ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಡಿಗೆ’ಯಲ್ಲಿ ಕಂಡ ಗ್ರಾಮಭಾರತ

ಗ್ರಾಮೀಣ ಪ್ರದೇಶಗಳ ವಾಸ್ತವ ಚಿತ್ರಣ ಅರಿತ ಯುವಕರು
Last Updated 1 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಮಾಗಿಯ ಸೂರ್ಯ ನೆತ್ತಿಗೆ ಬರುವ ಸಮಯವಾಗಿತ್ತು. ಯುವಕರೇ ಹೆಚ್ಚಿದ್ದ ತಂಡವೊಂದು ಉತ್ಸಾಹದಿಂದ ಕಾಯುತ್ತಿತ್ತು. ‘ಹಸಿರು ನಿಶಾನೆ’ ಬೀಳುತ್ತಿದ್ದಂತೆ, ‘ನಡಿಗೆ’ ಆರಂಭವಾಯಿತು. ಹೆಜ್ಜೆ ಹಾಕುತ್ತಿದ್ದ ತಂಡದೊಂದಿಗೆ ನಾನು ಸೇರಿಕೊಂಡೆ!

ಅದು ಪಾದಯಾತ್ರೆಯಲ್ಲ. ಟ್ರೆಕ್ಕಿಂಗೂ ಅಲ್ಲ. ವಿಹಾರಕ್ಕೆ ಹೊರಟವರಂತೂ ಅಲ್ಲವೇ ಅಲ್ಲ. ‘ಹೆಜ್ಜೆ ಹಾಕುತ್ತಲೇ ಗ್ರಾಮಭಾರತ’ ಅರಿಯುವ ಪ್ರಯತ್ನವದು. ಅಷ್ಟೇ ಅಲ್ಲ, ‘ನಮ್ಮನ್ನು ನಾವು ಅರಿತುಕೊಳ್ಳುವುದು’ ನಡಿಗೆಯ ಉದ್ದೇಶ. ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್‌ ಮೂವ್‌ಮೆಂಟ್‌ (ಎಸ್‌ವಿವೈಎಂ) ಹಾಗೂ ‘ಗ್ರಾಮ್‌’ ಸಂಸ್ಥೆ ಜಂಟಿಯಾಗಿ ಈ ನಡಿಗೆಯನ್ನು ಆಯೋಜಿಸಿದ್ದವು.

ಹಳ್ಳಿಗಳ ಮನದಾಳ ಅರಿಯುವ ಏಳು ದಿನಗಳ ಈ ಕಾರ್ಯಕ್ರಮಕ್ಕೆ ಇಟ್ಟ ಹೆಸರು ‘ನನ್ನೊಳಗಿನ ನಡಿಗೆ’ (ವಾಕ್‌ ವಿತ್‌ಇನ್‌). ಯುವ ಸಮೂಹಕ್ಕೆ ಗ್ರಾಮೀಣ ಭಾರತ ಪರಿಸ್ಥಿತಿಯನ್ನು ಅರ್ಥೈಸುವುದು ಈ ಕಾರ್ಯಕ್ರಮದ ಉದ್ದೇಶ. ಮೈಸೂರು ಜಿಲ್ಲೆಯ 41 ಹಳ್ಳಿಗಳನ್ನು ಸುತ್ತಾಡುವ ಈ ನಡಿಗೆಯಲ್ಲಿ ಬೆಂಗಳೂರು, ಕೇರಳ, ಮೈಸೂರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಬಂದಿದ್ದರು.

ಎಸ್‌ವಿವೈಎಂ ಸಂಸ್ಥಾಪಕ ಡಾ. ಆರ್‌. ಬಾಲಸುಬ್ರಹ್ಮಣ್ಯಂ (ಬಾಲು) ಅವರು ಕಾರ್ಯಕ್ರಮದ ನೇತೃತ್ವವಹಿಸಿದ್ದರು. ಎಲ್ಲಾ ಸದಸ್ಯರಿಗಿಂತ ಮುಂದೆ ನಡೆಯುತ್ತಿದ್ದ ‘ಬಾಲು’ ಸರ್‌, ಹಿಂದಿರುಗಿ ನೋಡಿ, ‘ಬನ್ರಯ್ಯಾ ಬೇಗ, ಎಲ್ಲರೂ ಒಟ್ಟಿಗೆ ಸಾಗೋಣ’ ಎಂದು ಹುರಿದುಂಬಿಸುತ್ತಿದ್ದರು. ದಣಿವಾದಾಗ ಸಂಸ್ಥೆಯ ಎರಡು ವಾಹನಗಳಲ್ಲಿ ತರುತ್ತಿದ್ದ ನೀರು ಕುಡಿದು ಪಯಣ ಮುಂದುವರಿಸುತ್ತಿದ್ದೆವು.

ಮೊದಲಿಗೆ ಮೈಸೂರು ತಾಲ್ಲೂಕಿನ ಕೂರ್ಗಳ್ಳಿ ತಲುಪಿದೆವು. ಅಲ್ಲಿನ ಬಸ್‌ನಿಲ್ದಾಣ, ಅರಳಿಕಟ್ಟೆ ಮೇಲೆ ಕುಳಿತಿದ್ದ ಮುಖಂಡರನ್ನು ಮಾತನಾಡಿಸುತ್ತಾ, ಕಾಲ್ನಡಿಗೆಯ ಉದ್ದೇಶ ವಿವರಿಸಿದೆವು. ನೈರ್ಮಲ್ಯ, ಶಿಕ್ಷಣ, ನೀರಿನ ಮಹತ್ವದ ಬಗ್ಗೆ ಹೊರಡಿಸಿದ್ದ ಕರಪತ್ರಗಳನ್ನು ಅಲ್ಲಿದ್ದವರಿಗೆಲ್ಲ ವಿತರಿಸಿದೆವು. ಕೂರ್ಗಳ್ಳಿಯ ಚಿಗುರು ಆಶ್ರಮಕ್ಕೆ ತೆರಳಿ ₹2.5 ಲಕ್ಷ ದೇಣಿಗೆ ನೀಡಲಾಯಿತು. ಅಲ್ಲಿನ ನಿರಾಶ್ರಿತ ಮಹಿಳೆಯರೊಂದಿಗೆ ಸದಸ್ಯರು ಚರ್ಚಿಸಿ ಸಾಂತ್ವನ ಹೇಳಿದರು.

ಅಲ್ಲಿಂದ ಹೊರಟು ಬೆಳವಾಡಿ ಗ್ರಾಮ ತಲುಪಿದೆವು. ಅಲ್ಲಿನ ಸರ್ಕಾರಿ ಶಾಲೆ ಆವರಣದಲ್ಲಿ ಎಸ್‌ಡಿಎಂಸಿ ಹಾಗೂ ಗ್ರಾಮ ಪಂಚಾಯಿತಿಯವರು ಊಟದ ವ್ಯವಸ್ಥೆ ಮಾಡಿದ್ದರು. ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದೆವು. 60ಕ್ಕೂ ಹೆಚ್ಚು ಸದಸ್ಯರು ಮೂರು ತಂಡಗಳಾಗಿ ಒಂದೊಂದು ಹಳ್ಳಿಗಳಿಗೆ ಹೊರಟರು. ಮೊದಲ ದಿನ ನೀರು ಮತ್ತು ನೈರ್ಮಲ್ಯದ ಬಗ್ಗೆ ಜನರಿಂದ ಮಾಹಿತಿ ಪಡೆದು, ಅರಿವು ಮೂಡಿಸುವುದಾಗಿತ್ತು.

ಯುವಕರ ತಂಡದೊಂದಿಗೆ ಆರ್‌. ಬಾಲಸುಬ್ರಹ್ಮಣ್ಯಂ ಅವರು, ಬೆಳವಾಡಿಯ ಗಲ್ಲಿಗಳಿಗೆ ಹೊರಟರು. ಮನೆಯೊಂದರ ಮುಂದೆ ಪ್ಲಾಸ್ಟಿಕ್‌ ಬಕೆಟ್‌, ಸಿಮೆಂಟ್‌ ತೊಟ್ಟಿಗಳಲ್ಲಿ ತುಂಬಿದ್ದ ನೀರನ್ನು ಕಂಡು ಮನೆಯೊಡತಿಯನ್ನು ಮಾತನಾಡಿಸಿದರು. ‘ಅಕ್ಕ ನಿಮ್ಮೂರಿನಲ್ಲಿ ಎಷ್ಟು ದಿನಗಳಿಗೊಮ್ಮೆ ನೀರು ಬಿಡುತ್ತಾರೆ? ಕುಡಿಯಲು ಯೋಗ್ಯವಾ? ನೀರಿನ ತೊಟ್ಟಿಯನ್ನು ಏಕೆ ಮುಚ್ಚಿಲ್ಲ? ಎಂದು ಕೇಳಿದರು.

ಇವರ ಮಾತು ಕೇಳಿಸಿಕೊಳ್ಳುತ್ತಾ ಕೋಳಿಗೆ ಆಹಾರ ಹಾಕುತ್ತಿದ್ದ ಕಮಲಮ್ಮ, ‘ನಲ್ಲಿಯಲ್ಲಿ ಕಲುಷಿತ ನೀರು ಬರುತ್ತದೆ.‌ ಊರಿನ ಗಲೀಜು ಕೆರೆ ಸೇರಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕೆರೆ ಪಕ್ಕದಲ್ಲೇ ಮೂರು ಬೋರ್‌ಗಳನ್ನು ಕೊರೆಸಿದ್ದಾರೆ. ನೀರು ಕುಡಿಯಲು ಯೋಗ್ಯವಿಲ್ಲ, ಅದಕ್ಕೆ ಫಿಲ್ಟರ್‌ ನೀರನ್ನೇ ಹೆಚ್ಚಾಗಿ ಅವಲಂಬಿಸಿದ್ದೇವೆ’ ಎಂದು ಗ್ರಾಮದ ನೀರಿನ ಸಮಸ್ಯೆಯ ಸಮಗ್ರ ಚಿತ್ರಣ ಬಿಚ್ಚಿಟ್ಟರು.

ಊರಿನವರೊಂದಿಗೆ ಮಾತನಾಡಿದ ನಂತರ, ತಂಡದೊಂ ದಿಗೆ ಮಾತು ಆರಂಭಿಸಿದ ಬಾಲು ಅವರು, ‘ನೋಡಿ, ನೀವಿಲ್ಲಿ ಬಂದಿರುವುದು ಮೋಜಿಗಾಗಿ ಅಲ್ಲ, ಎಲ್ಲಿ ನೀರು ಕಾಣುತ್ತದೆಯೋ, ಅಲ್ಲಿ ನಿಮಗೆ ಪ್ರಶ್ನೆ ಮೂಡಬೇಕು. ಇಲ್ಲಿ ಅವರೆ ಕಾಯಿ ಬೆಳೆಯಲು ನೀರಿನ ಮೂಲ ಯಾವುದು, ಕೃಷಿಗೆ ನೀರು ಎಲ್ಲಿಂದ ಬರುತ್ತದೆ.. ಇಂಥ ಹಲವು ಸೂಕ್ಷ್ಮಗಳನ್ನು ಗಮನಿಸಬೇಕು, ಮಾಹಿತಿ ಪಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕಮಲಮ್ಮನವರ ಮಾತು ಕೇಳಿಸಿಕೊಂಡು ಬೆಳವಾಡಿ ಕೆರೆ ಸಮೀಪ ಹೋದಾಗ, ಅಲ್ಲಿ, ಕೆರೆ ನೀರು ಹಸಿರಿನಿಂದ ಕೂಡಿದ್ದು, ದುರ್ವಾಸನೆ ಬೀರುತ್ತಿತ್ತು. ಅಲ್ಲೇ ನಿಂತಿದ್ದ ಗ್ರಾಮಸ್ಥರು, ಇಡೀ ತಂಡಕ್ಕೆ ಊರಿನಲ್ಲಿರುವ ನೀರಿನ ಸಮಸ್ಯೆಯ‌ನ್ನು ಎಳೆಎಳೆಯಾಗಿ ವಿವರಿಸಿ ದರು. ಬೆಳವಾಡಿಯಿಂದ ಹೊರಟ ತಂಡ ಕೇರ್ಗಳ್ಳಿ ತಲುಪಿತು. ಎರಡನೇ ದಿನ ಕೇರ್ಗಳ್ಳಿಯಿಂದ ಪಯಣ ಮುಂದುವರಿಯಿತು.

ಗ್ರಾಮಸ್ಥರೊಂದಿಗೆ ನಡೆಸಿದ ಸಂವಾದ, ಪ್ರಶ್ನೋತ್ತರ, ಚರ್ಚೆ ಗಳನ್ನು ಗಮನಿಸುತ್ತಿದ್ದ ಯುವಕರು, ಹಳ್ಳಿಗಳು ನಗರದೊಂದಿಗೆ ವಿಲೀನವಾಗುತ್ತಿರುವುದು, ಕೈಗಾರಿಕೀಕರಣದಿಂದ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತಿವೆ ಎಂಬುದನ್ನು ಅರಿತುಕೊಂಡರು.

ಮೂರು ತಂಡಗಳು ಏಳು ದಿನಗಳ ಕಾಲ್ನಡಿಗೆಯಲ್ಲಿ 160 ಕಿ.ಮೀನಷ್ಟು ಸುತ್ತಾಡಿ 41 ಹಳ್ಳಿಗಳನ್ನು ಸಂದರ್ಶಿಸಿ ಬಂದವು. ತಂಡದ ಸದಸ್ಯರಿಗೆ ಅಭಿವೃದ್ಧಿ ಹೆಸರಿನಲ್ಲಿ ಗ್ರಾಮೀಣ ಪರಿಸರದ ಮೇಲೆ ಆಗುತ್ತಿರುವ ನಗರೀಕರಣದ ಪರಿಣಾಮ ಅರ್ಥವಾದಂತೆ ಕಂಡಿತು.

ಜನರ ಕಷ್ಟ ಅರಿತೆ

ಗ್ರಾಮದ ಆರೋಗ್ಯ ಕೇಂದ್ರಗಳು ಹೇಗಿರುತ್ತವೆ ಎಂಬುದು ಈ ನಡಿಗೆಯಲ್ಲಿ ಗೊತ್ತಾಯಿತು. ಹಳ್ಳಿ ಜನರಿಗೆ ಆರೋಗ್ಯದ ಅರಿವು ಇದೆ. ಹಾಗೆಯೇ ವೈದ್ಯರ ಕೊರತೆಯಿರುವುದು ಅರ್ಥವಾಯಿತು. ನಾನು ವಿದ್ಯಾಭ್ಯಾಸ ಮುಗಿಸಿದ ನಂತರ ಕಡ್ಡಾಯವಾಗಿ ‘ಗ್ರಾಮೀಣ ವೈದ್ಯ ಸೇವೆ’ಯಲ್ಲಿ ತೊಡಗಿಸಿಕೊಳ್ಳಬೇಕೆನಿಸಿದೆ.

ವಲ್ಲಭ ಶೇಠ್‌, ಎಂಬಿಬಿಎಸ್ ವಿದ್ಯಾರ್ಥಿ, ಬೆಂಗಳೂರು

‘ನಗರದಲ್ಲಿ ಬೆಳೆದ ನನಗೆ ಹಳ್ಳಿಯ ಚಿತ್ರಣದ ಬಗ್ಗೆ ಕೇವಲ ಪುಸ್ತಕದಲ್ಲಿ ಓದಿದ್ದೆ. ಕೆಲ ವಿಷಯಗಳನ್ನು ಪೋಷಕರು ತಿಳಿಸಿದ್ದರು. ಆದರೆ ನಡಿಗೆ ಮೂಲಕ ಹಳ್ಳಿಗಳನ್ನು ಸುತ್ತಾಡಿದ್ದು, ಅದೆಲ್ಲವನ್ನೂ ಕಣ್ಣಾರೆ ಕಾಣುವಂತಾಯಿತು. ಗ್ರಾಮಸ್ಥರ ಬದುಕು, ಬವಣೆಯನ್ನು ಹತ್ತಿರದಿಂದ ನೋಡುವ ಅವಕಾಶ ನನ್ನದಾಯಿತು.

ಸಂಜನಾ, ಯಾದವಗಿರಿ, ಮೈಸೂರು

ನಿತ್ಯ 20 ಕಿ.ಮೀ ನಡಿಗೆ

ಒಟ್ಟು 60 ರಿಂದ 70 ಯುವಕರಿದ್ದರು. ಮೂರು ತಂಡಗಳಾಗಿ ವಿಭಾಗಗೊಂಡು, ಒಂದೊಂದು ತಂಡ, ಒಂದೊಂದು ಹಳ್ಳಿಗೆ ಭೇಟಿ ನೀಡುತ್ತಿತ್ತು.

ನಿತ್ಯ 20 ಕಿ.ಮೀ ನಡಿಗೆ. ಸಂಜೆ ವಾಸ್ತವ್ಯಕ್ಕೆ ಸ್ಕೂಲು, ಸಮುದಾಯ ಭವನ, ದೇವಸ್ಥಾನದಂತಹ ಸ್ಥಳಗಳನ್ನು ಮೊದಲೇ ಪ್ಲಾನ್ ಮಾಡಿಕೊಂಡಿದ್ದರು.

ಪ್ರತಿ ದಿನ ಸಂಜೆ ವೇಳೆಗೆ ಮೂರು ತಂಡದವರು ಒಂದು ಕಡೆ ಸೇರಿ, ತಾವು ತಿಳಿದ ವಿಚಾರಗಳನ್ನು ವಿನಿಯಮ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಕಡಿಮೆ ಅವಧಿಯಲ್ಲಿ ಇಷ್ಟು ಹಳ್ಳಿಗಳನ್ನು ಭೇಟಿಯಾಗಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT