ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿನ್ ಜತೆ ಮಾತುಕತೆಯಿಂದ ಮಾತ್ರ ಪರಿಹಾರ: ಝೆಲೆನ್‌ಸ್ಕಿ

‘ಪುಟಿನ್ ಜತೆ ನೇರ ಮಾತುಕತೆಯಿಂದ ಮಾತ್ರ ಯುದ್ಧ ಪರಿಹಾರ ಸಾಧ್ಯತೆ’
Last Updated 28 ಮಾರ್ಚ್ 2022, 18:09 IST
ಅಕ್ಷರ ಗಾತ್ರ

ಎಲ್ವಿವ್: ‘ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನೇರ ಮುಖಾಮುಖಿ ಭೇಟಿಯು ಮಾತ್ರ ಯುದ್ಧವನ್ನು ಕೊನೆಗೊಳಿಸಬಹುದು’ ಎಂದು ಉಕ್ರೇನ್ ಅಧ್ಯಕ್ಷ ವೊಲೊ ಡೊಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

ಎರಡು ಕಡೆಯಿಂದಲೂ ಮತ್ತೊಂದು ಸುತ್ತಿನ ಮಾತುಕತೆಯ ನಿರೀಕ್ಷೆಯಲ್ಲಿರುವ ಝೆಲೆನ್‌ಸ್ಕಿ ಅವರು, ‘ಉಕ್ರೇನ್ ತನ್ನ ತಟಸ್ಥ ನಿಲುವನ್ನು ಘೋಷಿಸಲು ಮತ್ತು ತಡಮಾಡದೇ ಶಾಂತಿ ಪರಿಪಾಲಿಸಲು ರಷ್ಯಾಕ್ಕೆ ಖಾತರಿ ನೀಡಲು ಸಿದ್ಧ’ ಎಂದಿದ್ದಾರೆ.

ರಷ್ಯಾದ ಸ್ವತಂತ್ರ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅವರು, ‘ಉಕ್ರೇನ್, ರಷ್ಯಾದ ವಿರುದ್ಧ ತನ್ನ ಸಾರ್ವಭೌಮತ್ವವನ್ನು ಎತ್ತಿಹಿಡಿಯುವು ದನ್ನು ಆದ್ಯತೆಯಾಗಿ ಪರಿಗಣಿಸಿದೆ’ ಎಂದು ಪ್ರತಿಪಾದಿಸಿದ್ದಾರೆ.

ತನ್ನ ವಿರುದ್ಧದ ನ್ಯಾಟೊ ಮೈತ್ರಿ ಒಕ್ಕೂಟದಿಂದ ಉಕ್ರೇನ್ ಅಂತರ ಕಾಯ್ದುಕೊಳ್ಳಬೇಕೆಂಬುದು ರಷ್ಯಾದ ದೀರ್ಘಕಾಲದ ಬೇಡಿಕೆಯಾಗಿದೆ. ತಟಸ್ಥತೆಯ ಪ್ರಶ್ನೆ ಬಂದಾಗ ಉಕ್ರೇನ್ ಅನ್ನು ನ್ಯಾಟೊ ಮತ್ತು ಇತರ ಮಿಲಿಟರಿ ಮೈತ್ರಿಕೂಟಗಳಿಂದ ಹೊರಗಿಡುವ ವಿಷಯದ ಕುರಿತು ಉಕ್ರೇನ್ ಜನರಿಂದ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದೂ ಝೆಲೆನ್‌ಸ್ಕಿ ಹೇಳಿದ್ದಾರೆ. ‘ನಾವು ರಷ್ಯಾದ ಅಧ್ಯಕ್ಷರೊಂದಿಗೆ ಒಪ್ಪಂದಕ್ಕೆ ಬರಬೇಕಾಗಿದೆ. ಅದಕ್ಕಾಗಿ ಅವರ ಮತ್ತು ನನ್ನ ಮುಖಾಮುಖಿ ಭೇಟಿಯಾಗಬೇಕು’ ಎಂದೂ ಹೇಳಿದ್ದಾರೆ.

ಮಾಧ್ಯಮಗಳಿಗೆ ರಷ್ಯಾ ಎಚ್ಚರಿಕೆ

ಮಾಸ್ಕೊ:ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್‌ಸ್ಕಿ ಅವರ ಜತೆ ನಡೆಸಿದ ಸಂದರ್ಶನವನ್ನು ಪ್ರಕಟಿಸದಂತೆ ರಷ್ಯಾ ಮಾಧ್ಯಮಗಳಿಗೆ ಅಲ್ಲಿನ ಸರ್ಕಾರ ಎಚ್ಚರಿಕೆ ನೀಡಿದೆ. ಉಕ್ರೇನ್‌ ನಾಯಕನ ಸಂದರ್ಶನ ನಡೆಸಿದ ಮಾಧ್ಯಮ ಸಂಸ್ಥೆಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ರಷ್ಯಾದ ಸಂವಹನ ಕಾವಲುಪಡೆ ತಿಳಿಸಿದೆ. ರಷ್ಯಾದ ಹಲವು ಸಂಸ್ಥೆಗಳು ಝೆಲೆನ್‌ಸ್ಕಿ ಸಂದರ್ಶನ ನಡೆಸಿವೆ. ಈ ಸಂದರ್ಶನಗಳು ಪ್ರಕಟವಾಗದಂತೆ ತಡೆಯುವ ಅಗತ್ಯವಿದೆ ಎಂದು ಕಾವಲುಪಡೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಟರ್ಕಿಯಲ್ಲಿ ಮಾತುಕತೆ ಇಂದು ಆರಂಭ: ಕ್ರೆಮ್ಲಿನ್

ಮಾಸ್ಕೊ (ರಾಯಿಟರ್ಸ್): ‘ರಷ್ಯಾ ಹಾಗೂ ಉಕ್ರೇನ್‌ ನಡುವೆ ಶಾಂತಿ ಮಾತುಕತೆಗೆ ಟರ್ಕಿಯಲ್ಲಿ ವೇದಿಕೆ ಸಿದ್ಧವಾಗಿದ್ದು, ಮಾತುಕತೆ ಮಂಗಳವಾರ ಆರಂಭವಾಗಬಹುದು’ ಎಂದು ರಷ್ಯಾ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ‘ಕ್ರೆಮ್ಲಿನ್’ನ ವಕ್ತಾರ ಡಿಮಿಟ್ರಿ ಪೆಸ್ಕೊವ್, ‘ಸಂಧಾನಕಾರರು ಸೋಮವಾರವಷ್ಟೇ ಟರ್ಕಿಗೆ ಬಂದಿಳಿಯುತ್ತಿರುವ ಕಾರಣ, ಅಂದು ಮಾತುಕತೆ ಆರಂಭವಾಗುವ ಸಾಧ್ಯತೆ ಕಡಿಮೆ’ ಎಂದಿದ್ದಾರೆ.

‘ಮಾತುಕತೆ ನಡೆಯುತ್ತಿರುವ ಬಗ್ಗೆಯಾಗಲಿ, ಈ ನಿಟ್ಟಿ ನಲ್ಲಿ ಸಾಧಿಸಲಾಗಿರುವ ಪ್ರಗತಿ ಕುರಿತಾಗಲಿ ನಾವು ಮಾತನಾಡುವುದಿಲ್ಲ. ಉಭಯ ದೇಶಗಳ ಪ್ರತಿನಿಧಿಗಳು ಮುಖಾಮುಖಿಯಾಗುತ್ತಿರುವುದೇ ಮಹತ್ವದ ವಿಷಯ’ ಎಂದು ಡಿಮಿಟ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶಾಂತಿ–ಸಂಧಾನ ಕುರಿತ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂಬ ನಮ್ಮ ನೀತಿಗೆ ಬದ್ಧವಾಗಿದ್ದೇವೆ. ಈ ನೀತಿಗೆ ವಿರುದ್ಧ ವಾಗಿ ನಡೆದಿದ್ದೇ ಆದಲ್ಲಿ, ನಾವು ಸಂಧಾನ ಪ್ರಕ್ರಿಯೆಗೆ ಧಕ್ಕೆ ತಂದಂತೆ ಆಗಲಿದೆ’ ಎಂದೂ ಅವರು ಹೇಳಿದರು.

‘ಪುಟಿನ್–ಝೆಲೆನ್‌ಸ್ಕಿ ಭೇಟಿ ಸಾಧ್ಯತೆ ಇಲ್ಲ’: ‘ಅಧ್ಯಕ್ಷ ಪುಟಿನ್ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರನ್ನು ಮುಖಾಮುಖಿಯಾಗಿಸುವ ಯಾವುದೇ ಚಿಂತನೆ ಇಲ್ಲ’ ಎಂದು ಪೆಸ್ಕೊವ್‌ ಹೇಳಿದರು.

ಈ ಕುರಿತು ಸರ್ಬಿಯಾ ಮಾಧ್ಯಮಗಳೊಂದಿಗೆ ಮಾತನಾಡಿದ ರಷ್ಯಾ ವಿದೇಶಾಂಗ ಸಚಿವ ಸರ್ಗೆ
ಲಾವ್ರೋವ್, ‘ಪ್ರಸ್ತುತ ಸನ್ನಿವೇಶದಲ್ಲಿ ಪುಟಿನ್‌ ಹಾಗೂ ಝೆಲೆನ್‌ಸ್ಕಿ ನಡುವೆ ಸಭೆ ಆಯೋಜಿಸುವುದು ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ಉಭಯ ದೇಶಗಳ ನಡುವಿನ ಶಾಂತಿ ಮಾತುಕತೆಯಲ್ಲಿ ಏನಾದರೂ ಪ್ರಗತಿ ಕಂಡುಬಂದಾಗ ಮಾತ್ರ ಅವರು ಭೇಟಿಯಾಗಬೇಕು’ ಎಂದರು.

ಪುಟಿನ್ ಕಟುಕ ಎಂದಿದ್ದ ಬೈಡನ್ ಹೇಳಿಕೆ ಆತಂಕಕಾರಿ: ರಷ್ಯಾ

ಮಾಸ್ಕೊ: ಉಕ್ರೇನ್ ಮೇಲಿನ ರಷ್ಯಾ ಕಾರ್ಯಾಚರಣೆ 32ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಡೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟೀಕಿಸಿದ್ದಾರೆ. ಬೈಡನ್ ಹೇಳಿಕೆಗೆ ಸೋಮವಾರ ರಷ್ಯಾ ಕಳವಳ ವ್ಯಕ್ತಪಡಿಸಿದೆ.

‘ಇದು ನಿಸ್ಸಂಶಯವಾಗಿ ಆತಂಕಕಾರಿ ಹೇಳಿಕೆ’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.‌

ಬೈಡನ್ ಹೇಳಿಕೆಗಳನ್ನು ಮಾಸ್ಕೊ ‘ಸೂಕ್ಷ್ಮವಾಗಿ ಗಮನಿಸುವುದನ್ನು ಮುಂದುವರಿಸುತ್ತದೆ’ ಎಂದಿದ್ದಾರೆ.

33ನೇ ದಿನದ ಬೆಳವಣಿಗೆಗಳು

lರಷ್ಯಾದ ದಾಳಿಗೆ ತುತ್ತಾಗಿದ್ದರಿಂತ ಸಂಕಷ್ಟಕ್ಕೀಡಾದ ಉಕ್ರೇನ್‌ ನಾಗರಿಕರಿಗೆ ನೆರವಾಗುವ ನಿಟ್ಟಿನಲ್ಲಿ ಆರ್ಥಿಕ ನೆರವು ನೀಡಬೇಕು ಎಂಬ ಸಂದೇಶವನ್ನು ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹಾಲಿವುಡ್ ಚಿತ್ರೋದ್ಯಮ ಹಂಚಿಕೊಂಡಿದೆ.

lಗ್ರೀಸ್ ಸಂಸತ್ತನ್ನು ಉದ್ದೇಶಿಸಿ ಏಪ್ರಿಲ್ 7ರಂದು ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್‌ಸ್ಕಿ ಅವರು ಭಾಷಣ ಮಾಡಲಿದ್ದಾರೆ ಎಂದು ಗ್ರೀಸ್ ಸಂಸತ್ತಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

lರಷ್ಯಾಕ್ಕೆ ಶ್ರೀಲಂಕಾ ಸರ್ಕಾರ ವಿಮಾನ ಸೇವೆಯನ್ನು ಅಮಾನತುಗೊಳಿಸಿದೆ. ಕಾರ್ಯಾಚರಣೆ ನಿರ್ಬಂಧಗಳ ಅನುಗುಣವಾಗಿ ರಷ್ಯಾ ರಾಜಧಾನಿ ಮಾಸ್ಕೊಗೆ ಸೇವೆ ನೀಡುತ್ತಿದ್ದ ಶ್ರೀಲಂಕನ್ ಏರ್‌ಲೈನ್ಸ್ ಅನ್ನು ಅಮಾನತಿನಲ್ಲಿಡಲಾಗಿದೆ ಎಂದು ಲಂಕಾ ಹೇಳಿದೆ.

lಉಕ್ರೇನ್ ಮೇಲಿನ ರಷ್ಯಾದ ಸೇನಾ ಕಾರ್ಯಾಚರಣೆ ನಿಲ್ಲುವವರೆಗೆ ದಿನ ಪತ್ರಿಕೆ ಮುದ್ರಣವನ್ನು ಸ್ಥಗಿತಗೊಳಿಸುತ್ತಿದ್ದೇವೆ. ಜೊತೆಗೆ ನಮ್ಮ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳು ಸಹ ಕಾರ್ಯ ನಿರ್ವಹಿಸುವುದಿಲ್ಲ ಎಂದು ರಷ್ಯಾದ ಸ್ವಾವಲಂಬಿ ಪತ್ರಿಕೆ ಖ್ಯಾತಿಯ ‘ನೊವಾಯ ಗೆಜೆಟಾ’ ತಿಳಿಸಿದೆ. ಇದೊಂದು ಕಠಿಣ ನಿರ್ಧಾರ. ಆದರೆ ಇದು ಅನಿವಾರ್ಯ ಎಂದು ಪತ್ರಿಕೆಯ ಪ್ರಧಾನ ಸಂಪಾದಕ ಡಿಮಿಟ್ರಿ ಮುರಾಟೊವ್ ಹೇಳಿದ್ದಾರೆ.

lಉಕ್ರೇನ್ ಮೇಲಿನ ರಷ್ಯಾದ ದಾಳಿಯಿಂದಾಗಿ ಸುಮಾರು 40 ಲಕ್ಷ ಮಂದಿ ಇತರೆ ದೇಶಗಳಿಗೆ ವಲಸೆ ಹೋಗಿದ್ದಾರೆ. ಯುದ್ಧ ಆರಂಭವಾದ ಫೆ.24ರ ಬಳಿಕ ಮೊದಲೆರಡು ವಾರಗಳಲ್ಲಿ ರಷ್ಯಾದ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು 4.4 ಕೋಟಿ ಜನರ ಪೈಕಿ 25 ಲಕ್ಷ ಮಂದಿ ಉಕ್ರೇನ್ ತೊರೆದು ಅನ್ಯ ದೇಶಗಳಿಗೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT