ಮಂಗಳವಾರ, ಫೆಬ್ರವರಿ 25, 2020
19 °C

Valentine Day | ಇಂದಿಗೂ ನಮ್ಮ ಪ್ರೀತಿಗೆ ಅವಳೇ ಉತ್ಸವ ದೇವತೆ

ವಾಲೆಂಟೈನ್‌ ಡೇ ಸ್ಪೆಷಲ್‌ Updated:

ಅಕ್ಷರ ಗಾತ್ರ : | |

ಪ್ರೇಮ ನಿವೇದನೆ

ಅದು ದೀಪಾವಳಿಯ ಸಂಜೆ ಅಣ್ಣನ ಮಗನ‌ ಜೊತೆ ಪಟಾಕಿ ಹಚ್ಚುವಾಗ ಢಂ ಎಂಬ ಶಬ್ದದ ಜೊತೆ ಅವಳು ಕಿರುಚಿದ ಶಬ್ದ ಕಿವಿಗಪ್ಪಳಿಸಿತು. ತಿರುಗಿ ನೋಡುವಷ್ಟರಲ್ಲಿ ಸೆರಗನ್ನು‌ ಕೈಲಿಡಿದ ಕೆಂಪು ಸೂರ್ಯನಂತೆ ಕೋಪಗೊಂಡ ಅವಳು‌ ನಿಂತಿದ್ದಳು. ಅಂದಹಾಗೆ ಅವಳು ನಿವೇದಿತಾ ನಮ್ಮ ಮನೆಯಿಂದ ಮೂರನೇ ಮನೆ, ಚಿಕ್ಕವರಿಂದ ಪರಸ್ಪರ ನೋಡುತ್ತಲೇ ಬೆಳೆದವರು.

ನಾವು ಒಮ್ಮೆ ಊರಹಬ್ಬದಲ್ಲಿ ಗೆಳೆಯನೊಬ್ಬನ ಜೊತೆ ಸೇರಿ ಅವಳನ್ನು ರೇಗಿಸಿದ್ದಕ್ಕಾಗಿ ನಾನೆಂದರೆ ಅಂದಿನಿಂದಲೂ ಕೋಪ ಅವಳಿಗೆ.
ಆ ಕೋಪ ಈಗ ದುಪ್ಪಟ್ಟಾಗಿ ಕಣ್ಣು ಕೆಂಪಾಗಿಸಿತ್ತು. ಕಾರಣ, ಪಟಾಕಿ ಕಿಡಿ ಅವಳ ಹೊಸ ಸೀರೆಗೆ ಸಿಡಿದು ಸುಟ್ಟಿತ್ತು ...
ಮೌನದಲ್ಲೇ ಕೋಪತೋರಿಸಿ ನನ್ನನ್ನೇ ಕೆಕ್ಕರಿಸಿ ನೋಡುತ್ತಾ ಹೊರಟ ಅವಳು ಮೊದಲಬಾರಿ ನೇರ ಮನಸ್ಸಿಗಿಳಿದುಬಿಟ್ಟಳು. ಹಿಂದಿನಿಂದಲೂ ಅವಳೆಂದರೆ ಏನೋ ಅಕರ್ಷಣೆ. ಅವಳ ಕೋಪಕ್ಕೆ ಗುರಿಯಾದರು, ಅವಳನ್ನು ಕದ್ದು ನೋಡುವಾಗ ಎಲ್ಲಿಲ್ಲದ ಖುಷಿ. ಒಮ್ಮೆ ಅವಳ ಕಾಲೇಜು ಬಳಿ ಯಾರೋ ಒಬ್ಬನ ಜೊತೆ ಮಾತನಾಡುತ್ತ ನಿಂತಿದ್ದು ನೋಡಿ ನನ್ನ ಕೋಪ ನೆತ್ತಿಗೇರಿತ್ತು. ನಂತರ ಅವನನ್ನು ಬರುವೆ ಅಣ್ಣ ಎಂದು ಮುನ್ನಡೆದಾಗ ನಕ್ಕು ಸುಮ್ಮನಾಗಿದ್ದೆ.

ಆದರೆ ಈ ಕ್ಷಣಕ್ಕೆ ಅವಳ ಮೇಲಿರುವುದು ಪ್ರೀತಿಯೇ ಎಂದು ಖಾತ್ರಿಯಾಗಿತ್ತು. ಜೊತೆಗೆ ಸುಟ್ಟ ಸೀರೆಯ ಕಾರಣ ಸಿಕ್ಕಿತ್ತು. ತಡಮಾಡಲಿಲ್ಲ ಹಬ್ಬಕಳೆದು ಮೂರು ದಿನದ ನಂತರ ಚೆಂದದ ಮೈಸೂರ್ ಸಿಲ್ಕ್ ಸೀರೆಯೊಂದನ್ನು ಅವಳಿಗೆಂದೇ ಹುಡುಕಿ ತಂದು ಜೊತೆಗೆ ಒಂದು ಹಾಳೆಯಲ್ಲಿ ನನ್ನ ಭಾವನೆಗಳನ್ನು ತುಂಬಿಸಿಕೊಂಡು ನೇರವಾಗಿ ಅವಳ ಕಾಲೇಜಿನ ಬಳಿ ಬಂದು ನಿಂತೆ. ಬಹಳ ಕಾಯ್ದ ಮೇಲೆ ಅವಳು ಬಂದಳು ಆದರೆ ಅದನ್ನು ಕೊಡುವ ಧೈರ್ಯ ನನಗಿರಲಿಲ್ಲ ...

ಆದರೆ ಅವಳಿಗೆ ಇಂದು ಹೇಳಲೇಬೇಕು ಎಂಬ ಹಠ ಮನಸ್ಸಲ್ಲಿ ಬಲವಾಯ್ತು. ಸಂಜೆ ಕಾಲೇಜು ಬಿಡುವ ಸಮಯಕ್ಕೆ ಅದೇ ಜಾಗಕ್ಕೆ ಮತ್ತೆ ಹೋಗಿ ಕಾಯುತ್ತಾ ನಿಂತೆ ನನ್ನ ಪುಣ್ಯಕ್ಕೆ ಅವಳೊಬ್ಬಳೇ ಹೊರ ಬಂದಳು. ಸೀರೆಯಿಡಿದು ನಿಂತಿದ್ದ ನನ್ನನ್ನು ಕಂಡು ನನ್ನ ಬಳಿ ಬರುತ್ತಿದ್ದಂತೆ ಅವಳ ನಡುಗೆಯ ವೇಗ ಕಡಿಮೆಯಾಯ್ತು. ನನ್ನ ಮನಸ್ಸು ಅವಳನ್ನು ಮಾತನಾಡಿಸಲು ಸಿದ್ದವಾಗಿದ್ದ ಕಾರಣ ನಾನೇ ನಿವಿ ಎಂದು ಕರೆದೆ. ಅವಳು ಏನು ಎಂದಳು. ಮೊದಲ ಸಲ ಅವಳ ಮುಖದಲ್ಲಿ ಕೊಪದ ಬದಲು ಆತಂಕವ ಕಂಡೆ...

ನಂತರ ಕೈಲಿದ್ದ ಸೀರೆಯನ್ನು ಕೊಡುತ್ತಾ ಅವತ್ತು ಪಟಾಕಿ ಕಿಡಿಯಿಂದ ನಿನ್ನ ಸೀರೆ ಸುಟ್ಟಿತಲ್ಲ ಅದಕ್ಕೆ ತಗೋ ಈ ಹೊಸ ಸೀರೆಯೆಂದೆ. ಆದರವಳು ಪರವಾಗಿಲ್ಲ ಎಂದು ಅದನ್ನು ತಿರಸ್ಕರಿಸಿ ಹೊರಡಲು ಸಿದ್ಧವಾದಾಗ ನನಗೆ ಗೊತ್ತಿಲ್ಲದೆ ಅವಳ ಕೈಹಿಡಿದು ನಿಲ್ಲಿಸಿದೆ. ಒಂದೇ ಸಮನೆ ಅವಳ ಕೈಗೆ ಪತ್ರವನ್ನಿಟ್ಟು ನನಗೆ ನೀನೆಂದರಿಷ್ಟ. ನಾನಿನ್ನನ್ನು ಪ್ರೀತಿಸುತ್ತಿದ್ದೇನೆ. ಉಳಿದದ್ದೆಲ್ಲವೂ ಈ ಪತ್ರದಲ್ಲಿದೆ ನಿನಗೆ ನಾನು ಒಪ್ಪಿಗೆಯಿದ್ದರೆ ಈ ಸೀರೆ ಉಡು ಇಲ್ಲ ಸೀರೆಯನ್ನು ಎಲ್ಲಾದರೂ ಎಸೆದುಬಿಡು ಎಂದು ಅವಳ ಕೈಗೆ ಸೀರೆ ಕೊಟ್ಟು ಅಲ್ಲಿಂದ ಕಾಲ್ಕಿತ್ತೆ. ಬಿರುಗಾಳಿಯಿಂದ ತಪ್ಪಿಸಿಕೊಂಡ ಅನುಭವ ಅದು...

ತುಂಬಾ ದಿನಗಳು ಕಳೆದವು ಅವಳು ಆ ಸೀರೆ ಉಟ್ಟಿದನ್ನು ನೋಡಲೇ ಇಲ್ಲ. ಎಲ್ಲಾ ಮುಗಿಯಿತೆಂದು ಸುಮ್ಮನಾಗುಷ್ಟರಲ್ಲಿ ಅದೊಂದು ದಿನ ಸಂಕ್ರಾಂತಿ ಹಬ್ಬದಂದು ಊರ ಹಸುಗಳನ್ನೆಲ್ಲ ಒಟ್ಟಿಗೆ ಕಿಚ್ಚು ಹಾಯಿಸುವ ಸ್ಥಳಕ್ಕೆ  ನೋಡಲೆಂದು ಹೋದಾಗ ಅಲ್ಲಿ ನನಗೆ ತಲೆತಿರುಗುವಂತಹ ಅಚ್ಚರಿಯೊಂದು ಕಾದಿತ್ತು. ಕಾರಣ, ಅವಳಲ್ಲಿಗೆ ಬಂದಿದ್ದಳು. ಅಷ್ಟೇ ಅಲ್ಲ ನಾ ಕೊಟ್ಟ ಸೀರೆಯುಟ್ಟು ಬಂದಿದ್ದಳು. ಆ ಸಂತೋಷನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ...

ನಂತರ ಅವಳು ನೇರವಾಗಿ ಬಂದು ಒಪ್ಪಿಗೆ ಸೂಚಿಸಿದಳಲ್ಲದೆ, ಈ ಮೊದಲೇ ಅವಳಿಗೂ ನನ್ನ ಮೇಲೆ ಒಲವಿದ್ದ ವಿಚಾರವನ್ನು ನಾಚಿಕೆಯಿಂದಲೇ ಹೇಳಿದಳು. ವರ್ಷಗಳು‌ ಕಳೆಯಿತು ಇಂದಿಗೂ ನಮ್ಮ ಪ್ರೀತಿಗೆ ಪ್ರತಿದಿನವು ಉತ್ಸವ ದೇವತೆಯವಳೇ "ನನ್ನ ನಿವೇದಿತಾ" ....

-ಪ್ರತಾಪ್ ಎಂ.ಆರ್‌

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು