ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಾಪ್ಯದ ಊರುಗೋಲು ವಾಟ್ಸ್‌ಆ್ಯಪ್‌

Last Updated 20 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಅಪರಿಚಿತ ದೂರವಾಣಿಯ ಸಂಖ್ಯೆಯಿಂದ ಕಳೆದ ವಾರ ನನ್ನ ಮೊಬೈಲ್‌ಗೆ ಬಂದ ಸಂದೇಶವೊಂದನ್ನು ತಕ್ಷಣದಲ್ಲಿ ‘ಅಳಿಸಬೇಕೆ’, ‘ಉಳಿಸಬೇಕೆ’ ಎನ್ನುವುದರ ಗೊಂದಲ ಕೊಂಚ ಹೆಚ್ಚಾಗಿಯೇ ಇತ್ತು. ದಿನನಿತ್ಯವೂ ಹೀಗೆ ಬರುವ ಸಂದೇಶಗಳನ್ನು ತಕ್ಷಣದಲ್ಲಿ ಡಿಲೀಟ್‌ ಮಾಡುವುದು ಹೊಸ ನಮೂನೆಯ ಕೈಗುಣವಾಗಿದ್ದರಿಂದಲೋ ಏನೋ ಅಳಿಸಬಿಡುವ ತವಕ ಕೈಬೆರಳನಿದು. ಆದರೆ ಒಲ್ಲೆನೆಂದು ಹಿಂದೆ ಸರಿದಂತ್ತಿತ್ತು ಮನಸ್ಸು. ಅಂತೂ ಹಲವಾರು ಗಂಟೆಗಳ ಸಮಯ ಸುಮ್ಮನಿದ್ದು ಬೇಕಾಬಿಟ್ಟಿ ಬಂದಿದ್ದ ಸಂದೇಶಗಳನ್ನು ಒಟ್ಟಾರೆ ಡಿಲೀಟ್‌ ಮಾಡುವ ಸಮಯದಲ್ಲಿ ಜಿಜ್ಞಾಸೆ ಮೂಡಿಸಿದ್ದ ಸಂದೇಶದತ್ತ ನಿಗಾ ಹೋಗುವಂತೆ ಮಾಡಿದ್ದು ಮೊಬೈಲಿನ ತೆರೆಯ ಮೇಲೆ ಮೂಡಿದ್ದ ವಾಟ್ಸ್‌ಆ್ಯಪ್‌ ಸೂಚನೆ. ಅದು ‘ಮಾನಸಗಂಗೋತ್ರಿ’ ಬ್ಯಾಚ್‌ ಎನ್ನುವ ಎರಡೇ ಪದಗಳ ಶೀರ್ಷಿಕೆ. ಗಳಿಗೆಗಿಂತಲೂ ಕಡಿಮೆ ಸಮಯದಲ್ಲಿ ಗಮನ ಸೆಳೆದ ಈ ಶೀರ್ಷಿಕೆಯನ್ನು ತೆಗೆದಾಗ ಐವತ್ತು ವರ್ಷಗಳ ಹಿಂದೆ ಜೊತೆಯಲ್ಲಿದ್ದ ಕಾಲೇಜಿನ ಸಹಪಾಠಿಗಳೆಲ್ಲರನ್ನು ಒಟ್ಟುಗೂಡಿಸಬೇಕೆಂಬ ಹಂಬಲದ ವಾಟ್ಸ್‌ಆ್ಯಪ್‌ ಗುಂಪು(ಗ್ರೂಪ್)ನಿಂದ ಬಂದ ವಿನಂತಿ. ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗವೊಂದರ ತರಗತಿಯಲ್ಲಿದ್ದ ಇಪ್ಪತ್ತು–ಇಪ್ಪತ್ತೈದು ಸಹಪಾಠಿಗಳನ್ನು ಹುಡುಕಾಡುವ ಉದ್ದೇಶ ಮೂಡಿದ್ದು ಒಂದಿಬ್ಬರಲ್ಲಿ. ದೇಶ–ವಿದೇಶಗಳಲ್ಲಿ ಚದುರಿ ಚೆಲ್ಲಾಪಿಲ್ಲಿಯಾಗಿರುವವರನ್ನು ಒಂದೆಡೆಗೆ ಸೇರಿಸುವ ಹರಸಾಹಸವದು. ಎಪ್ಪತ್ತರ ವಯೋಮಾನದ ಆಸುಪಾಸಿನಲ್ಲಿರುವವರು ಇಪ್ಪತ್ತರ ಪ್ರಾಯತದತ್ತ ಸಾಗುವ ಅತಿ ಪ್ರಯಾಸದ ಮಾನಸಿಕ ಉತ್ಖನನ.

ಆದರೆ ಇದು ಸಾರಾಗವಾಗಿ ಸಾಗುವಂತೆ ಮಾಡಿದ್ದು ಆಧುನಿಕ ಮೊಬೈಲ್‌ ತಂತ್ರಜ್ಞಾನದ ಕೊಡುಗೆಯಾದ ವಾಟ್ಸ್‌ಆ್ಯಪ್‌ ಸಂದೇಶದ ಸೌಲಭ್ಯಗಳು. ಆ ಎರಡು ವರ್ಷದ ಕಾಲೇಜಿನ ದಿನಗಳು ಕೇವಲ ದಿನಗಳಷ್ಟೇ ಆಗಿರಲಿಲ್ಲವೆನ್ನುವುದನ್ನು ಐವತ್ತು ವರ್ಷಗಳ ನಂತರವೂ ಹೊರಹೊಮ್ಮಿಸಿದ ರೀತಿಯು ಮನುಷ್ಯಜೀವಿಯ ಮೆದುಳು ಎಂತೆಂಥ ಭಾವನಾತ್ಮಕ ಬಲಗಳ ಗುಡಾಣವಾಗಿರಬಲ್ಲದೆನ್ನವುದು. ವ್ಯಕ್ತಿಯೊಬ್ಬರ ಜೀವಮಾನದ ಕಟ್ಟಕೊನೆಯ ಹಂತದಲ್ಲಿ ಮತ್ತೊಮ್ಮೆ ಹೊಸಚಿಗುರಿನಂತೆದ್ದು ಬರುವ ನೆನಪುಗಳು ಗತಿಸಿದ ಜೀವಮಾನದುದ್ದಕ್ಕೂ ಎದುರಾದ ಸಂತೋಷ, ಸಂಕಟ, ಸಾಧನೆ, ಕೊರತೆ, ಸೋಲು, ಗೆಲವುಗಳ ಸಂಗ್ರಹಿತ ಅನುಭವಗಳೆಲ್ಲವನ್ನು ಒಮ್ಮೆಲೇ ಪಕ್ಕಕ್ಕೆ ತಳ್ಳಿತ್ತು. ಹದಿಹರೆಯ ಮುಗಿದ ತಕ್ಷಣದ ಕಾಲಘಟ್ಟವನ್ನು ಸರಾಗವಾಗಿ ಮೇಲ್ಮನಕ್ಕೆ ಎಳೆದು ತಂದಿಟ್ಟು ವೃದ್ಧಾಪ್ಯವೆನ್ನುವುದು ಜೀವಕೋಶಗಳ ಅವರೋಹಣವಷ್ಟೇ ಹೊರತು ಮನದಾಳದ ಸರಕುಗಳಿಗಿದು ಅನ್ವಯಿಸದು ಎನ್ನುವುದನ್ನು ಸ್ಪಷ್ಟಪಡಿಸಿತ್ತು. ಈ ಭಾವಗಳನೇನೂ ಅಪರೂಪ ಅಥವಾ ಅಪರಿಚಿತವಲ್ಲದಿದ್ದರೂ ಅವುಗಳಿಂದಾಗುವ ಮಾನಸಿಕ ಬದಲಾವಣೆಗಳು ಹೃದಯವನ್ನು ತಟ್ಟುವಂಥದ್ದು. ಇಂತಹದೊಂದು ಸ್ಥಿತಿಯನ್ನು ಮರುರಚಿಸುವುದಕ್ಕೆ ಈ ವಾಟ್ಸ್‌ಆ್ಯಪ್‌ ಗುಂಪು ಪ್ರೇರಣೆಯಾಯಿತು ಎನ್ನುವುದೇ ಸಂತಸದ ವಿಷಯ. ಬಹುಶಃ ಇಂತಹ ಅನುಭವಗಳನ್ನು ಸವಿಯುವ ಸಲುವಾಗಿಯೇ ರೂಪುಗೊಂಡಿದೆ ವಾಟ್ಸ್‌ಆ್ಯಪ್‌ ಸಂದೇಶದ ವ್ಯವಸ್ಥೆ ಎನ್ನಲೂಬಹುದು.

ಹದಿಹರೆಯವನ್ನು ದಾಟುತ್ತಿದ್ದ ಸಮಯದ ಎರಡು ವರ್ಷಗಳಲ್ಲಿ ಸಹಪಾಠಿಗಳಾಗಿದ್ದವರು, ಸುಮಾರು ಐವತ್ತು ವರ್ಷಗಳ ಕಾಲ ಸಂಪರ್ಕದಲ್ಲಿಯೇ ಇರದಿದ್ದವರು, ಏಕಾಏಕಿ ಸಂಪರ್ಕಕ್ಕೆ ಬಂದಾಗ ವಿನೂತನ ಮನಃಸ್ಥಿತಿಯು ರೂಪುಗೊಳ್ಳಬಲ್ಲದೆನ್ನುವುದಕ್ಕೆ ಈ ವಾಟ್ಸ್‌ಆ್ಯಪ್‌ ಗುಂಪೇ ಸಾಕ್ಷಿ. ಅದು ರೂಪುಗೊಂಡ ಇಪ್ಪತ್ತನಾಲ್ಕು ತಾಸುಗಳಲ್ಲಿ ಸಹಪಾಠಿಗಳ ವೃತ್ತಿ, ವಿವಾಹ, ಮಕ್ಕಳು, ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆ, ನೋವು, ಹಿತಗಳೆಲ್ಲದರ ತುಣುಕುಗಳು ಬಲವಾದ ಆತ್ಮೀಯತೆ, ಮಾನವೀಯತೆಯ ಭಾವನೆಗಳನ್ನು ಹೊರತಂದಿದ್ದವು. ವಿದ್ಯಾರ್ಥಿಯಾಗಿದ್ದಾಗಲೇ ವಿವಾಹವಾಗಿದ್ದ ಸಹಪಾಠಿಯ ಪತಿ ತೀರಿಕೊಂಡಿದ್ದ ವಿಷಯ, ಅದರ ಜೊತೆಯಲ್ಲಿಯೇ ಎನ್ನುವಂತೆ ಅಳಿಯನ ಸಾವು ಒಬ್ಬರ ನೋವಿನ ಅನುಭವವಾಗಿದ್ದರೆ, ಇನ್ನೊಬ್ಬರದು ಐದು ದಶಕಗಳ ಅವಧಿಯಲ್ಲಿ ಶರೀರದ ಅವಯಗಳೆಲ್ಲವು ಒಂದಲ್ಲ ಒಂದು ರೀತಿಯಲ್ಲಿ ರಿಪೇರಿಯಾಗಿದ್ದರೂ ಉತ್ಸಾಹ, ಉಲ್ಲಾಸಗಳೇನು ಕುಂದದಂತೆ ಕಾಪಾಡಿಕೊಂಡಿದ್ದ ಮನೋಚೈತನ್ಯ. ಹೀಗೆ, ವೇಗವಾಗಿ ವೃದ್ಧಿಸುತ್ತಿದ್ದ ವಯೋಮಾನದಲ್ಲಿಯೂ ಪ್ರತಿಯೊಬ್ಬರ ಗತಯೌವನದ ಅನುಭವಗಳನ್ನು ಮತ್ತೆ ಚಿಗುರುವಂತೆ ಮಾಡಿದ್ದು ಆಧುನಿಕ ತಂತ್ರಜ್ಞಾನದ ಸಲಕರಣೆ, ಸೌಲಭ್ಯಗಳು ಎನ್ನುವುದನ್ನಂತೂ ಅಲ್ಲಗೆಳೆಯುವಂತಿಲ್ಲ.

ನಮ್ಮ ನರಮಂಡಲದ ಪಾತಾಳದಲ್ಲಿ ಊಹಿಸಲೂ ಆಗದಷ್ಟು ಪ್ರಮಾಣದಲ್ಲಿ ನೆನಪಿಗೆ ಬರುವಂತಹ ಹಿತಾಹಿತ ಸಂಗತಿಗಳು ಅವಿತುಕೊಂಡಿರುತ್ತವೆ. ಆದರೆ ಇವುಗಳನ್ನು ಹೊರತರುವ ಪ್ರೇರಣೆ ಮತ್ತು ಉದ್ದೇಶ ಬಹುಮುಖ್ಯ. ದ್ವೇಷ, ಅಸೂಯೆ, ಅಸಹಾಯಕತೆ, ದಂತಕತೆಗಳನ್ನೂ ಇದು ಅನಾಯಾಸವಾಗಿ ಪ್ರಸರಣಗೊಳಿಸಬಲ್ಲದು. ಒಟ್ಟಿನಲ್ಲಿ ಹೇಳುವುದಾದರೆ, ಬೃಹನ್‌ ಮತಿಗೊಳಿಸಿಕೊಳ್ಳಲು ಮತಿ ವಿಸ್ತಾರವಾಗಬೇಕು; ಇದಕ್ಕೆ ಬೇಕೇ ಬೇಕು ನೆನಪುಗಳು. ವಯಸ್ಸು ಕಳೆದಂತೆಲ್ಲಾ ನೋವುಗಳ ನೆನಪುಗಳು ಅಸಹಾಯಕತೆಯನ್ನು ಹುಟ್ಟಿಸುವುದು ಸಹಜ. ಆದರೆ ಹದಿಹರೆಯದ ಸಮಯದಲ್ಲಿನ ಅಥವಾ ವಿದ್ಯಾರ್ಥಿದಿಸೆಯನ್ನು ನೆನಪಿಸಿಕೊಳ್ಳುವ ವಾಟ್ಸ್‌ಆ್ಯಪ್‌ ಗುಂಪುಗಳು ಮನೋವಿಲಾಸವನ್ನು ತರಬಲ್ಲದು. ಅದರಲ್ಲಿಯೂ ಮಾನಸಿಕವಾಗಿ ಕುಂದುತ್ತಿರುವ ಹಿರಿಯ ಜೀವಿಗಳಿಗೆ ಇಂತಹದೊಂದು ಸೌಲಭ್ಯದಿಂದ ಸಿಗುವ ನೆಮ್ಮದಿ ಅಮೋಘ.

(ಲೇಖಕ: ಮನೋವಿಜ್ಞಾನಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT