ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಶಾದ್ ಸಂಗೀತ ಯಾನ

Last Updated 24 ಜುಲೈ 2019, 19:30 IST
ಅಕ್ಷರ ಗಾತ್ರ

ಅವರ ಸಂಗೀತದ ಆಲಾಪ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ರಾಗಗಳನ್ನು ಅದರ ಭಾವಕ್ಕೆ ತಕ್ಕಂತೆ ಚೆನ್ನಾಗಿ ನಿಭಾಯಿಸಬಲ್ಲ ಸಂಗೀತ ಜ್ಞಾನ ಅವರದ್ದು. ಕೇವಲ ಶಾಸ್ತ್ರೀಯ ಸಂಗೀತವಷ್ಟೇ ಅಲ್ಲ, ಭಕ್ತಿಗೀತೆ, ವಚನ, ಭಜನ್‌ ಮತ್ತು ಭಾವಗೀತೆ ಯಾವುದನ್ನೇ ಹಾಡಿದರೂ, ಕೇಳುಗರನ್ನು ಸೆಳೆಯುಂತಹ ಹಾಡುಗಾರಿಕೆ. ಗಾಯನದಂತೆ ತಮ್ಮ ವಿನಯಪೂರ್ಣ ನಡವಳಿಕೆಯಿಂದಲೂ ಎಲ್ಲರ ಮನ ಸೆಳೆಯುವ ಯವ ಗಾಯಕ ಶಿವಮೊಗ್ಗದ ನೌಶಾದ್ ಹರ್ಲಾಪುರ.

ಹಿಂದೂಸ್ತಾನಿ ಶಾಸ್ತ್ರೀಯ ಪರಂಪರೆಗೆ ಈಗಷ್ಟೇ ತೆರೆದುಕೊಳ್ಳುತ್ತಿರುವ ನೌಶಾದ್‌, ಸಂಗೀತ ಕುಟುಂಬದ ಹಿನ್ನಲೆಯವರು. ತಂದೆ ಹೆಸರಾಂತ ಹಿಂದೂಸ್ತಾನಿ ಗಾಯಕ ಹುಮಾಯುನ್‌ ಹರ್ಲಾಪುರ್. ತಾಯಿ ದಿಲ್‌ಶಾದ್‌ ಹರ್ಲಾಪುರ್. ತಮ್ಮ ನಿಶಾದ್‌ ಹರ್ಲಾಪುರ. ಅಣ್ಣನಂತೆ ತಮ್ಮನಿಗೂ ಸಂಗೀತ ಕ್ಷೇತ್ರದಲ್ಲೇ ಮುಂದುವರಿಯುವ ಹಂಬಲ.

ಸಂಗೀತಾಭ್ಯಾಸದ ಆರಂಭ

ನೌಶಾದ್‌, ಶಿವಮೊಗ್ಗದಲ್ಲಿಯೇ ತಮ್ಮ ಪದವಿಪೂರ್ವ ಶಿಕ್ಷಣ ಮುಗಿಸಿ, ಗದಗದ ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದಲ್ಲಿ ಎಂ.ಮ್ಯೂಸಿಕ್‌ ಮಾಡಿದ್ದಾರೆ. ಪಂ. ಸೋಮನಾಥ್‌ ಮಾರಡೂರ್‌ ಇವರ ಬಳಿ ಸಂಗೀತ ಕಲಿಯುತ್ತಿದ್ದಾರೆ.

ಅಜ್ಜ ಏಕತಾರಿ ಹಿಡಿದು ಶಿಶುನಾಳ ಷರೀಫಜ್ಜನ ಪದಗಳನ್ನು ಹಾಡುತ್ತಿದ್ದರು. ಅಪ್ಪ ಹಿಂದೂಸ್ತಾನಿ ಗಾಯಕರು. ನೌಶಾದ್ ಅವರು ಬಾಲ್ಯದಿಂದಲೂ ಹಾಡುಗಳನ್ನು ಜೋಗುಳದಂತೆ ಕೇಳಿ ಬೆಳೆದರು. ಹೀಗಾಗಿ ಅವರಿಗೆ ಮನೆಯೇ ಮೊದಲ ಸಂಗೀತ ಶಾಲೆ, ಅಪ್ಪ, ಅಜ್ಜನೇ ಮೊದಲ ಸಂಗೀತ ಗುರುವಾದರು.

ಅಜ್ಜನ ಸಂಗೀತ ಪ್ರೀತಿ ಅಪ್ಪನಿಗೆ ಬಂದಿತು. ಅವರು ಪಂಡಿತ್ ಪುಟ್ಟರಾಜ ಗವಾಯಿ ಅವರ ಬಳಿ ಸಂಗೀತ ಕಲಿತಿದ್ದರು. ‘ನಾನು ಕೂಸಾಗಿದ್ದಾಗ ತಂದೆ ಎದೆಯ ಮೇಲೆ ನನ್ನನ್ನು ಮಲಗಿಸಿಕೊಂಡು ಹಾಡುತ್ತಿದ್ದರು. ಹೀಗೆ ನನ್ನ ಕಿವಿಗೆ ಬಿದ್ದ ಸ್ವರಗಳೇ ಇವತ್ತು ಸಂಗೀತಗಾರ ನನ್ನಾಗಿ ರೂಪಿಸಿವೆ’ ಎನ್ನುತ್ತಾರೆ ನೌಶಾದ್‌.

ತಂದೆಯಿಂದಲೇ ಸ್ವರಾಭ್ಯಾಸ

ತಂದೆ ಉಸ್ತಾದ್ ಹುಮಾಯುನ್‌ ಬಳಿ ಸ್ವರಾಭ್ಯಾಸ ಆರಂಭಿಸಿದ ನೌಶಾದ್ ಏಳನೇ ವಯಸ್ಸಿಗೆ ಮೊದಲ ಕಾರ್ಯಕ್ರಮ ಕೊಟ್ಟಿದ್ದಾರೆ. ನಂತರ ತಂದೆಯವರ ಜತೆ ಕಾರ್ಯಕ್ರಮಗಳಿಗೆ ಹೋಗುತ್ತಾ, ಸಂಗೀತವನ್ನೇ ಬದುಕಾಗಿಸಕೊಳ್ಳಬೇಕೆಂದು ಸಂಕಲ್ಪ ಮಾಡಿದರು. ಶ್ರದ್ಧೆ, ಪರಿಶ್ರಮದೊಂದಿಗೆ ಕಲಿಕೆಯ ಹಾದಿಯಲ್ಲಿ ಹೆಜ್ಜೆ ಹಾಕಿದರು.

ಸಂಗೀತ ಅಭ್ಯಾಸ ಮಾಡುತ್ತಲೇ ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸುವ ಜೂನಿಯರ್‌, ಸೀನಿಯರ್‌ ಹಾಗೂ ವಿದ್ವತ್‌ ಪರೀಕ್ಷೆಯಲ್ಲಿ ನೌಶಾದ್‌ ರ‍್ಯಾಂಕ್ ಪಡೆದಿದ್ದಾರೆ. ತಂದೆ ಜತೆ ಸೇರಿ ಹಾಡಿದ್ದು ಹಾಗೂ ತಮ್ಮನೊಂದಿಗೆ ಜತೆಯಾಗಿ ನಡೆಸಿಕೊಟ್ಟ ಜುಗಲ್‌ಬಂದಿ ಕಾರ್ಯಕ್ರಮಗಳೂ ಸೇರಿನೌಶಾದ್‌ ಇಲ್ಲಿಯವರೆಗೆ 500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಹೊರ ರಾಜ್ಯಗಳಲ್ಲೂ ಗಾಯನ

ಕೇವಲ ರಾಜ್ಯವಲ್ಲದೇ ರಾಷ್ಟ್ರ ಮಟ್ಟದ ಕಾರ್ಯಕ್ರಮಗಳಲ್ಲೂ ತಮ್ಮ ಸ್ವರಸುಧೆ ಹರಿಸಿದ್ದಾರೆ ಅವರು. ಪ್ರಸಿದ್ಧ ಹಿಂದೂಸ್ತಾನಿ ಗಾಯಕರ ಪುಣ್ಯತಿಥಿಗಾಗಿ ಆಯೋಜಿಸುವ ಕಾರ್ಯಕ್ರಮಗಳಲ್ಲೂ ಹಾಡಿದ್ದಾರೆ. ಗದಗದಲ್ಲಿ ಪ್ರತಿವರ್ಷ ನಡೆಯುವ ಪಂಡಿತ್ ಪುಟ್ಟರಾಜ ಗವಾಯಿ ಅವರ ಪುಣ್ಯಸ್ಮರಣೆ, ಇತ್ತೀಚೆಗೆ ಪಂಜಾಬ್‌ನಲ್ಲಿ ನಡೆದ ನಾರ್ಥ್‌ ಝೋನ್‌ ಕಲ್ಚರ್‌ ಸೆಂಟ್ರಲ್‌ ಪಟಿಯಾಲ ಅವರು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಲ್ಲಿ ಗಾಯನ ಪ್ರಸ್ತುತಪಡಿಸಿದ್ದಾರೆ. ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಮಾನಸ್‌ ಸಂಗೀತ ಸಭಾದ ಕಾರ್ಯಕ್ರಮ ಸೇರಿದಂತೆ ರಾಷ್ಟ್ರದ ವಿವಿಧ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.

‘ಸಂಗೀತ ಕಲಿಕೆಗೆ ಪ್ರೋತ್ಸಾಹ ಸಿಕ್ಕಿತು. ನನ್ನ ತಂದೆ ತಾಯಿ ಯಾವತ್ತಿಗೂ ನನಗೆ ಇಷ್ಟೇ ಅಂಕ ಗಳಿಸಬೇಕು, ಇದನ್ನೇ ಓದಬೇಕು ಎಂದು ಒತ್ತಡ ಹಾಕಲಿಲ್ಲ. ನಮ್ಮದು ಸಂಗೀತಗಾರರ ಕುಟುಂಬವಾಗಿದ್ದರಿಂದ, ನೀನೂ ಸಂಗೀತಗಾರನಾದರೇ ನಮಗೆ ಸಂತೋಷವೇ ಎಂದು ಬೆನ್ನುತಟ್ಟಿದರು. ಹೀಗಾಗಿ ಇಷ್ಟೆಲ್ಲ ಬೆಳೆಯಲು ಸಾಧ್ಯವಾಯಿತು’ ಎಂದು ನೌಶಾದ್ ತಮ್ಮ ಸಂಗೀತದ ಪಯಣವನ್ನು ವಿವರಿಸುತ್ತಾರೆ.

ರಂಗಭೂಮಿಯಲ್ಲೂ ಆಸಕ್ತಿ

ಸಂಗೀತ ಕ್ಷೇತ್ರದ ಜತೆಗೆ ರಂಗಭೂಮಿಯಲ್ಲೂ ಆಸಕ್ತಿ ಹೊಂದಿರುವ ನೌಶಾದ್, ಒಂಬತ್ತು ವರ್ಷಗಳಿಂದ ಶಿವಮೊಗ್ಗದ ಹೊಂಗಿರಣ ತಂಡದಲ್ಲಿ ಸಕ್ರಿಯರಾಗಿದ್ದಾರೆ. ನಾಲ್ಕು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಕರ್ಣಾಂತರಂಗ’, ‘ಗಂಗಾ ಲಹರಿ’, ‘ಮೃಗತೃಷ್ಣಾ’, ‘ಕಿತ್ತೂರ ನಿರಂಜನಿ’ ನಾಟಕಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ‘ಡಾ.ಸಾಸ್ವೇಹಳ್ಳಿ ಸತೀಶ್‌ ನನ್ನ ರಂಗಭೂಮಿಯ ಗುರುಗಳು’ ಎಂದು ಅಭಿಮಾನದಿಂದ ಹೇಳುತ್ತಾರೆ ಅವರು.

ಪ್ರಶಸ್ತಿ, ಪುರಸ್ಕಾರ

ನೌಶಾದ್ ಅವರ ಸಂಗೀತ ಕಲಿಕೆಗೆ 2013 ರಲ್ಲಿ ಕೇಂದ್ರದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ (ಸಿಸಿಆರ್‌ಟಿ) ವಿದ್ಯಾರ್ಥಿವೇತನ ನೀಡಿದೆ. ಇವರ ಹಾಡುಗಾರಿಕೆಗೆ ಹಲವು ಬಹುಮಾನಗಳು, ಪ್ರಶಸ್ತಿಗಳು ಅರಸಿ ಬಂದಿವೆ. 2015ರಲ್ಲಿ ಸಂಗೀತ ನಾಟಕ ಅಕಾಡೆಮಿ ಲಖನೌನಲ್ಲಿ ನಡೆಸಿದ ‘ಕ್ಲಾಸಿಕಲ್‌ ವಾಯ್ಸ್‌ ಆಫ್‌ ಇಂಡಿಯಾ’ದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

2016ರಲ್ಲಿ ಸಂಗೀತ ಮಿಲನ್‌ ಆಯೋಜಿಸಿದ್ದ ‘ಕ್ಲಾಸಿಕಲ್‌ ವಾಯ್ಸ್‌ ಆಫ್‌ ಕರ್ನಾಟಕ’ ಸ್ಪರ್ಧೆಯನ್ನೂ ಗೆದ್ದುಕೊಂಡಿದ್ದಾರೆ. 2017ರಲ್ಲಿ ನಡೆದ ರಾಷ್ಟ್ರಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ‘ಯುವ ಕಲಾಕಾರ್‌’ ಹೆಸರನ್ನೂ ಗಳಿಸಿದ್ದಾರೆ. ಇವೆಲ್ಲದರ ಜತೆಗೆ ಆಕಾಶವಾಣಿಯಲ್ಲಿ ಬಿ ಹೈ ಗ್ರೇಡ್‌ ಕಲಾವಿದರೂ ಆಗಿದ್ದಾರೆ.

‘ನಾನು ಸಣ್ಣವನಿದ್ದಾಗ ಪುಟ್ಟರಾಜ ಗವಾಯಿ ಅವರು ನನ್ನ ಹಾಡು ಕೇಳಿ ನನ್ನ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದರು. ಅದು ನನ್ನ ಜೀವನದ ಅತ್ಯಮೂಲ್ಯ ಕ್ಷಣ’ ಎನ್ನುತ್ತಾ, ಈ ಬೆಳವಣಿಗೆಯ ಹಿಂದೆ ಗುರುಹಿರಿಯರ ಹಾರೈಕೆ ಇದೆ ಎಂದು ಹೇಳುವುದನ್ನು ಮರೆಯುವುದಿಲ್ಲ ನೌಶಾದ್‌.

‘ಸಂಗೀತ ಪರಂಪರೆ ಬೆಳೆಸುವ ಹಂಬಲ’

'ಶಾಸ್ತ್ರೀಯ ಸಂಗೀತ ಕಲಿಯಲು ತಾಳ್ಮೆ ಬೇಕು. ಸಂಗೀತದ ಹಿಡಿತ ಸಿಗುವುದಕ್ಕೆ ಹಲವಾರು ವರ್ಷಗಳ ತಪಸ್ಸು ಮಾಡಬೇಕು. ಒಮ್ಮೆ ಆ ಹಿಡಿತ ಸಿಕ್ಕರೆ ಅದೇ ನಮ್ಮನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ’ ಎನ್ನುವ ನೌಶಾದ್‌ಗೆ ಭಾರತೀಯ ಸಂಗೀತ ಪರಂಪರೆಯನ್ನು ಉಳಿಸಿ, ಬೆಳೆಸಬೇಕು ಎಂಬ ಹಂಬಲವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT