ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ಗೆ ಚೀನಾ ಪ್ರಯೋಗಾಲಯವೇ ಮೂಲ

ಗುಪ್ತಚರ ವರದಿ ಆಧರಿಸಿ ಅಮೆರಿಕದ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ
Last Updated 25 ಮೇ 2021, 3:38 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೋವಿಡ್‌–19 ಸಾಂಕ್ರಾಮಿಕದ ಕುರಿತು ಚೀನಾ ಅಧಿಕೃತವಾಗಿ ಬಹಿರಂಗಪಡಿಸುವ ಕೆಲ ತಿಂಗಳ ಮೊದಲೇ ಚೀನಾದ ವುಹಾನ್‌ ವೈರಾಣು ಸಂಸ್ಥೆಯ ಮೂವರು ಸಂಶೋಧಕರು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಭಾನುವಾರ ಅಮೆರಿಕದ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ. ಬಹಿರಂಗವಾಗದ ಅಮೆರಿಕದ ಗುಪ್ತಚರ ವರದಿಯನ್ನು ಆಧರಿಸಿ ಅದು ವರದಿ ಮಾಡಿದೆ.

ಚೀನಾದಲ್ಲಿ ಎಷ್ಟು ಸಂಶೋಧಕರು ಕೋವಿಡ್‌ ಸೋಂಕಿಗೆ ಒಳಗಾಗಿದ್ದರು ಎಂಬ ಕುರಿತ ಹೊಸ ವಿವರಗಳನ್ನು ಈ ವರದಿ ಒದಗಿಸುತ್ತದೆ. ಅಲ್ಲದೇ, ಎಷ್ಟು ಸಂಶೋಧಕರು ಸಂಶೋಧನೆ ವೇಳೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಅವರು ಆಸ್ಪತ್ರೆಗೆಳಿಗೆ ದಾಖಲಾಗಿದ್ದ ಅವಧಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿದಾಗ ಕೊರೊನಾ ವೈರಸ್‌ ಪ್ರಯೋಗಾಲಯದಿಂದಲೇ ಹಬ್ಬಿರುವ ಸಾಧ್ಯತೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಕ್ಕೆ ಮತ್ತಷ್ಟು ಬಲಬಂದಿದೆ.

ಕೊರೊನಾ ವೈರಸ್‌ ಮೂಲದ ಕುರಿತು ಮುಂದಿನ ಹಂತದ ತನಿಖೆ ನಡೆಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಶೀಘ್ರ ಸಭೆ ನಡೆಸಲಿದೆ.

ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿಯ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರರು ನಿರಾಕರಿಸಿದ್ದಾರೆ. ಆದರೆ, ‘ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯ ಆರಂಭದ ದಿನಗಳು ಮತ್ತು ಚೀನಾ ಮೂಲದ ಕುರಿತು ಗಂಭೀರ ಪ್ರಶ್ನೆಗಳನ್ನು ಬೈಡನ್‌ ಆಡಳಿತ ಕೇಳುತ್ತದೆ’ ಎಂದು ಅವರು ಹೇಳಿದ್ದಾರೆ.

‘ಕೋವಿಡ್‌–19 ಸಾಂಕ್ರಾಮಿಕದ ಮೂಲವನ್ನು ಪತ್ತೆ ಮಾಡುವ ಕಾರ್ಯಕೈಗೊಂಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಮತ್ತು ಇತರ ಸದಸ್ಯ ದೇಶಗಳ ತಜ್ಞರ ತಂಡಗಳಿಗೆ ಅಮೆರಿಕ ಬೆಂಬಲ ನೀಡುತ್ತದೆ. ಈ ಬೆಂಬಲ ರಾಜಕೀಯದ ಹೊರತಾಗಿದೆ’ ಎಂದು ಅವರು ಹೇಳಿದ್ದಾರೆ.

ಕೋವಿಡ್‌–19 ಮೂಲದ ಬಗ್ಗೆ ಡಬ್ಲುಎಚ್‌ಒ ನೇತೃತ್ವದಲ್ಲಿ ನಡೆಸಿದ್ದ ಅಧ್ಯಯನದ ಕುರಿತು ಅಮೆರಿಕ, ನಾರ್ವೆ, ಕೆನಡಾ, ಬ್ರಿಟನ್‌ ಆತಂಕ ವ್ಯಕ್ತಪಡಿಸಿವೆ. ಅಲ್ಲದೇ, ಆರಂಭದಲ್ಲಿ ಕೋವಿಡ್‌ ಹರಡಿದ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕಲು ಸೂಚಿಸಿದ್ದವು. ಈ ನಿಟ್ಟಿನಲ್ಲಿ ಚೀನಾ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅಮೆರಿಕ ವಿಶ್ವಾಸ ವ್ಯಕ್ತಪಡಿಸಿತ್ತು.

ಪ್ರಯೋಗಾಲಯದಿಂದ ಸೋಂಕು ಹಬ್ಬಿಲ್ಲ

ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿ ಕುರಿತು ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯ, ಪ್ರಯೋಗಾಲಯದಿಂದ ಕೊರೊನಾ ವೈರಸ್‌ ಸೋಂಕು ಹರಡಿರುವ ಸಾಧ್ಯತೆ ಇಲ್ಲ ಎಂದು ಈಗಾಗಲೇ ಡಬ್ಲ್ಯುಎಚ್‌ಒ ವರದಿ ನೀಡಿದ ಬಳಿಕವೂ ಅಮೆರಿಕದ ಅನುಮಾನ ಪರಿಹಾರವಾಗಿಲ್ಲ. ಕೊರೊನಾ ವೈರಸ್‌ ಪ್ರಯೋಗಾಲಯದಿಂದ ಸೋರಿಕೆ ಆಗಿದೆ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ. ಅಮೆರಿಕ ಕೊರೊನಾ ಮೂಲವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿಲ್ಲ ಬದಲಾಗಿ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.

ಹಿಂದಿನ ಟ್ರಂಪ್ ಆಡಳಿತ ಕೂಡಾ ಇದು ವುಹಾನ್‌ ವೈರಸ್‌ ಎಂದು ಕರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT