ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಗುಪ್ತಚರ, ಜೆಡಿಎಸ್‌ ಸಮೀಕ್ಷೆಯಲ್ಲಿ ನಿಖಿಲ್‌ಗೆ ಹಿನ್ನಡೆ; ಸಿಎಂ ಗರಂ?

Last Updated 27 ಏಪ್ರಿಲ್ 2019, 13:13 IST
ಅಕ್ಷರ ಗಾತ್ರ

ಮಂಡ್ಯ: ಗುಪ್ತಚರ ಇಲಾಖೆ ಹಾಗೂ ಜೆಡಿಎಸ್‌ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಅವರಿಗೆ ಹಿನ್ನಡೆಯಾಗುವ ವರದಿ ಬಂದಿದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶಾಸಕರ ಮೇಲೆ ಅಸಮಾಧಾನಗೊಂಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಮಳವಳ್ಳಿ, ಮದ್ದೂರು ಹಾಗೂ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ. ಮಳವಳ್ಳಿ ತಾಲ್ಲೂಕಿನಲ್ಲಿ ಹಲಗೂರು ಹೋಬಳಿ ಹೊರತುಪಡಿಸಿ ಉಳಿದೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಮುನ್ನಡೆ ಸಾಧಿಸಿದ್ದಾರೆ. ಅಂಬರೀಷ್‌ ತವರು ಮದ್ದೂರು ತಾಲ್ಲೂಕಿನ ಎಲ್ಲಾ ಹೋಬಳಿಯಲ್ಲಿ ನಿಖಿಲ್‌ಗೆ ಹಿನ್ನಡೆಯಾಗಲಿದೆ. ಮಂಡ್ಯ ನಗರ ಸೇರಿ ಇಡೀ ತಾಲ್ಲೂಕಿನಲ್ಲಿ ನಿಖಿಲ್‌ ಹಿನ್ನಡೆ ಅನುಭವಿಸಲಿದ್ದಾರೆ ಎಂಬ ವರದಿ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆ ಮುಗಿದ ನಂತರ ಜೆಡಿಎಸ್‌ ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲೂ ಈ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗೆ ನಷ್ಟವಾಗುವ ಸಾಧ್ಯತೆ ಇದೆ ಎಂಬ ವರದಿ ಬಂದಿದೆ. ಇದರಿಂದ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಮಳವಳ್ಳಿ ಶಾಸಕ ಡಾ.ಕೆ.ಅನ್ನದಾನಿ, ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಹಾಗೂ ಮಂಡ್ಯ ಶಾಸಕ ಎಂ.ಶ್ರೀನಿವಾಸ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ಕಾಂಗ್ರೆಸ್‌ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಕುತೂಹಲಕ್ಕೆ ಕಾರಣವಾಗಿದೆ.

ಜೆಡಿಎಸ್‌ ಅಧಿಕೃತವಾಗಿ ಬಿಡುಗಡೆ ಮಾಡಿರುವ ಸಮೀಕ್ಷೆಯಲ್ಲಿ ನಿಖಿಲ್‌ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಮುಖಂಡರು ಅಪಾರ ಆತ್ಮವಿಶ್ವಾಸದಿಂದ ಇದ್ದಾರೆ. ಆದರೆ ಈ ನಡುವೆ ಗುಪ್ತಚರ ಇಲಾಖೆ ಹಿನ್ನಡೆಯ ವರದಿ ನೀಡಿರುವುದು ಜೆಡಿಎಸ್ ಶಾಸಕರಿಗೆ ನುಂಗಲಾಗದ ತುತ್ತಾಗಿದೆ.

‘ನಿಖಿಲ್‌ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ನಾನು ಈಗಾಗಲೇ ಘೋಷಣೆ ಮಾಡಿದ್ದೇನೆ. ಎಲ್ಲಾ ಕ್ಷೇತ್ರಗಳಲ್ಲೂ ನಿಖಿಲ್‌ಗೆ ಬಹುಮತ ಬರುವುದು ನಿಶ್ಚಿತ. ಗುಪ್ತಚರ ಇಲಾಖೆ ವರದಿ, ಸಮೀಕ್ಷೆಗಳ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಲೋಕಸಭಾ ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT