ಬುಧವಾರ, ಆಗಸ್ಟ್ 17, 2022
26 °C
ಹಿರಣ್ಯಪಲ್ಲಿ ಗ್ರಾಮದಲ್ಲಿ ಸಾಕಾಣಿಕೆ ಕೇಂದ್ರ ತೆರೆದ ಮೆಕ್ಯಾನಿಕಲ್ ಎಂಜಿನಿಯರ್‌

ಎಂಜಿನಿಯರ್‌ ಆಗಿದ್ದರೂ, ಬದುಕು ಕಟ್ಟಿಕೊಟ್ಟಿದ್ದು 'ಕಡಕ್‌ನಾಥ್ ಕೋಳಿ'!

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಟ್ರಾವೆಲ್ಸ್, ಚಿಟ್ ಫಂಡ್ ಹಾಗೂ ವ್ಯಾಪಾರ ಮಾಡಿ ಕೈಸುಟ್ಟುಕೊಂಡು ಜೀವನದಲ್ಲಿ ನಿರಾಸೆಯಾಗಿ ಆಶ್ರಮ ಸೇರಿಕೊಂಡಿದ್ದ ಎಂಜಿನಿಯರಿಂಗ್ ಯುವ ಪದವೀಧರಯೊಬ್ಬರು ಕಡಕ್‌ನಾಥ್ ಕೋಳಿ ಸಾಕಾಣಿಕೆ ಮಾಡಿ ಕೈತುಂಬ ಹಣ ಸಂಪಾದಿಸುತ್ತಿದ್ದಾರೆ. 

ತಾಲ್ಲೂಕಿನ ಹಿರಣ್ಯಪಲ್ಲಿ ಗ್ರಾಮದ ಮೆಕಾನಿಕಲ್ ಎಂಜಿನಿಯರ್ ವಿಜಯಕುಮಾರ್ ಕಡಕ್‌ನಾಥ್ ಕೋಳಿ ಸಾಕಾಣಿಕೆ ಮಾಡಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ. ಎಂಜಿನಿಯರಿಂಗ್ ಪದವಿ ಪಡೆದು ಚಿಂತಾಮಣಿಯಲ್ಲಿ ನೆಲೆಸಿ ಸ್ವಂತ ವ್ಯಾಪಾರ ನಡೆಸಲು ಪ್ರಾರಂಭಿಸಿದರು. ಅದೃಷ್ಟ ಕೈಕೊಟ್ಟಿತು. ವ್ಯಾಪಾರ ವಹಿವಾಟಿನಲ್ಲಿ ನಷ್ಟ ಅನುಭವಿಸಿ ಜೀವನದಲ್ಲಿ ಜಿಗುಪ್ಸೆಗೊಂಡು ವಿಜಯವಾಡದ ಬಳಿ ಆಶ್ರಮಕ್ಕೆ ಸೇರಿಕೊಂಡರು. ಆಶ್ರಮದಲ್ಲಿ 3 ವರ್ಷ ಕಳೆದ ನಂತರ ಮತ್ತೆ ಮನಸ್ಸು ಬದಲಾಯಿಸಿಕೊಂಡು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸು ಕಟ್ಟಿಕೊಂಡು ಉತ್ಸಾಹದಿಂದ ಗ್ರಾಮಕ್ಕೆ ವಾಪಸ್ ಬಂದರು. ವ್ಯಾಪಾರ ಕೈಬಿಟ್ಟು ಕುಟುಂಬದವರಿಗೆ ಒತ್ತಾಸೆಯಾಗಿ ನಿಂತರು.

ಆಶ್ರಮದಲ್ಲಿದ್ದಾಗ ಆ ಭಾಗದಲ್ಲಿ ಕಡಕ್‌ನಾಥ್ ಕೋಳಿ ಬಗ್ಗೆ ಸ್ವಲ್ಪ ಮಾಹಿತಿ ಇತ್ತು. ಯೂಟ್ಯೂಬ್ ಮುಖಾಂತರವೂ ಸಾಕಷ್ಟು ಮಾಹಿತಿ ಪಡೆದುಕೊಂಡು ಕಡಕ್‌ನಾಥ್ ಕೋಳಿ ಸಾಕಾಣಿಕೆ ಮಾಡುವ ನಿರ್ಧಾರ ಕೈಗೊಂಡರು. ಹಿರಣ್ಯಪಲ್ಲಿ ಸಮೀಪವೇ ಇರುವ ಬಚ್ಚವಾರಪಲ್ಲಿ ಗ್ರಾಮದ ಬಳಿಯ ಸ್ವಂತ ಜಮೀನಿನಲ್ಲಿ ಫ್ರೆಂಡ್ಸ್ ಆರ್ಗಾನಿಕ್ ಫಾರ್ಮಿಂಗ್ ಕೋಳಿ ಆರಂಭ ಮಾಡಿದರು. ಮಧ್ಯಪ್ರದೇಶದಿಂದ ಕಪ್ಪುಬಣ್ಣದ ಕಡಕ್‌ನಾಥ್ ತಳಿಯ ಕೋಳಿ ಮರಿಗಳನ್ನು ತಂದು ಸಾಕಾಣಿಕೆ ಮಾಡುತ್ತಿದ್ದಾರೆ. ‘ಈ ಕೋಳಿ ರೈತರು ಮನೆಗಳಲ್ಲಿ ಸಾಕುತ್ತಿದ್ದ ನಾಟಿ ಕೋಳಿಯಂತೆ ಕಪ್ಪುಬಣ್ಣ ಹೊಂದಿರುತ್ತದೆ. ಇದರ ಮೂಲ ಮಧ್ಯಪ್ರದೇಶ. ಇದರಲ್ಲಿ ಕೊಬ್ಬಿನ ಅಂಶ ಕಡಿಮೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಔಷಧೀಯ ಗುಣಗಳನ್ನು ಹೊಂದಿದ್ದು ಬಿ.ಪಿ, ಸಕ್ಕರೆ ಕಾಯಿಲೆ ಸೇರಿದಂತೆ ಹಲವು ಕಾಯಿಲೆಪೀಡಿತರಿಗೆ ಉತ್ತಮ ಆಹಾರವಾಗಿದೆ’ ಎನ್ನುತ್ತಾರೆ ವಿಜಯಕುಮಾರ್.

ಕಡಕ್‌ನಾಥ್ ಕೋಳಿ ಸಾಕಾಣಿಕೆ ಸುಲಭ. ಇದಕ್ಕೆ ವಾಣಿಜ್ಯ ಆಹಾರ ಅಗತ್ಯವಿಲ್ಲ. ನಾಟಿ ಕೋಳಿಗಳ ರೀತಿಯಲ್ಲಿ ಅಕ್ಕಿ, ರಾಗಿ, ಗೋಧಿ, ಮನೆಯಲ್ಲಿ ಉಳಿದ ತರಕಾರಿ, ಆಹಾರ ಪದಾರ್ಥಗಳನ್ನು ಉಪಯೋಗಿಸಬಹುದು. ಹೊರಗಡೆಯು ಬಿಡಬಹುದು.

ರೋಗರುಜಿನು ತುಂಬಾ ಕಡಿಮೆ. ಸಾಕಾಣಿಕೆ ಖರ್ಚು ಕಡಿಮೆಯಾಗುವುದರಿಂದ ಹೆಚ್ಚು ಲಾಭದಾಯಕ. ಕೋಳಿ 5 ತಿಂಗಳಿಗೆ ಕಟಾವಿಗೆ ಬರುತ್ತದೆ. ಒಂದು ಕೋಳಿ 1 ಕೆಜಿ ಯಿಂದ 1.5 ಕೆ.ಜಿ ತೂಕ ಬರುತ್ತದೆ. ಸದ್ಯಕ್ಕೆ ಇವರ ಫಾರಂ ನಲ್ಲಿ 8,000 ಕೋಳಿಗಳಿವೆ. 1 ಕೆ.ಜಿ ಕೋಳಿಗೆ ₹ 800 ಹಾಗೂ ಒಂದು ಮೊಟ್ಟೆ ₹ 50 ಬೆಲೆ ಇದೆ. ಪ್ರತಿ ಭಾನುವಾರ ಮತ್ತು ಮಂಗಳವಾರ ಮಾಂಸ ಮತ್ತು ಮೊಟ್ಟೆಯನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ.

ಆಸಕ್ತಿಯುಳ್ಳವರಿಗೆ ಕಡಕ್‌ನಾಥ್ ಕೋಳಿ ಸಾಕಾಣಿಕೆ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಲಾಗುವುದು. ಸಾಕಾಣಿಕೆಗೆ ಮರಿಗಳನ್ನು ಸರಬರಾಜು ಮಾಡುವುದಾಗಿ ವಿಜಯಕುಮಾರ್ ಹೇಳುತ್ತಾರೆ. ಹಲವಾರು ತರಬೇತಿ ಕೇಂದ್ರದವರು ಹಾಗೂ ರೈತರು ಅವರ ಫಾರಂಗೆ ಭೇಟಿ ನೀಡಿ ಕೋಳಿ ತಳಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗೆ 83677 28854 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು