ಕುರಿತ 27ನೇ ಶೃಂಗಸಭೆಯಲ್ಲಿ ಮಹತ್ವದ ಚರ್ಚೆ

ಹವಾಮಾನ ಬದಲಾವಣೆ: ಬಡರಾಷ್ಟ್ರಗಳಿಗೆ ಸಿರಿವಂತ ದೇಶಗಳಿಂದ ಪರಿಹಾರ?

ರಾಯಿಟರ್ಸ್‌/ಎಪಿ Updated:

ಅಕ್ಷರ ಗಾತ್ರ : | |

Prajavani

ಶರ್ಮ್‌ ಎಲ್‌ ಶೇಖ್‌, ಈಜಿಪ್ಟ್‌: ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ 27ನೇ ಶೃಂಗಸಭೆಯಲ್ಲಿ (ಸಿಒಪಿ27) ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಹೆಚ್ಚು ದುರ್ಬಲವಾಗಿರುವ ಬಡರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳು ಪರಿಹಾರ ನೀಡುವ ಸಂಬಂಧ ಚರ್ಚಿಸಲು ಎಲ್ಲ ಪ್ರತಿನಿಧಿಗಳು ಸಮ್ಮತಿಸಿದ್ದಾರೆ.

ಇಲ್ಲಿನ ಕಡಲ ತೀರದ ರೆಸಾರ್ಟ್‌ನಲ್ಲಿ ಭಾನುವಾರ ಆರಂಭವಾದ ಶೃಂಗಸಭೆ ಇದೇ 18ರವರೆಗೆ ನಡೆಯಲಿದೆ. ಉಕ್ರೇನ್‌ ಯುದ್ಧ, ಹಣದುಬ್ಬರ ಏರಿಕೆ, ಆಹಾರ ಕೊರತೆ ಮತ್ತು ಇಂಧನ ಬಿಕ್ಕಟ್ಟು ಸೇರಿ ಹಲವು ಜಾಗತಿಕ ಸವಾಲುಗಳ ನಡುವೆ ಹವಾಮಾನ ಬದಲಾವಣೆ ನಿಭಾಯಿಸುವ ಕುರಿತು ಮಾತುಕತೆಗಾಗಿ ವಿಶ್ವದ ರಾಜತಾಂತ್ರಿಕರು ಒಟ್ಟಿಗೆ ಸೇರಿದ್ದಾರೆ.

ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್‌ ಕಳೆದ ವಾರವಷ್ಟೇ ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ನಿಭಾಯಿಸಲು ದಾರಿ ಕಂಡುಕೊಳ್ಳದಿದ್ದರೆ ಮತ್ತು ಮಾಲಿನ್ಯ ಹೊರಸೂಸುವಿಕೆ ನಿಯಂತ್ರಿಸಲು ಬಡರಾಷ್ಟ್ರಗಳಿಗೆ ಸಹಾಯ ಮಾಡಲು ಪರಿಹಾರ ಮಾರ್ಗ ಕಂಡುಕೊಳ್ಳದ ಹೊರತು ಈ ಗ್ರಹವು ಸರಿಪಡಿಸಲಾಗದಷ್ಟು ಹವಾಮಾನ ಅವ್ಯವಸ್ಥೆ ಕಡೆಗೆ ಸಾಗುತ್ತದೆ ಎಂದು ಎಚ್ಚರಿಸಿದ್ದರು.

ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದಾದ ನಷ್ಟ, ಇದನ್ನು ಸರಿಪಡಿಸುವತ್ತ ಗಮನ ಹರಿಸುವುದು, ಇದಕ್ಕೆ ಬೇಕಾದ ಹಣಕಾಸು ನೆರವು ವ್ಯವಸ್ಥೆ ಮಾಡಿಕೊಳ್ಳುವ ಸಂಬಂಧದ ಪ್ರಸ್ತಾವನೆ ಕುರಿತು ಚರ್ಚಿಸುವ ಪ್ರಮುಖ ಕಾರ್ಯಸೂಚಿಗೆ ರಾಜತಾಂತ್ರಿಕರು ಅನುಮೋದನೆ ನೀಡಿದರು. 

ಶ್ರೀಮಂತ ರಾಷ್ಟ್ರಗಳ ಮಾಲಿನ್ಯ ಹೊರಸೂಸುವಿಕೆಯಿಂದ ಉಂಟಾಗುವ ಹವಾಮಾನ ಬದಲಾವಣೆಯಿಂದಾಗುವ ನಷ್ಟಗಳಿಗೆ ಪರಿಹಾರದ ಜತೆಗೆ ಬಡ ದೇಶಗಳ ಒಗ್ಗಟ್ಟನ್ನು ತೋರಿಸಲು ಜರ್ಮನಿ ಸಿದ್ಧ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ತಿಳಿಸಿದರು.

ಸಿಒಪಿ27ರಲ್ಲಿ ಭಾಗವಹಿಸಲು 40 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿದ್ದಾರೆ. 120ಕ್ಕೂ ಹೆಚ್ಚು ವಿಶ್ವ ನಾಯಕರೂ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಹಲವರು ನವೆಂಬರ್ 7 ಮತ್ತು 8ರಂದು ನಡೆಯುವ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ವಾರದ ನಂತರ ಬರುವ ನಿರೀಕ್ಷೆ ಇದೆ ಎಂದು ಈಜಿಪ್ಟ್ ಹೇಳಿದೆ.

ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಸೇರಿ ಅನೇಕ ಉನ್ನತ ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಯೋಜಿಸಿಲ್ಲ. ಈ ಎರಡು ದೇಶಗಳ ಪಾಲ್ಗೊಳ್ಳುವಿಕೆ ಇಲ್ಲದೇ ಮಾಲಿನ್ಯ ಹೊರಸೂಸುವಿಕೆ ತಗ್ಗಿಸಲು ಈಜಿಪ್ಟ್‌ನಲ್ಲಿ ನಡೆಯಲಿರುವ ಮಾತುಕತೆಗಳಿಂದ ಯಾವುದೇ ದೊಡ್ಡ ಒಪ್ಪಂದಗಳು ಏರ್ಪಡುವ ಕುರಿತು ಅನುಮಾನ ವ್ಯಕ್ತವಾಗಿದೆ. 

ಶೃಂಗಸಭೆಯಲ್ಲಿ ಪ್ರತಿಭಟನೆ ಹತ್ತಿಕ್ಕಿದ ಈಜಿಪ್ಟ್‌
ಸಿಒಪಿ27ರ ವೇಳೆ ಪ್ರತಿಭಟನೆ ಹತ್ತಿಕ್ಕಲು ಹಲವು ಸಂಘಟನೆಗಳ ಪ್ರಮುಖರನ್ನು ಈಜಿಪ್ಟ್‌ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದೆ. ‌‌ಪ್ರತಿಭಟನೆ ನಿರ್ಬಂಧಿಸಿ, ಕಣ್ಗಾವಲು ಹೆಚ್ಚಿಸಿರುವುದಕ್ಕೆ ಹಲವು ರಾಷ್ಟ್ರಗಳ ಮಾನವ ಹಕ್ಕುಗಳ ಸಂಘಟನೆಗಳು ಈಜಿಪ್ಟ್ ವಿರುದ್ಧ ಟೀಕಾ ಪ್ರಹಾರ ನಡೆಸಿವೆ.

ಅಮೆರಿಕದ ಹ್ಯೂಮನ್‌ ರೈಟ್ಸ್‌ ವಾಚ್‌ ಸಂಘಟನೆ ಬಂಧಿತ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ನಾಗರಿಕ ಸಮಾಜದ ಗುಂಪುಗಳ ಪ್ರತಿಭಟನೆ ಹಕ್ಕು ಕಸಿದುಕೊಳ್ಳಬಾರದೆಂದು ಆಗ್ರಹಿಸಿದೆ. 

ಪ್ರಜಾಪ್ರಭುತ್ವ ಪರ ಹೋರಾಟಗಾರ, ಬಂಧಿಸಲ್ಪಟ್ಟಿರುವ ಅಲಾ ಅಬ್ದೆಲ್-ಫತ್ತಾ  ಸಿಒಪಿ 27ರ ಮೊದಲ ದಿನವೇ ಉಪವಾಸ ಸತ್ಯಾಗ್ರಹ ಆರಂಭಿಸಿ, ಹೋರಾಟಕ್ಕೆ ಕಾವು ನೀಡಿದ್ದಾರೆ.

ಅಬ್ದೆಲ್-ಫತ್ತಾ ಅವರ ಚಿಕ್ಕಮ್ಮ, ಪ್ರಶಸ್ತಿ ವಿಜೇತ ಕಾದಂಬರಿಕಾರ್ತಿ ಅಹ್ದಫ್ ಸೌಯೆಫ್, ಸತ್ಯಾಗ್ರಹದ ಮೊರೆ ಹೋಗಿದ್ದಾರೆ. ನೀರು ಸಹ ಇಲ್ಲದೇ ನನ್ನ ಮಗ ಸತ್ತುಹೋಗಬಹುದೆಂದು ಕಳವಳ ವ್ಯಕ್ತಪಡಿಸಿದರು. ತಕ್ಷಣವೇ ಅಬ್ದೆಲ್‌ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು