ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವೆಂಬ ಅರಿವು...

teachers day special
Last Updated 4 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ನೆನೆಯಿರಿ ಗುರುಗಳ: ಗುರುಗಳನ್ನು ನೆನೆಯದ ದಿನವಿಲ್ಲ, ಆದರೆ ಗುರುವಿಗೆ ಹೇಳದ ಮತ್ತು ಹೇಳಲಾಗದ ಮಾತೊಂದು, ಮನಸಲ್ಲೆ ಹೆಪ್ಪುಗಟ್ಟುವ ಮುನ್ನ, ನಮಗೆ ಬರೆದು ಕಳುಹಿಸಿ. ನೂರಿಪ್ಪತ್ತು ಪದ ಮಿತಿ. ಜೊತೆಗೆ ನಿಮ್ಮ ಚಿತ್ರವಿರಲಿ. ಗುರುಗಳ ಚಿತ್ರವೂ ಇದ್ದರೆ ಕಳುಹಿಸಿ. ನಿಮ್ಮ ಪತ್ರ ನಮಗೆ ಸೆ.15ರೊಳಗೆ ನಮಗೆ ತಲುಪಬೇಕು. gulmohar@prajavani.co.in

ಶಿಕ್ಷಕರ ದಿನ ಅಂದಾಗ ಮೊದಲು ನೆನಪಾಗೋದು ಯಾರು?

ಗುರುವಿಗೆ ಹೇಳದೆ ಉಳಿದ ಮಾತು?

ಗುರುವಲ್ಲದ ಗುರು ಯಾರು?

ಡಿ.ಸತ್ಯಪ್ರಕಾಶ್‌
ಡಿ.ಸತ್ಯಪ್ರಕಾಶ್‌

ಮನೆಯೇ ಮೊದಲ ಪಾಠಶಾಲೆ

1. ಮೊದಲು ನನಗೆ ನನ್ನಮ್ಮ ನೆನಪಾಗುತ್ತಾರೆ. ಶಾಲೆ ಮತ್ತು ಜೀವನದ ಪಾಠ ಶುರುವಾಗುವುದು ಮನೆಯಿಂದಲೇ. ಅಲ್ಲಿ ತಾಯಿಯೇ ಮೊದಲ ಗುರು. ತಂದೆ ಸಮಾಜದಲ್ಲಿ ಹೇಗಿರಬೇಕೆಂದು ಹೇಳಿಕೊಟ್ಟ ಗುರು. ತಾಯಿ ಜೀವನದಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸಬಾರದು ಅಂತ ಹೇಳಿಕೊಟ್ಟ ಗುರು. ‘ಕುರುಡನಿಗೆ ಕಣ್ಣು ಕಾಣಲಿ, ಕಿವುಡನಿಗೆ ಕಿವಿ ಕೇಳಲಿ’ ಅನ್ನುವ ಹಾಡನ್ನು ಅಮ್ಮ ಈಗಲೂ ಹಾಡುತ್ತಿರುತ್ತಾರೆ. ಅದು ನನ್ನ ಮನದ ಮೇಲೆ ವಿಶೇಷ ಪ್ರಭಾವ ಬೀರಿದೆ.

ಇನ್ನು ನನಗೆ ಕನ್ನಡ ಪಾಠ ಹೇಳಿಕೊಟ್ಟ ವಾಸು ಮೇಷ್ಟ್ರು ಅವರನ್ನು ಮರೆಯಲಾಗದ್ದು. ವ್ಯಾಕರಣ ಕಲಿಸಿದವರು ಅವರು. ನಾಟಕಗಳ ಬಗ್ಗೆ ಆಸಕ್ತಿ ಮೂಡಿಸಿದ ಗುರು ಅಂದರೆ ನಮ್ಮ ತಾತ ಸುಬ್ಬರಾವ್ ಮೇಷ್ಟ್ರು. ಸಿನಿಮಾ ಇಂಡಸ್ಟ್ರಿ ಪರಿಚಯಿಸಿದ ಗುರು ವಿ. ಮನೋಹರ್ ಸರ್. ನಿರ್ದೇಶನದ ಪಾಠ ಹೇಳಿಕೊಟ್ಟವರು ಟಿ.ಎಸ್.ನಾಗಾಭರಣ ಸರ್‌. ಶಿಕ್ಷಕರ ದಿನ ಬಂದಾಗ ಇವರೆಲ್ಲಾ ತಪ್ಪದೇ ನೆನಪಾಗುತ್ತಾರೆ.

2. ಗುರು ಇಲ್ಲದೇ ಗುರಿ ಮುಟ್ಟುವುದು ಕಷ್ಟ. ಹಾಗಾಗಿ, ನನಗೆ ಕಲಿಸಿದ ಮತ್ತು ಪ್ರಭಾವ ಬೀರಿದ ಗುರುಗಳಿಗೆಲ್ಲಾ ‘ಥ್ಯಾಂಕ್ಸ್’ ಅಂತ ಹೇಳಲು ಇಷ್ಟಪಡ್ತೀನಿ.

3. ಚಾರ್ಲಿ ಚಾಪ್ಲಿನ್, ಸಚಿನ್ ತೆಂಡೂಲ್ಕರ್ ಮತ್ತು ಬೀಚಿ.... ಇವರು ಗುರುವಲ್ಲದ ಗುರುಗಳು. ಬದುಕು ಎಷ್ಟೇ ಕಷ್ಟದಲ್ಲಿದ್ದರೂ ಬಂದದ್ದನ್ನು ನಗುತ್ತಲೇ ಸ್ವೀಕರಿಸಿದವರು ಇವರು. ಈ ಮೂವರಲ್ಲಿ ಇದು ಸಾಮಾನ್ಯ ಗುಣ.

–ಡಿ.ಸತ್ಯಪ್ರಕಾಶ್, ಚಿತ್ರ ನಿರ್ದೇಶಕ

****

ವಾಸು ದೀಕ್ಷಿತ್, ಗಾಯಕ
ವಾಸು ದೀಕ್ಷಿತ್, ಗಾಯಕ

ಮರೆಯಲಾಗದ ಲತಾ ಟೀಚರ್

1. ಎರಡನೇ ತರಗತಿ ತನಕ ಕ್ಲಾಸ್ ಟೀಚರ್ ಆಗಿದ್ದ ಲತಾ ಮೇಡಂ ಅವರೇ ಮೊದಲು ನೆನಪಾಗುತ್ತಾರೆ. ನನ್ನ ಬರ್ತ್‌ಡೇ ಇದ್ದಾಗ ನನ್ನ ತರಗತಿಯ ಮಕ್ಕಳಿಗೆಲ್ಲಾ ಚಾಕಲೇಟ್ ಕೊಡಬೇಕಾಗಿತ್ತು. ಅಂದು ಲೆಕ್ಕ ತಪ್ಪಿ ಚಾಕಲೇಟ್ ತಂದಿದ್ದೆ. ಇನ್ನು 8–10 ಮಕ್ಕಳಿಗೆ ಸಾಲದಾಯಿತು. ಆಗ ನನಗೆ ಅಳುವೇ ಬಂದಿತ್ತು. ಆಗ ಲತಾ ಮೇಡಂ ಅವರೇ ಅಂಗಡಿಗೆ ಹೋಗಿ ಚಾಕಲೇಟ್ ತಂದುಕೊಟ್ಟು ಮಕ್ಕಳಿಗೆ ಹಂಚಲು ಹೇಳಿದರು. ಆಗ ನನಗೆ ತುಂಬಾ ಖುಷಿಯಾಯಿತು. ಟೀಚರ್ ಅಂದ್ರೆ ಬರೀ ಪಾಠ ಹೇಳಿಕೊಡೋದು ಮಾತ್ರವಲ್ಲ ಮಕ್ಕಳನ್ನು ತಮ್ಮ ಆಶ್ರಯದಲ್ಲಿರಿಸಿಕೊಳ್ಳುವುದು ಅನ್ನೋದನ್ನು ಲತಾ ಮೇಡಂ ತೋರಿಸಿಕೊಟ್ಟರು.

ಮತ್ತೊಬ್ಬರು ಪರಿಮಳಾ ಟೀಚರ್. ಹೈಸ್ಕೂಲ್‌ನಲ್ಲಿದ್ದಾಗ ನನ್ನ ತರಲೆ ಕಂಡಿದ್ದ ಅವರು ನನ್ನನ್ನು ಮನೆಗೆ ಕರೆಸಿಕೊಂಡಿದ್ದರು. ಆಗ ನನಗೆ ಎಲ್ಲಿ ಚೆನ್ನಾಗಿ ಬೈಯ್ಯುತ್ತಾರೋ ಅಂತ ಭಯವಿತ್ತು. ಆದರೆ, ಅವರು ನನ್ನ ಮತ್ತು ನಮ್ಮನೆಯ ಪರಿಸರದ ಬಗ್ಗೆ ಕೇಳಿ ತಿಳಿದುಕೊಂಡರು. ಟೀಚರ್ ಅಂದ್ರೆ ವಿದ್ಯಾರ್ಥಿ ಮಾಡಿದ ತಪ್ಪಿಗೆ ಶಿಕ್ಷೆ ಕೊಡುವುದಲ್ಲ. ಬದಲಿಗೆ ನಮ್ಮ ಹಿನ್ನೆಲೆ ಅರಿತು ನಮ್ಮನ್ನು ತಿದ್ದುವುದು ಅನ್ನುವುದನ್ನು ಪರಿಮಳಾ ಟೀಚರ್ ಮನವರಿಕೆ ಮಾಡಿಕೊಟ್ಟರು.

2.ಶಾಲೆಯಲ್ಲಿದ್ದಾಗ ಗುರುಗಳ ನಿರೀಕ್ಷೆ ತಲುಪಲಾಗಿಲ್ಲ. ಆದರೆ, ಸಂಗೀತವನ್ನೇ ವೃತ್ತಿಯನ್ನಾಗಿಸಿಕೊಂಡು ಗುರುಗಳು ಮೆಚ್ಚುವಂಥ ಸಾಧನೆ ಮಾಡ್ತೀನಿ ಅನ್ನುವ ಮಾತನ್ನು ಹೇಳಲಿಚ್ಛಿಸುತ್ತೇನೆ.

3. ಅಧ್ಯಾತ್ಮ ಗುರು ರೇಖಿ ಮಾಸ್ಟರ್ ಮತ್ತು ಸಂಗೀತ ಗುರು ಪಾರ್ವತಿ ಬೌಲ್ ನನ್ನ ಜೀವನದಲ್ಲಿ ಮಹತ್ತರ ಪಾತ್ರ ಬೀರಿದ್ದಾರೆ. ಇವರಿಬ್ಬರನ್ನು ನೆನಪು ಮಾಡಿಕೊಂಡರೆ ಸಾಕು ಮನದಲ್ಲಿ ಶಾಂತಿ, ಸಂತೋಷ ನೆಲೆಸುತ್ತೆ. ಪಾರ್ವತಿ ಮೇಡಂ ನನ್ನ ಪಾಲಿಗೆ ಶಕ್ತಿಯ ಪ್ರತೀಕ.

ಕನ್ನಡ ಅಂದ್ರೆ ಭಯವಿತ್ತು!

ಹೈಸ್ಕೂಲಿಗೆ ಬರುವ ತನಕ ನಾನು ಕನ್ನಡ ವಿಷಯದಲ್ಲಿ ತೀರಾ ಹಿಂದುಳಿದಿದ್ದೆ. ಆದರೆ, ಹೈಸ್ಕೂಲ್‌ಗೆ ಬಂದಾಕ್ಷಣ ನನಗೆ ಇಂದ್ರಾಣಿ ಅಂತ ಒಳ್ಳೆಯ ಕನ್ನಡ ಮೇಡಂ ಸಿಕ್ಕರು.

ಅವರಿಂದಾಗಿ ನನ್ನ ಕನ್ನಡ ಸುಧಾರಿಸಿತು. ಎಷ್ಟು ಸುಧಾರಿಸಿತು ಅಂದರೆ ಇತರ ವಿಷಯಗಳಲ್ಲೂ ನಾನು ಉತ್ತಮ ಅಂಕಗಳನ್ನು ಪಡೆಯತೊಡಗಿದೆ. ಇಂದಿಗೂ ಇಂದ್ರಾಣಿ ಮೇಡಂ ಅವರನ್ನು ನಾನು ಮರೆತಿಲ್ಲ.

* * *

ಹೇಮಂತ್ ರಾವ್, ಚಿತ್ರ ನಿರ್ದೇಶಕ
ಹೇಮಂತ್ ರಾವ್, ಚಿತ್ರ ನಿರ್ದೇಶಕ

ಅಪ್ಪ–ಅಮ್ಮನೆಂಬ ಗುರು...

1. ಗುರುಗಳು ಅಂದಾಕ್ಷಣ ಗಿರೀಶ್ ಕಾಸರವಳ್ಳಿ, ಜೇಕಬ್ ವರ್ಗೀಸ್, ಅನಂತ್ ನಾಗ್... ಈ ಮೂವರು ಮೊದಲು ನೆನಪಾಗುತ್ತಾರೆ. ಮೂವರಿಂದಲೂ ಹಲವು ಪಾಠ ಕಲಿತಿದ್ದೇನೆ. ಮೂವರಲ್ಲೂ ಒಳ್ಳೆಯತನವಿದೆ. ಅದುವೇ ನನಗಿಷ್ಟ.

2. ಗುರುಶಿಷ್ಯರ ಸಂಬಂಧ ಬರೀ ಮಾತಿನಲ್ಲಿ ಹೇಳಲಾಗದು. ಅದನ್ನು ಹೇಳಿದರೆ ಅದರ ಮೌಲ್ಯ ಕಮ್ಮಿಯಾಗುತ್ತದೆ. ನನ್ನ ಕೆಲಸದಲ್ಲಿ ಅವರು ಕಾಣುತ್ತಾರೆ ಅದುವೇ ನಾನು ನನ್ನ ಗುರುಗಳಿಗೆ ನೀಡುವ ಕಾಣಿಕೆ.

3. ಶಾಲೆ, ವೃತ್ತಿ ಬದುಕಿನಾಚೆಗಿನ ನನ್ನ ಗುರುಗಳು ಅಂದರೆ ನಮ್ಮಪ್ಪ–ಅಮ್ಮ. ಅಪ್ಪ ಮುರಳಿ ಮತ್ತು ಅಮ್ಮ ಕವಿತಾ ಅವರಿಂದಲೇ ನನ್ನಲ್ಲಿ ಒಳ್ಳೆಯ ಗುಣ ಬಂದಿದೆ. ಅಪ್ಪ ಮತ್ತು ಅಮ್ಮ ನನ್ನ ಜೀವನದ ಅಧ್ಯಾತ್ಮಿಕ ಮತ್ತು ನೈತಿಕ ಗುರುಗಳು. ಅವರಿಲ್ಲದೇ ನಾನಿಲ್ಲ.

* * *

ರಾಧಿಕಾ ಚೇತನ್, ನಟಿ
ರಾಧಿಕಾ ಚೇತನ್, ನಟಿ

ಮಾಧುರಿ ಮಾನಸಿಕ ಗುರು...

1. ಕಥಕ್ ಗುರುಗಳಾದ ನಿರುಪಮಾ ಮತ್ತು ರಾಜೇಂದ್ರ ಮೊದಲು ನೆನಪಾಗುತ್ತಾರೆ. ಸಿನಿಮಾ ಕ್ಷೇತ್ರದಲ್ಲಿನ ನನ್ನ ಸಾಧನೆಗೆ ಅವರೇ ಕಾರಣ. ಅವರಿಂದಲೇ ಅಭಿನಯ ಮತ್ತು ನೃತ್ಯ ಕಲಿತಿದ್ದೇನೆ. ನಾನು ಓದಿದ್ದು ಮೈಸೂರಿನ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ. ಅಲ್ಲಿನ ಇಂಗ್ಲಿಷ್‌ ಟೀಚರ್ ಉಷಾ ನೆನಪಾಗುತ್ತಾರೆ. ಅವರು ತುಂಬಾ ಸ್ನೇಹಮಯಿಯಾಗಿದ್ದರು.

ನನ್ನ ಅಕ್ಷರಗಳು ದುಂಡಗಾಗುತ್ತಿರಲಿಲ್ಲ. ಆಗ ನನ್ನ ಕನ್ನಡ ಟೀಚರ್ ಕಿವಿಹಿಂಡಿ ದುಂಡಗೆ ಬರೆಯುವುದನ್ನು ಕಲಿಸಿದರು. ಈಗ ಯಾರಾದರೂ ನನ್ನ ಅಕ್ಷರಗಳು ಚೆನ್ನಾಗಿವೆ ಅಂದಾಕ್ಷಣ ಆ ಮಿಸ್ ನೆನಪಾಗುತ್ತಾರೆ. ಅಂತೆಯೇ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ ಸರ್ವಮಂಗಳಾ ಮೇಡಂ ಅವರನ್ನು ಮರೆಯಲಾಗದು.

2. ನನ್ನ ನೃತ್ಯಗುರುಗಳು ಕಥಕ್ ಕಲಿಯುವಿಕೆ ಮುಂದುವರಿಸಿ ಅಂತ ಹೇಳಿದ್ದಾರೆ. ಆದರೆ, ಕಾರಣಾಂತರಗಳಿಂದ ಆಗುತ್ತಿಲ್ಲ. ಅದಕ್ಕಾಗಿ ಅವರ ಬಳಿ ‘ಕ್ಷಮೆ’ ಕೇಳಲು ಇಷ್ಟಪಡ್ತೀನಿ. ಇದು ನನ್ನ ಮನದಲ್ಲಿ ಗುರುಗಳಿಗೆ ಹೇಳದೇ ಉಳಿದ ಮಾತು.

3. ಬನ್ನಂಜೆ ಗೋವಿಂದಚಾರ್ಯರು ನನ್ನ ಅಧ್ಯಾತ್ಮ ಗುರು. ಅವರ ಪ್ರವಚನ ಕೇಳುವುದು ನನಗಿಷ್ಟ. ಸಿನಿಮಾ ವೃತ್ತಿಯಲ್ಲಿ ಮಾಧುರಿ ದೀಕ್ಷಿತ್ ನನ್ನ ಮಾನಸಿಕ ಗುರು. ಅವರು ನನಗೆ ರೋಲ್ ಮಾಡೆಲ್. ಅಭಿನಯ, ನೃತ್ಯದಲ್ಲಿ ಅವರನ್ನು ಮೀರಿಸುವವರಿಲ್ಲ. ಹಾಗಾಗಿ, ಮಾಧುರಿ ಅಂದ್ರೆ ನನಗಿಷ್ಟ.

* * *

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT